ADVERTISEMENT

ರಾಜ್ಯದ ಹಲವೆಡೆ ಮಳೆ: ಕರಾವಳಿ ಜಿಲ್ಲೆಗಳಲ್ಲಿ 5ರ ವರೆಗೆ ಭಾರಿ ಮಳೆ ಮುಂದುವರಿಕೆ

​ಪ್ರಜಾವಾಣಿ ವಾರ್ತೆ
Published 30 ಜೂನ್ 2023, 23:38 IST
Last Updated 30 ಜೂನ್ 2023, 23:38 IST
   

ಬೆಂಗಳೂರು: ರಾಜ್ಯದ ಮಂಗಳೂರು, ಉಡುಪಿಯಲ್ಲಿ ಶುಕ್ರವಾರ ರಭಸದ ಮಳೆ ಸುರಿದರೆ, ಕಾರವಾರ, ಬೆಳಗಾವಿ ಮತ್ತು ಧಾರವಾಡ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗಿದೆ. 

ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಬಸ್ರೂರಿನಲ್ಲಿ ಎರಡು ಮನೆ ಹಾಗೂ ಕುಂಜಿಬೆಟ್ಟುವಿನ ಸಗ್ರಿಬೈಲಿನಲ್ಲಿರುವ ಕಾಲುಸಂಕ ಭಾಗಶಃ ಹಾನಿಯಾಗಿದೆ. 

ವಡ್ಡರ್ಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾವಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗ್ರಂಥಾಲಯ ಕಟ್ಟಡ ಗುರುವಾರ ರಾತ್ರಿ ಕುಸಿದಿದೆ. ಶಾಲೆಯ ಒಂದು ಭಾಗದ ಕೊಠಡಿ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದ್ದು, ಮಳೆಯ ರಭಸಕ್ಕೆ ಚಾವಣಿ ಮುರಿದು ಬಿದ್ದು, ಗೋಡೆ ಕೂಡ ಬಿರುಕು ಬಿಟ್ಟಿದೆ.

ADVERTISEMENT

ಜಿಲ್ಲೆಯಾದ್ಯಂತ ಇದುವರೆಗೂ 59 ಮನೆಗಳಿಗೆ ಭಾಗಶಃ ಹಾನಿಯಾಗಿದ್ದು ಒಂದು ಮನೆ ಸಂಪೂರ್ಣ ಕುಸಿದಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗಿದೆ. ಮಂಗಳೂರು ನಗರದಲ್ಲಿ ಸಂಜೆ ವೇಳೆಗೆ ತಾಸಿಗೂ ಹೆಚ್ಚುಕಾಲ ಗಾಳಿ ಸಹಿತ ರಭಸದ ಮಳೆ ಸುರಿಯಿತು. ಚರಂಡಿಗಳು ಉಕ್ಕಿ ಹರಿದು, ಮಲ್ಲಿಕಟ್ಟೆ, ಸುಭಾಷ್ ನಗರ, ಬಳ್ಳಾಲ್‌ ಭಾಗದಲ್ಲಿ ರಸ್ತೆಗಳಲ್ಲಿ ನೀರು ತುಂಬಿ ಹರಿಯಿತು.  

ಕರಾವಳಿ ಜಿಲ್ಲೆಗಳಲ್ಲಿ ಜುಲೈ 5ರ ವರೆಗೆ ಭಾರಿ ಮಳೆ ಸುರಿಯಲಿದೆ ಎಂದು ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆ 1 ರಿಂದ 3ರವರೆಗೆ ಯಲ್ಲೋ ಅಲರ್ಟ್‌, ಜುಲೈ 4 ಹಾಗೂ 5ರಂದು ಆರೆಂಜ್ ಅಲರ್ಟ್ ಘೋಷಿಸಿದೆ.

ಕಾರವಾರ ತಾಲ್ಲೂಕಿನಲ್ಲಿ ಮಧ್ಯಾಹ್ನದ ಬಳಿಕ ನಿರಂತರವಾಗಿ ಜಿಟಿ ಜಿಟಿ ಮಳೆ ಸುರಿಯಿತು. ಭಟ್ಕಳ,  ಕುಮಟಾ, ಅಂಕೋಲಾ, ಹೊನ್ನಾವರ, ಶಿರಸಿ, ಜೊಯಿಡಾ, ಯಲ್ಲಾಪುರದಲ್ಲಿ ಉತ್ತಮ ಮಳೆಯಾಗಿದೆ. 

ಬೆಳಗಾವಿ, ಧಾರವಾಡ ಜಿಲ್ಲೆಯ ವಿವಿಧೆಡೆ ಸಾಧಾರಣ ಮಳೆಯಾದರೆ, ಮಡಿಕೇರಿ ನಗರದಲ್ಲಿ ಉತ್ತಮ ಮಳೆ ಸುರಿಯಿತು. 

ಮುನ್ಸೂಚನೆ: ಜುಲೈ 1ರಂದು ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗೆ ಹಾಗೂ ಜುಲೈ 2ರಂದು ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರು ಜಿಲ್ಲೆಗೆ ‘ಯೆಲ್ಲೊ ಅಲರ್ಟ್‌’ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.