ADVERTISEMENT

ಅಕ್ಟೋಬರ್ 30ರಿಂದ 14 ಜಿಲ್ಲೆಗಳಲ್ಲಿ ಮತ್ತೆ ಮಳೆ ಮುನ್ಸೂಚನೆ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2021, 20:49 IST
Last Updated 27 ಅಕ್ಟೋಬರ್ 2021, 20:49 IST
ರಾಜ್ಯದ ದಕ್ಷಿಣ ಒಳನಾಡು ಹಾಗೂ ಕರಾವಳಿ ಭಾಗ ಸೇರಿದಂತೆ 14 ಜಿಲ್ಲೆಗಳಲ್ಲಿ ಇದೇ 30 ಮತ್ತು 31ರಂದು ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ರಾಜ್ಯದ ದಕ್ಷಿಣ ಒಳನಾಡು ಹಾಗೂ ಕರಾವಳಿ ಭಾಗ ಸೇರಿದಂತೆ 14 ಜಿಲ್ಲೆಗಳಲ್ಲಿ ಇದೇ 30 ಮತ್ತು 31ರಂದು ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.   

ಬೆಂಗಳೂರು: ರಾಜ್ಯದ ದಕ್ಷಿಣ ಒಳನಾಡು ಹಾಗೂ ಕರಾವಳಿ ಭಾಗ ಸೇರಿದಂತೆ 14 ಜಿಲ್ಲೆಗಳಲ್ಲಿ ಇದೇ 30 ಮತ್ತು 31ರಂದು ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇರುವುದರಿಂದ ‘ಯೆಲ್ಲೊ ಅಲರ್ಟ್‌’ ಘೋಷಿಸಲಾಗಿದೆ.

ದಕ್ಷಿಣ ಒಳನಾಡಿನ ಎಲ್ಲ ಜಿಲ್ಲೆಗಳಲ್ಲಿ ಇದೇ 30ರಿಂದ ಗುಡುಗು, ಸಿಡಿಲು ಹೆಚ್ಚಾಗಿ ಇರಲಿದ್ದು, ಕೆಲವೆಡೆ ಸಾಧಾರಣ ಮಳೆಯಾಗಲಿದೆ. ಮುಂದಿನ ಎರಡು ದಿನಗಳವರೆಗೆ ರಾಜ್ಯದಲ್ಲಿ ಮಳೆಯ ಪ್ರಮಾಣ ಕಡಿಮೆ ಇರಲಿದ್ದು, ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದೆ. ಕೆಆರ್‌ಎಸ್‌ ಭರ್ತಿಗೆ ಕ್ಷಣಗಣನೆ: (ಮಂಡ್ಯ ವರದಿ): ಕೊಡಗು ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವ ಕಾರಣ ಕೆಆರ್‌ಎಸ್‌ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ. ಬುಧವಾರ ಸಂಜೆ ವೇಳೆಗೆ ಜಲಾಶಯದ ನೀರಿನ ಮಟ್ಟ 124.29 ಅಡಿ ತಲುಪಿದ್ದು, ಭರ್ತಿಗೆ ಕ್ಷಣಗಣನೆ ಆರಂಭವಾಗಿದೆ.

ADVERTISEMENT

ಜಲಾಶಯ ಸಂಪೂರ್ಣ ಭರ್ತಿಯಾಗಲು ಕೇವಲ 0.51 ಅಡಿಯಷ್ಟೇ (ಗರಿಷ್ಠ ಮಟ್ಟ 124.80 ಅಡಿ) ಬಾಕಿ ಉಳಿದಿದ್ದು, ಗುರುವಾರ ಬೆಳಿಗ್ಗೆ ವೇಳೆಗೆ ಭರ್ತಿಯಾಗುವ ಸಾಧ್ಯತೆ ಇದೆ. ಯಾವುದೇ ಕ್ಷಣದಲ್ಲಿ ಜಲಾಶಯದಿಂದ ನೀರು ಹರಿಸುವ ಸಾಧ್ಯತೆ ಇದ್ದು, ನದಿ ತೀರದ ಜನರು ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಕಾವೇರಿ ನೀರಾವರಿ ನಿಗಮ ಈಗಾಗಲೇ ಎಚ್ಚರಿಕೆ ನಿಡಿದೆ. ಸುರಕ್ಷತೆ ದೃಷ್ಟಿಯಿಂದ ಶ್ರೀರಂಗಪಟ್ಟಣ ತಾಲ್ಲೂಕು ರಂಗನತಿಟ್ಟು ಪಕ್ಷಿಧಾಮದಲ್ಲಿ ದೋಣಿ ವಿಹಾರ
ಸ್ಥಗಿತಗೊಳಿಸಲಾಗಿದೆ.

ತೋಟದ ಮನೆಗೆ ನುಗ್ಗಿದ ನೀರು: (ನಂಜನಗೂಡು ವರದಿ): ಮಂಗಳವಾರ ರಾತ್ರಿ ಸುರಿದ ಭಾರಿ ಮಳೆಯಿಂದರಾಂಪುರ ನಾಲೆ ತುಂಬಿ ಹರಿದಿದ್ದು, ತಾಲ್ಲೂಕಿನ ತಾಂಡವಪುರದ ಲಕ್ಷ್ಮಣೇಗೌಡ ಅವರ ತೋಟದ ಮನೆ ಜಲಾವೃತಗೊಂಡಿದೆ.

ಇಲ್ಲಿರುವ ಕೋಳಿ ಫಾರಂ, ಕುರಿ ಶೆಡ್‌ಗೆ ನೀರು ನುಗ್ಗಿದೆ. 8 ಕುರಿಗಳು ಕೊಚ್ಚಿಕೊಂಡು ಹೋಗಿದ್ದು, ಇನ್ನೂ ಪತ್ತೆಯಾಗಿಲ್ಲ.ವರುಣಾ ಸಮೀಪದ ಪಿ.ಜಿ.ಹುಂಡಿ ಗ್ರಾಮದಲ್ಲಿ ಶಿವಪ್ಪ, ರಾಜಶೇಖರ್, ಗೌರಮ್ಮ ಎಂಬುವವರ ಮನೆಗಳ ಗೋಡೆ ಕುಸಿದಿವೆ.

ಹುಣಸೂರು ತಾಲ್ಲೂಕಿನ ಬನ್ನಿಕುಪ್ಪೆ ಪಂಚಾಯಿತಿಯ ಕುಪ್ಪೆಕೊಳಗಟ್ಟ ಗ್ರಾಮದಲ್ಲಿ ರಮೇಶ್ ಅವರ ತಂಬಾಕು ಬ್ಯಾರನ್ ಮತ್ತು ರವಿ ಅವರ ಮನೆ ಕುಸಿದಿವೆ.

ಸೂಳೆಕೆರೆ ಕೋಡಿ ಬಿದ್ದಿದ್ದರಿಂದ ತ್ಯಾವಣಿಗೆ–ಚಿರಡೋಣಿ ರಸ್ತೆಯ ನಡುವಿನ ಕೆಳ ಸೇತುವೆಯನ್ನು ಬುಧವಾರ ಸಂಜೆ ದಾಟುತ್ತಿದ್ದ ಯುವಕರೊಬ್ಬರು ಹಳ್ಳದ ನೀರಿನಲ್ಲಿ ಕೊಚ್ಚಿಹೋಗಿದ್ದಾರೆ.

ನೀರು ಪಾಲಾಗಿರುವವರು ಕುಳಗಟ್ಟೆ ಗ್ರಾಮದ ಶಿವು (25) ಎನ್ನಲಾಗಿದೆ. ಸುದ್ದಿ ತಿಳಿದು ಬಸವಾಪಟ್ಟಣ ಠಾಣೆಯ ಪೊಲೀಸರು ಸ್ಥಳಕ್ಕೆ ಬಂದು ಹುಡುಕಾಡಿದ್ದಾರೆ. ರಾತ್ರಿಯವರೆಗೂ ಶಿವು ಬಗ್ಗೆ ಸುಳಿವು ಸಿಕ್ಕಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.