ADVERTISEMENT

ರಾಜ್ಯದ ಹಲವೆಡೆ ಮಳೆ ಮುಂದುವರಿಕೆ

ದೇವದುರ್ಗ ತಾಲ್ಲೂಕಿನ ಗಲಗ ಗ್ರಾಮದಲ್ಲಿ ಸಿಡಿಲು ಬಡಿದು ಎತ್ತು ಸಾವು

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2023, 0:06 IST
Last Updated 17 ಮಾರ್ಚ್ 2023, 0:06 IST
ಕೋಲಾರದ ರಸ್ತೆಗಳಲ್ಲಿ ಮಳೆ ನೀರಿನ ಜೊತೆಗೆ ಸುತ್ತಲಿನ ತ್ಯಾಜ್ಯ ಹರಿದು ಬಂದ ರೀತಿ
ಕೋಲಾರದ ರಸ್ತೆಗಳಲ್ಲಿ ಮಳೆ ನೀರಿನ ಜೊತೆಗೆ ಸುತ್ತಲಿನ ತ್ಯಾಜ್ಯ ಹರಿದು ಬಂದ ರೀತಿ   

ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗುರುವಾರವೂ ಮಳೆ ಬಿದ್ದಿದೆ. ಕೆಲವೆಡೆ ಆಲಿಕಲ್ಲುಗಳು ಬಿದ್ದಿದ್ದರೆ, ಕೆಲ ಊರುಗಳಲ್ಲಿ ಜೋರಾದ ಗಾಳಿಯೊಂದಿಗೆ ಮಳೆ ಸುರಿದಿದೆ.

ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಗಲಗ ಗ್ರಾಮದಲ್ಲಿ ಸಿಡಿಲು ಬಡಿದು ಎತ್ತು ಮೃತಪಟ್ಟಿದೆ. ಗ್ರಾಮದಲ್ಲಿ ಆಲಿಕಲ್ಲುಗಳೂ ಬಿದ್ದಿವೆ.

ರಾಯಚೂರು ಜಿಲ್ಲೆಯ ಮಸ್ಕಿ, ಕವಿತಾಳ, ಕೊಪ್ಪಳ ಜಿಲ್ಲೆಯ ಯಲಬುರ್ಗಾ, ಬೀದರ್ ನಗರ ಸೇರಿ ಜಿಲ್ಲೆಯ ಚಿಟಗುಪ್ಪ ಹಾಗೂ ಹುಲಸೂರು ತಾಲ್ಲೂಕಿನಲ್ಲಿ ಮಳೆ ಸುರಿಯಿತು. ಬೀದರ್‌ನ ಜಿಲ್ಲಾ ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಚಿತ್ರ ಸಂತೆಗೆ ತೊಂದರೆಯಾಯಿತು. ರಂಗಮಂದಿರದ ಪ್ರವೇಶದ್ವಾರದಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ನೀರು ನಿಂತ ಕಾರಣ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಬಂದವರಿಗೆ ಓಡಾಡಲು ಕಷ್ಟವಾಯಿತು.

ADVERTISEMENT

ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಹೆತ್ತೂರು ಹೋಬಳಿಯಲ್ಲಿ ಸಂಜೆ ಮಿಂಚು- ಗುಡುಗು, ಬಿರುಗಾಳಿ ಸಹಿತ ಮಳೆ ಸುರಿಯಿತು. ಕೆಲವೆಡೆ ಆಲಿಕಲ್ಲು ಸಹಿತ ಮಳೆಯಾಗಿದೆ.

ಕಾಫಿ ಬೆಳೆಗಾರರು ಮುಂದಿನ ವರ್ಷದ ಫಸಲಿಗಾಗಿ ತೋಟಕ್ಕೆ ನೀರು ಹಾಯಿಸುವ ಸಿದ್ಧತೆಯಲ್ಲಿದ್ದರು. ಬಹುತೇಕ ಬೆಳೆಗಾರರು ಕಾಫಿ ತೋಟಕ್ಕೆ ನೀರು ಹಾಯಿಸಿದ್ದರು. ಇದರಿಂದಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ಕೋಲಾರ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಸಂಜೆ ಅರ್ಧ ತಾಸು ಜೋರು ಮಳೆಯಾಯಿತು. ಕೋಲಾರ ತಾಲ್ಲೂಕಿನ ಒಕ್ಕಲೇರಿ ಹೋಬಳಿ ಶೆಟ್ಟಿಗಾನಹಳ್ಳಿಯಲ್ಲಿ ಆಲಿಕಲ್ಲು ಸಮೇತ ಮಳೆ ಸುರಿಯಿತು.

ಒಳಚರಂಡಿ ಮತ್ತು ಮೋರಿಗಳ ಸುತ್ತ ಕಸ ಕಟ್ಟಿಕೊಂಡಿದ್ದರಿಂದ ರಸ್ತೆಯಲ್ಲಿ ನೀರು ಉಕ್ಕಿ ಹರಿಯಿತು. ಮಳೆ ನೀರಿನ ಜೊತೆಗೆ ಕಸವೂ ಹರಿದು ಬಂದಿದ್ದರಿಂದ ರಸ್ತೆ ತುಂಬಾ ಕೊಳಚೆ ನೀರು ತುಂಬಿತ್ತು. ವ್ಯಾಪಾರಿಗಳು ಹಾಕಿಕೊಂಡಿದ್ದ ತಾತ್ಕಾಲಿಕ ಟೆಂಟ್‌, ಟಾರ್ಪಲ್‌ ಗಾಳಿಗೆ ಕಿತ್ತು ಹೋದವು.

ಚಿಕ್ಕಬಳ್ಳಾಪುರ ಜಿಲ್ಲೆಯ ಅಲ್ಲಲ್ಲಿ ಗುರುವಾರ ರಾತ್ರಿ ಉತ್ತಮ ಮಳೆ ಸುರಿಯಿತು. ಸಂಜೆ 7ಕ್ಕೆ ಕೆಲ ಕ್ಷಣ ಸಣ್ಣ ಪ್ರಮಾಣದಲ್ಲಿ ಸುರಿದ ಮಳೆ, 8.30ಕ್ಕೆ ವೇಗ ಪಡೆಯಿತು. ಗೌರಿಬಿದನೂರು, ಶಿಡ್ಲಘಟ್ಟ, ಗುಡಿಬಂಡೆ ತಾಲ್ಲೂಕು ವ್ಯಾಪ್ತಿಯಲ್ಲಿಯೂ ಮಳೆ ಸುರಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.