ADVERTISEMENT

ಮಳೆಹಾನಿ ವೀಕ್ಷಣೆಗೆ ದಿಢೀರ್ ಬೆಂಗಳೂರಿನತ್ತ ತೆರಳಿದ ಡಿಸಿಎಂ ಡಿ.ಕೆ.ಶಿವಕುಮಾರ್

​ಪ್ರಜಾವಾಣಿ ವಾರ್ತೆ
Published 19 ಮೇ 2025, 9:35 IST
Last Updated 19 ಮೇ 2025, 9:35 IST
   

ಹೊಸಪೇಟೆ (ವಿಜಯನಗರ): ಇಲ್ಲಿ ಮಂಗಳವಾರ ನಡೆಯಲಿರುವ ಸಮರ್ಪಣಾ ಸಂಕಲ್ಪ ಸಮಾವೇಶದಕ್ಕಾಗಿ ಬಂದಿದ್ದ ಉಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬೆಂಗಳೂರಿನಲ್ಲಿ ಭಾರಿ ಮಳೆ ಸುರಿದು ಹಲವೆಡೆ ನೀರು ನಿಂತ ಅವಾಂತರ ಸೃಷ್ಟಿಯಾದ ಕಾರಣ ತಮ್ಮ ವಾಸ್ತವ್ಯವನ್ನು ಮೊಟಕುಗೊಳಿಸಿ ಸೋಮವಾರ ದಿಢೀರನೆ ರಾಜಧಾನಿಯತ್ತ ತೆರಳಿದರು.

‘ನಾನು ಬಟ್ಟೆಬರೆ ಸಹಿತ ಸಮಾವೇಶಕ್ಕೆ ಬಂದಿದ್ದೆ. ಆದರೆ ಭಾನುವಾರ ರಾತ್ರಿ ಬೆಂಗಳೂರಿನಲ್ಲಿ ಬಿರುಸಿನ ಮಳೆ ಸುರಿದು ಕೆಲವು ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದೆ. ಅಂತಹ ಕೆಲವು ಸ್ಥಳಗಳನ್ನು ನಾನು ಮತ್ತು ಮುಖ್ಯಮಂತ್ರಿ ಅವರು ಜತೆಯಾಗಿ ವೀಕ್ಷಿಸಲಿದ್ದೇವೆ’ ಎಂದು ಅವರು ಸೋಮವಾರ ಇಲ್ಲಿ ಮಾಧ್ಯಮದವರಿಗೆ ತಿಳಿಸಿದರು.

‘ಮಳೆ ಬರಬೇಕು, ಅದರಿಂದ ರೈತರು ಬೆಳೆ ಬೆಳೆಯುತ್ತಾರೆ. ಬೆಂಗಳೂರಿನಲ್ಲಿ ಕೆಲವು ತಗ್ಗು ಪ್ರದೇಶಗಳಲ್ಲಿ ಅಧಿಕ ಮಳೆ ಸುರಿದಾಗ ಇಂತಹ ಸಮಸ್ಯೆ ಎದುರಾಗುವುದು ಸಹಜ, ಆದರೆ ನಿನ್ನೆಯ  ಮಳೆಯಿಂದ ಯಾವುದೇ ಜೀವಹಾನಿ ಆಗಿಲ್ಲ. ಮಳೆ ಮುನ್ಸೂಚನೆ ಇದ್ದ ಕಾರಣ ಅಧಿಕಾರಿಗಳು ಮೊದಲೇ ಎಚ್ಚರಿಕೆ ವಹಿಸಿದ್ದರು’ ಎಂದು ಅವರು ಹೇಳಿದರು.

ADVERTISEMENT

ಶಾಶ್ವತ ಪರಿಹಾರಕ್ಕೆ ಚಿಂತನೆ:

‘ಬೆಂಗಳೂರಿನ ಮಳೆನೀರು ಹರಿಯುವ ಕಾಲುವೆಗಳನ್ನು ಶಾಶ್ವತವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ. ವಿಶ್ವಬ್ಯಾಂಕ್‌, ಇತರ ಹಣಕಾಸು ಮೂಲಗಳಿಂದ ಸಾಲ ಪಡದು  ₹2 ಸಾವಿರ ಕೋಟಿ ವೆಚ್ಚದಲ್ಲಿ ಸುವ್ಯವಸ್ಥಿತ ಮಳೆನೀರು ಕಾಲುವೆಗಳನ್ನು ನಿರ್ಮಿಸುವ ಯೋಜನೆ ರೂಪಿಸಲಾಗುತ್ತಿದೆ. ಕಂದಾಯ ಸಚಿವ ಕೃಷ್ಣ ಬೈರೇಗೌಡರು ಸಾಲ ಹೊಂದಿಸುವ ನಿಟ್ಟಿನಲ್ಲಿ ಪ್ರಯತ್ನ ಆರಂಭಿಸಿದ್ದಾರೆ’ ಎಂದು ಡಿಸಿಎಂ ತಿಳಿಸಿದರು.

‘ಮಳೆ ಬಂದಾಗ ಉಸ್ತುವಾರಿ ಸಚಿವರು ಬೆಂಗಳೂರಿನಲ್ಲಿ ಇಲ್ಲ ಎಂದು ವಿರೋಧ ಪಕ್ಷದವರು ಟೀಕಿಸುವುದರಲ್ಲಿ ಅರ್ಥವಿಲ್ಲ. ನಾನು ಇಲ್ಲಿಗೆ ಪ್ರವಾಸಕ್ಕೆ ಬಂದಿಲ್ಲ, ಬಡವರಿಗೆ ಸರ್ಕಾರ ಸಲ್ಲಿಸಿದ ಸೇವೆಗಳನ್ನು ನೀಡುವ ಕಾರ್ಯಕ್ರಮಕ್ಕೆ ಬಂದಿದ್ದೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.