ADVERTISEMENT

ಮಳೆ ಆರ್ಭಟ; ಮನೆ, ಬೈಕ್‌ಗಳು ಜಖಂ

​ಪ್ರಜಾವಾಣಿ ವಾರ್ತೆ
Published 8 ಮೇ 2019, 20:16 IST
Last Updated 8 ಮೇ 2019, 20:16 IST
ಮಲ್ಲಾಪುರದಲ್ಲಿ ಮರವೊಂದು ಮನೆಯ ಮೇಲೆ ಬಿದ್ದಿದೆ
ಮಲ್ಲಾಪುರದಲ್ಲಿ ಮರವೊಂದು ಮನೆಯ ಮೇಲೆ ಬಿದ್ದಿದೆ   

ನೆಲಮಂಗಲ: ತಾಲ್ಲೂಕಿನಾದ್ಯಂತ ಮಂಗಳವಾರ ಸುರಿದ ಗಾಳಿ ಸಹಿತ ಮಳೆಗೆ 13 ಮನೆಗಳಿಗೆ ಹಾನಿಯಾಗಿದ್ದು, ಎರಡು ಮನೆಗಳುಸಂಪೂರ್ಣವಾಗಿ ಹಾಳಾಗಿವೆ. ಎರಡುಬೈಕ್‌ಗಳು ಜಖಂಗೊಂಡು, ಇಬ್ಬರು ಗಾಯಗೊಂಡಿದ್ದಾರೆ.

ಇಲ್ಲಿಗೆಸಮೀಪದ ಮಲ್ಲಾಪುರದಲ್ಲಿ ಐದು ಮರಗಳು ನೆಲಕ್ಕುರುಳಿವೆ. ಆಲದ ಮರವೊಂದು ಮನೆಯ ಮೇಲೆ ಬಿದ್ದ ಪರಿಣಾಮ ಲಕ್ಷ್ಮಮ್ಮ ಎಂಬುವರಿಗೆ ಸೇರಿದ ಮನೆಯ ಒಂದು ಭಾಗ ಸಂಪೂರ್ಣವಾಗಿ ಹಾಳಾಗಿದೆ.

ಗ್ರಾಮ ಪಂಚಾಯಿತಿ ಸದಸ್ಯ ಶಿವಣ್ಣ ಎಂಬುವರಿಗೆ ಸೇರಿದ ಮನೆಯ ಶೀಟು ಹಾರಿಹೋಗಿದ್ದು, ಮನೆಯಲ್ಲಿದ್ದ ಪೀಠೋಪಕರಣಗಳಿಗೆ ಹಾನಿಯಾಗಿದೆ. ಗ್ರಾಮದ ಮತ್ತೊಂದು ಮನೆಯಲ್ಲಿದ್ದ ಒಬ್ಬರ ಕಾಲು ಮುರಿದಿದ್ದು, ಇನ್ನೊಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.

ADVERTISEMENT

ಮನೆ ಕಳೆದುಕೊಂಡಸೋಮಶೇಖರ್‌, ‘ಮನೆಗೆ ಸಂಪೂರ್ಣ ಹಾನಿಯಾಗಿದೆ. ರಜೆ ಕಳೆಯಲೆಂದು ಊರಿನಿಂದ ಬಂದಿದ್ದ ಸಂಬಂಧಿಯ ಮಗನ ಕಾಲು ಮುರಿದಿದ್ದು ಬೇಸರ ಉಂಟು ಮಾಡಿದೆ. ಮನೆಯಲ್ಲಿ ಒಟ್ಟು 10 ಜನ ಇದ್ದೆವು. ರಾತ್ರಿಯೆಲ್ಲ ನಿದ್ದೆ ಇಲ್ಲ. ಸರ್ಕಾರ ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿದರು.

‘ಸರ್ಕಾರಿ ಶಾಲೆಯ ಕಾಂಪೌಂಡ್‌ ಮೇಲೆ ಮರದ ಕೊಂಬೆ ಬಿದ್ದಿದ್ದು, ಮುಂಭಾಗಕ್ಕೆ ಹಾನಿಯಾಗಿದೆ. ಶಾಲೆ ರಜೆ ಇದ್ದ ಕಾರಣ ದೊಡ್ಡ ಅವಘಡ ಸಂಭವಿಸುವುದು ತಪ್ಪಿದೆ’ ಎಂದು ಸ್ಥಳೀಯ ಮಾರಯ್ಯ ಹೇಳಿದರು.

ಸ್ಥಳಕ್ಕೆ ಭೇಟಿ ನೀಡಿದ್ದ ತಹಶೀಲ್ದಾರ್‌ ರಾಜಶೇಖರ್‌, ‘ಹಾನಿಗೆ ಸಂಬಂಧಿಸಿದ ವರದಿಯನ್ನು ಜಿಲ್ಲಾಧಿಕಾರಿ ಅವರಿಗೆ ಕಳುಹಿಸಿ, ಶೀಘ್ರವಾಗಿ ಪರಿಹಾರ ಒದಗಿಸಿಕೊಡಲಾಗುವುದು’ ಎಂದು ತಿಳಿಸಿದರು.

ವಿದ್ಯುತ್‌ ಸಂಪರ್ಕ ಕಡಿತ: ಇಲ್ಲಿಗೆ ಸಮೀಪದ ದಾಸನಪುರದಲ್ಲಿ ಮಂಗಳವಾರ ಸಂಜೆಯಿಂದ ವಿದ್ಯುತ್‌ ಸಂಪರ್ಕ ಕಡಿತಗೊಂಡಿದ್ದು, ಜನ ಪರದಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.