ADVERTISEMENT

ಮಳೆ ಅನಾಹುತ: 691 ಕುಟುಂಬಗಳಿಗೆ ಪರಿಹಾರ

​ಪ್ರಜಾವಾಣಿ ವಾರ್ತೆ
Published 23 ಮೇ 2022, 19:11 IST
Last Updated 23 ಮೇ 2022, 19:11 IST

ಬೆಂಗಳೂರು: ‘ನಗರದಲ್ಲಿ ನಿರಂತರವಾಗಿ ಸುರಿದ ಮಳೆಯಿಂದಾಗಿ ಪೂರ್ವ ವಲಯದಲ್ಲಿ 691 ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿದೆ. ಈ ಕುಟುಂಬಗಳಿಗೆ ಎರಡು ದಿನಗಳಲ್ಲಿ ತಲಾ ₹25 ಸಾವಿರ ಪರಿಹಾರ ನೀಡಬೇಕು’ ಎಂದು ಸಚಿವಡಾ.ಸಿ.ಎನ್‌.ಅಶ್ವತ್ಥನಾರಾಯಣ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಮಳೆಯಿಂದಾಗಿ ಉಂಟಾಗುವ ಸಮಸ್ಯೆಗಳ ನಿರ್ವಹಣೆಗಾಗಿ ಕಾರ್ಯಪಡೆ ರಚಿಸಲಾಗಿದೆ. ಪೂರ್ವ ವಲಯದ ಮುಖ್ಯಸ್ಥರಾಗಿರುವ ಅವರು ಸದ್ಯ ದಾವೋಸ್‌ ಪ್ರವಾಸದಲ್ಲಿದ್ದು, ವಿಡಿಯೊ ಕಾನ್ಫರೆನ್ಸ್‌ ಮೂಲಕ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

‘ಎಲ್ಲಾ ಕುಟುಂಬಗಳ ದಾಖಲೀಕರಣವನ್ನು ಮಂಗಳವಾರದೊಳಗೆ ಮುಗಿಸಿ, ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಬುಧವಾರ ನೇರವಾಗಿ ಹಣ ವರ್ಗಾವಣೆ ಮಾಡಬೇಕು. ಮೊದಲೇ ಸೂಚಿಸಿದ್ದರೂ ಕೆಲ ಗುತ್ತಿಗೆದಾರರು ಚರಂಡಿಗಳಲ್ಲಿನ ಹೂಳು ತೆಗೆಯುವ ಕೆಲಸ ಮಾಡಿಲ್ಲ. 7 ಕಡೆ ಈ ಸಮಸ್ಯೆ ಇದೆ. ಆ ಗುತ್ತಿಗೆದಾರರಿಗೆ ತಕ್ಷಣವೇ ನೋಟಿಸ್‌ ನೀಡಿ ಶಿಸ್ತು ಕ್ರಮ ಕೈಗೊಳ್ಳಬೇಕು. ಎಲ್ಲಾ ಚರಂಡಿಗಳಲ್ಲಿನ ಹೂಳೆತ್ತಿ ಮಳೆ ನೀರು ಸರಾಗವಾಗಿ ಹರಿದು ಹೋಗುವ ವ್ಯವಸ್ಥೆ ಮಾಡಬೇಕು’‍ ಎಂದು ತಾಕೀತು ಮಾಡಿದರು.

ADVERTISEMENT

‘ನೀಲಸಂದ್ರ, ಫ್ರೇಜರ್‌ ಟೌನ್‌, ಸಂಜಯನಗರ ಸೇರಿದಂತೆ ಒಟ್ಟು 22 ಸ್ಥಳಗಳನ್ನು ಕೆಂಪು ವಲಯವೆಂದು ಗುರುತಿಸಲಾಗಿದೆ. ಈ ಭಾಗದ ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗುವ ಸಾಧ್ಯತೆ ಇದೆ. ಅಲ್ಲಿನ ನಿವಾಸಿಗಳನ್ನು ಸ್ಥಳಾಂತರಿಸಲು ಈಗಲೇ ಸಿದ್ಧತೆ ಮಾಡಿಕೊಳ್ಳಬೇಕು. ಹತ್ತಿರದ ಶಾಲೆ ಹಾಗೂ ಇತರ ಸ್ಥಳಗಳಲ್ಲಿ ಅವರಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಬೇಕು. ಅಲ್ಲಿನ ನಿವಾಸಿಗಳ ಜೊತೆ ನಿರಂತರ ಸಂಪರ್ಕದಲ್ಲಿ ಇರಬೇಕು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.