ADVERTISEMENT

ರಾಜ್ಯದ ವಿವಿಧೆಡೆ ಗುಡುಗು, ಸಿಡಿಲು ಸಹಿತ ಮಳೆ

ಸಿಡಿಲು ಬಡಿದು ಮಾವ–ಅಳಿಯ ಸೇರಿದಂತ ಐದು ಮಂದಿ ಸಾವು

​ಪ್ರಜಾವಾಣಿ ವಾರ್ತೆ
Published 21 ಮೇ 2019, 18:30 IST
Last Updated 21 ಮೇ 2019, 18:30 IST
ಚಿಕ್ಕಮಗಳೂರಿನ ಹನುಮಂತಪ್ಪ ವೃತ್ತದಲ್ಲಿ ಮಂಗಳವಾರ ಸಂಜೆ ಮಳೆಯಲ್ಲಿ ವಿದ್ಯಾರ್ಥಿನಿಯರು ಛತ್ರಿ ಹಿಡಿದು ಸಾಗಿದರು.
ಚಿಕ್ಕಮಗಳೂರಿನ ಹನುಮಂತಪ್ಪ ವೃತ್ತದಲ್ಲಿ ಮಂಗಳವಾರ ಸಂಜೆ ಮಳೆಯಲ್ಲಿ ವಿದ್ಯಾರ್ಥಿನಿಯರು ಛತ್ರಿ ಹಿಡಿದು ಸಾಗಿದರು.   

ಬೆಂಗಳೂರು: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಂಗಳವಾರ ಗುಡುಗು–ಸಿಡಿಲು, ಆಲಿಕಲ್ಲು ಸಹಿತ ಮುಂಗಾರು ಪೂರ್ವ ಮಳೆಯಾಗಿದ್ದು, ಸಿಡಿಲು ಬಡಿದು ವಿವಿಧೆಡೆ ಐವರು ಮೃತಪಟ್ಟಿದ್ದಾರೆ.

ಚಿಕ್ಕಮಗಳೂರು ನಗರ ಮತ್ತು ಸುತ್ತಮುತ್ತಲಿನ ಪ್ರದೇಶ, ಕಡೂರು ತಾಲ್ಲೂಕಿನ ವಿವಿಧೆಡೆ ಸಾಧಾರಣ ಮಳೆಯಾಗಿದೆ.

ಕೊಡಗು, ಚಾಮರಾಜನಗರ ಮೈಸೂರು ಜಿಲ್ಲೆಗಳಲ್ಲಿಯೂ ಉತ್ತಮ ಮಳೆಯಾಗಿದ್ದು, ಕೆರೆ–ಕಟ್ಟೆಗಳಿಗೆ ನೀರು ಹರಿದು ಬಂದಿದೆ. ಕಾಫಿ, ಕಾಳುಮೆಣಸು ಬೆಳೆಗಾರರಲ್ಲಿ ಹರ್ಷ ಮೂಡಿದೆ.

ADVERTISEMENT

ಕೊಡಗು ಜಿಲ್ಲೆಯ ಮೂರ್ನಾಡು, ದೊಡ್ಡ ಪುಲಿಕೋಟು, ಸಣ್ಣ ಪುಲಿಕೋಟು, ಹಾಕತ್ತೂರು, ಭೇತ್ರಿ ವ್ಯಾಪ್ತಿಯಲ್ಲಿ ಸಂಜೆ ಗುಡುಗು ಸಹಿತ ಸುರಿದು ತಂಪೆರೆದರೆ, ನಾಪೋಕ್ಲು ಹೋಬಳಿ ವ್ಯಾಪ್ತಿಯ ಬೇತು, ಕೈಕಾಡು, ಪಾರಾಣೆಯಲ್ಲಿ ಭಾರೀ ಮಳೆಯಾಗಿದೆ.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನದ ಕುಂದುಕೆರೆ ಮತ್ತು ಗೋಪಾಲಸ್ವಾಮಿ ಬೆಟ್ಟ ವಲಯದ ಪ್ರದೇಶದಲ್ಲಿ ಒಂದು ತಾಸಿಗೂ ಹೆಚ್ಚು ಮಳೆಯಾಗಿದೆ.

ಮಗುವಿನಹಳ್ಳಿಕೆರೆ, ಕಲ್ಲಿಗೌಡನಹಳ್ಳಿ ಕೆರೆಗೆ ಸ್ವಲ್ಪಮಟ್ಟಿಗೆ ನೀರು ಹರಿದು ಬಂದಿದೆ. ವಾರದ ಹಿಂದೆ ಮಳೆ ನಂಬಿ ಬಿತ್ತನೆ ಮಾಡಿದ್ದ ರೈತರು ಹರುಷಗೊಂಡಿದ್ದಾರೆ.

ಮೈಸೂರು, ವರುಣಾದಲ್ಲಿ ತುಂತುರು ಮಳೆಯಾಗಿದೆ. ಎಚ್‌.ಡಿ. ಕೋಟೆ ಪಟ್ಟಣದಲ್ಲಿ ಎರಡು ತಾಸು ಬಿರುಸಿನ ಮಳೆಯಾಗಿದ್ದು, ಹತ್ತಿ ಬೀಜ ಬಿತ್ತನೆ ಮಾಡಿದ್ದ ರೈತರು ಸಂತಸಗೊಂಡಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಅಮೀನಗಡದಲ್ಲಿ ಅರ್ಧ ತಾಸು ಧಾರಾಕಾರ ಮಳೆ ಸುರಿಯಿತು. ಕಮತಗಿಯಲ್ಲಿ ಗಾಳಿ ಸಹಿತ ಆಲಿಕಲ್ಲು ಮಳೆ ಬಿದ್ದಿದೆ. ವಿಜಯಪುರ, ಸಿಂದಗಿ, ತಾಳಿಕೋಟೆಯಲ್ಲಿ ಗುಡುಗು, ಸಿಡಿಲ ಅಬ್ಬರದೊಂದಿಗೆ ಮಳೆ ಸುರಿಯಿತು. ಗದಗ ಜಿಲ್ಲೆ ಡಂಬಳದಲ್ಲಿ ಸಾಧಾರಣ ಹಾಗೂ ಬಳ್ಳಾರಿಯಲ್ಲಿ ಗಾಳಿ ಸಹಿತ ಮಳೆಯಾಗಿದೆ.

ದಾವಣಗೆರೆ ಜಿಲ್ಲೆಯಲ್ಲಿ ಮಂಗಳವಾರ ಆಲಿಕಲ್ಲು, ಗುಡುಗು ಸಹಿತ ಮಳೆಯಾಗಿದ್ದು, ಬಿಸಿಲಿಗೆ ತತ್ತರಿಸಿದ್ದ ಜನ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಹರಪನಹಳ್ಳಿ, ಜಗಳೂರು, ಹರಿಹರ, ಚನ್ನಗಿರಿ, ಹೊನ್ನಾಳಿ, ನ್ಯಾಮತಿ ತಾಲ್ಲೂಕುಗಳಲ್ಲೂ ಸಂಜೆ ಹೊತ್ತಿಗೆ ಮಳೆಯಾಗಿದೆ. ಬಿರುಗಾಳಿಗೆ ಕೆಲವೆಡೆ ಗಿಡಮರಗಳು ಧರೆಗೆ ಉರುಳಿವೆ. ಮಲೆಬೆನ್ನೂರು, ಕತ್ತಲಗೆರೆಗಳಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದೆ. ಮಲೆಬೆನ್ನೂರಲ್ಲಿ ಭತ್ತದ ಬೆಳೆ ನಾಶವಾಗಿದೆ.

ಚಿತ್ರದುರ್ಗ ಜಿಲ್ಲೆಯಲ್ಲಿ ಗುಡುಗು, ಬಿರುಗಾಳಿ ಸಹಿತ ಆಲಿಕಲ್ಲು ಮಳೆ ಸುರಿದಿದೆ. ಹೊಸದುರ್ಗ ಹಾಗೂ ಹೊಳಲ್ಕೆರೆ ತಾಲ್ಲೂಕು ವ್ಯಾಪ್ತಿಯಲ್ಲಿ ಮಧ್ಯಾಹ್ನ ಆರಂಭವಾದ ಮಳೆ ಸುಮಾರು ಒಂದು ಗಂಟೆ ಸುರಿದಿದೆ. ಚಿತ್ರದುರ್ಗ ತಾಲ್ಲೂಕಿನ ಸಿರಿಗೆರೆ ಸೇರಿ ಹಲವೆಡೆ ಉತ್ತಮ ಮಳೆಯಾಗಿದೆ.

ಕಾದು ಕೆಂಡದಂತಾಗಿದ್ದ ಹೈದರಾಬಾದ್– ಕರ್ನಾಟಕ ಪ್ರದೇಶದಲ್ಲಿ ಸಂಜೆ ಗುಡುಗು–ಬಿರುಗಾಳಿ ಸಹಿತ ಕೆಲಹೊತ್ತು ಮಳೆ ಸುರಿಯಿತು.

ಬೀದರ್, ಕಲಬುರ್ಗಿ, ಯಾದಗಿರಿ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಯ ಹಲವೆಡೆ ಸುರಿದ ಮಳೆಯಿಂದಾಗಿ ಜನರು ನಿಟ್ಟುಸಿರು ಬಿಟ್ಟರು. ರಸ್ತೆ ಮೇಲೆ ನೀರು ಹರಿದಿದ್ದು, ಕೆಲವೆಡೆ ಆಲಿಕಲ್ಲುಗಳು ಬಿದ್ದವು.

ಕಲಬುರ್ಗಿಯಲ್ಲಿ ಸೋಮವಾರ 45 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು.ಒಂದು ವಾರದಿಂದ 42 ಡಿಗ್ರಿ ಆಸುಪಾಸಿನಲ್ಲಿತ್ತು. ಇದರಿಂದಾಗಿ ಜಿಲ್ಲೆಯ ಜನ ಅಕ್ಷರಶಃ ಬಸವಳಿದಿದ್ದರು. ಮಳೆಯಿಂದಾಗಿ ಜನರ ಮೊಗದಲ್ಲಿ ಮಂದಹಾಸ ಮೂಡಿದ್ದು, ಭೂಮಿಯಲ್ಲಿ ಹಸಿರು ಚಿಗುರುವ ಆಶಾವಾದ ಮೂಡಿದೆ.

ಸಿಡಿಲು ಬಡಿದು ಐದು ಮಂದಿ ಸಾವು

ಕಲಬುರ್ಗಿ/ಜಗಳೂರು: ಬೀದರ್ ಹಾಗೂ ಯಾದಗಿರಿ ಜಿಲ್ಲೆಯಲ್ಲಿ ಸಿಡಿಲು ಬಡಿದು ಮಾವ–ಅಳಿಯ ಸೇರಿ ನಾಲ್ಕು ಜನರು ಮೃತಪಟ್ಟಿದ್ದಾರೆ. ದಾವಣಗೆರೆ ಜಿಲ್ಲೆ ಜಗಳೂರು ತಾಲ್ಲೂಕಿನಲ್ಲಿ ಒಬ್ಬರು ಮೃತಪಟ್ಟಿದ್ದಾರೆ.

ಯಾದಗಿರಿ ಜಿಲ್ಲೆ ಸೈದಾಪುರ ಸಮೀಪದ ಮಾದ್ವಾರದಲ್ಲಿ ಮಾವ–ಅಳಿಯಂದಿರಾದ ಅಶೋಕ (33) ಹಾಗೂ ಚಂದ್ರಶೇಖರ (28), ಬೀದರ್ ಜಿಲ್ಲೆ ಭಾಲ್ಕಿ ತಾಲ್ಲೂಕು ತಳವಾಡದ ಮಾದಪ್ಪ ಸಿದ್ದಪ್ಪ (57), ಹುಮನಾಬಾದ್ ತಾಲ್ಲೂಕು ದುಬಲಗುಂಡಿಯ ದಯಾನಂದ ಶಿರಶೆಟ್ಟಿ (41) ಮೃತಪಟ್ಟವರು.

ಜಾನುವಾರು ಸಾವು: ರಾಯಚೂರು ಜಿಲ್ಲೆ ಸಿರವಾರ ತಾಲ್ಲೂಕು ಹೀರಾ ವಲಯದಲ್ಲಿ 6 ಕುರಿಗಳು, ರಾಯಚೂರು ಜಿಲ್ಲೆಯ ಯತಗಲ್‌ನಲ್ಲಿ ಸಿಡಿಲು ಬಡಿದು ಹಸು, ಎತ್ತು ಹಾಗೂ ಭಾಲ್ಕಿ ತಾಲ್ಲೂಕಿನ ತಳವಾಡದಲ್ಲಿ ಒಂದು ಎತ್ತು ಮೃತಪಟ್ಟಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.