ಬೆಂಗಳೂರು: ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಮುಂಗಾರು ಚುರುಕಾಗಿರುವುದರಿಂದ ಜೂ.14 ರಿಂದ 16ರವರೆಗೆ ಗುಡುಗು, ಸಿಡಿಲು ಸಹಿತ ಧಾರಾಕಾರ ಮಳೆಯಾಗುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
‘ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ ಮೂರೂ ದಿನ ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ. ಕರಾವಳಿಯಲ್ಲಿ ಗಂಟೆಗೆ 55 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು’ ಎಂದು ಇಲಾಖೆ ಎಚ್ಚರಿಸಿದೆ.
‘ಚಾಮರಾಜನಗರ, ವಿಜಯಪುರ, ಹಾವೇರಿ, ಗದಗ, ಧಾರವಾಡ, ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳಲ್ಲೂ ಹೆಚ್ಚು ಮಳೆಯಾಗುವ ಸಾಧ್ಯತೆ ಇರುವುದರಿಂದ ‘ಯೆಲ್ಲೊ ಅಲರ್ಟ್’ ನೀಡಲಾಗಿದೆ. ಉಳಿದ ಜಿಲ್ಲೆಗಳಲ್ಲಿ ಗುಡುಗು, ಸಿಡಿಲು ಇರಲಿದ್ದು, ಸಾಧಾರಣ ಮಳೆಯಾಗಬಹುದು’ ಎಂದು ಮಾಹಿತಿ ನೀಡಿದೆ.
ಮಳೆ–ಎಲ್ಲಿ,ಎಷ್ಟು?: ಆಗುಂಬೆಯಲ್ಲಿ 18 ಸೆಂ.ಮೀ ಗರಿಷ್ಠ ಮಳೆಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಮಂಕಿ 16, ಗೋಕರ್ಣ 12, ಭಟ್ಕಳ, ಭಾಗಮಂಡಲ 9, ಕಾರವಾರ, ಬೆಳ್ತಂಗಡಿ 8, ಕಾರ್ಕಳ, ಮೂಡುಬಿದರೆ 7, ಕುಂದಾಪುರ 6, ಮಂಗಳೂರು, ಸುಳ್ಯ, ಮಡಿಕೇರಿ 5, ಪುತ್ತೂರು, ವಿರಾಜಪೇಟೆ 4, ಕಲಬುರ್ಗಿ, ಸೊರಬ, ಕಮಲಾಪುರ 3, ಚಾಮರಾಜನಗರ 2, ಹಾವೇರಿ, ಧಾರವಾಡ, ಶಿಕಾರಿಪುರ, ಕೋಲಾರ, ಚಿಕ್ಕಮಗಳೂರಿನಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.