ಹೊಸಪೇಟೆ ತಾಲ್ಲೂಕಿನ ಹಂಪಿ ಸುತ್ತಮುತ್ತ ಬುಧವಾರ ರಾತ್ರಿ ಸುರಿದ ಮಳೆಯಿಂದಾಗಿ ಗುರುವಾರ ಬೆಳಿಗ್ಗೆ ವಿಜಯವಿಠ್ಠಲ ದೇವಸ್ಥಾನದ ಆವರಣದಲ್ಲಿ ಮಳೆ ನೀರು ಸಂಗ್ರಹವಾಗಿತ್ತು. ಆ ನೀರಲ್ಲಿ ಕಲ್ಲಿನ ರಥ, ಇತರ ಮಂಟಪಗಳು ಮತ್ತು ಪ್ರವಾಸಿಗರ ಪ್ರತಿಬಿಂಬ ವಿಶಿಷ್ಟ ರೀತಿಯಲ್ಲಿ ಕಾಣಿಸಿತು
– ಚಿತ್ರ: ತಾಜುದ್ದೀನ್ ಆಜಾದ್
ಕಲಬುರಗಿ/ ಮೈಸೂರು: ಕಲಬುರಗಿ ಜಿಲ್ಲೆ, ಮೈಸೂರು ಜಿಲ್ಲೆಯ ಕೆಲವೆಡೆ ಮತ್ತು ರಾಜ್ಯದ ವಿವಿಧ ಭಾಗಗಳಲ್ಲಿ ಬುಧವಾರ ರಾತ್ರಿ ಮತ್ತು ಗುರುವಾರ ಮಳೆಯಾಗಿದೆ. ಬಿಸಿಲ ಧಗೆಯಿಂದ ಬತ್ತಿದ್ದ ನೆಲದಲ್ಲಿ ಹಸಿರು ಚಿಗುರೊಡೆಯಲು ಮಳೆ ಹದಮಾಡಿದೆ.
ಕೊಪ್ಪಳ ಜಿಲ್ಲೆಯ ಗಂಗಾವತಿ, ಕೊಪ್ಪಳ, ಕಾರಟಗಿ ಹಾಗೂ ಕುಷ್ಟಗಿ ತಾಲ್ಲೂಕಿನಲ್ಲಿ ರಾತ್ರಿ ಮಳೆಯಾಗಿದೆ. ಗಂಗಾವತಿ ಭಾಗದಲ್ಲಿ ಕಟಾವಿಗೆ ಬಂದಿದ್ದ ಭತ್ತದ ಫಸಲು ನೆಲಕ್ಕೆ ಒರಗಿದೆ. ಬೀದರ್ ಜಿಲ್ಲೆಯ ಔರಾದ್‌ನಲ್ಲಿ ಮಧ್ಯಾಹ್ನ ಬಿರುಗಾಳಿ ಸಹಿತ ಜೋರು ಮಳೆಯಾದರೆ, ಚಿಟಗುಪ್ಪ, ಹುಮನಾಬಾದ್ ತಾಲ್ಲೂಕಿನಲ್ಲಿ ಜಿಟಿಜಿಟಿ ಮಳೆ ಸಂಜೆಯೂ ಮುಂದುವರೆದಿತ್ತು. ಬೀದರ್, ಹುಲಸೂರ, ಭಾಲ್ಕಿಯಲ್ಲಿ ಸಾಧಾರಣ ಮಳೆಯಾಗಿದೆ.
ಕಲಬುರಗಿ ನಗರದಲ್ಲಿ ಮಧ್ಯಾಹ್ನ ಕೆಲಹೊತ್ತು ಮಳೆ ಸುರಿಯಿತು. ಜಿಲ್ಲೆಯ ಜೇವರ್ಗಿ, ಕಾಳಗಿ ಹಾಗೂ ಚಿಂಚೋಳಿ, ವಾಡಿ ಪಟ್ಟಣದ ಸುತ್ತಮುತ್ತ ಉತ್ತಮ ಮಳೆಯಾಗಿದೆ.
ಹಾಸನ ಜಿಲ್ಲೆಯ ಆಲೂರು, ಸಕಲೇಶಪುರದಲ್ಲಿ ವರ್ಷಧಾರೆಯಾಗಿದೆ. ಚಾಮರಾಜನಗರ ಜಿಲ್ಲೆಯ ಹನೂರು
ತಾಲ್ಲೂಕಿನ ಕೌದಳ್ಳಿಯಲ್ಲಿ ಧಾರಾಕಾರ ಮಳೆಯಾಗಿದೆ. ಹಾಸನ ಜಿಲ್ಲಾ ಕೇಂದ್ರದಲ್ಲಿ ಸುಮಾರು 45 ನಿಮಿಷ ನಿರಂತರ ಮಳೆ ಸುರಿಯಿತು. ಅರಕಲಗೂಡು, ಕೊಣನೂರು, ಹೊಳೆನರಸೀಪುರ, ಹಳೇಬೀಡಿನಲ್ಲೂ ಮಳೆಯಾಗಿದೆ.
ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಹನಗೋಡು, ಧರ್ಮಾಪುರ, ಗಾವಡಗೆರೆ ಮತ್ತು ಬಿಳಿಕೆರೆ ಹೋಬಳಿಯಾದ್ಯಂತ, ನಾಗರಹೊಳೆ ಅರಣ್ಯದ ಕೆಲವೆಡೆ ಉತ್ತಮ ಮಳೆಯಾಗಿದೆ.
ಚಾಮರಾಜನಗರ ಜಿಲ್ಲೆಯಲ್ಲಿ ಮಧ್ಯಾಹ್ನ ಬಿರುಗಾಳಿ ಸಹಿತ ಮಳೆಯಾಯಿತು. ಕೊಳ್ಳೇಗಾಲ ಹಾಗೂ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಅಲ್ಪ ಪ್ರಮಾಣದ ಮಳೆಯಾಗಿದೆ.
ಬಿಸಿಲಿನ ಬೇಗೆಗೆ ಅರಣ್ಯ ಪ್ರದೇಶ ಒಣಗಿ ಪ್ರಾಣಿಗಳಿಗೆ ಮೇವಿನ ಕೊರತೆ ಎದುರಾಗುವ ಆತಂಕ ಇತ್ತು. ಮಳೆಯಿಂದಾಗಿ ಹುಲ್ಲು ಚಿಗುರಲು ಪೂರಕ ವಾತಾವರಣ ನಿರ್ಮಾಣವಾಗಿದೆ.
ಚಿಕ್ಕಮಗಳೂರು ವರದಿ: ಜಿಲ್ಲೆಯ ಹಲವೆಡೆ ಗುರುವಾರ ಮಳೆಯಾಗಿದೆ. ‘ಈಗ ಮಳೆ ಬಂದಿರುವುದು ಕಾಫಿ ಕಾಯಿ ಕಟ್ಟಲು ಸಹಕಾರಿಯಾಗಿದೆ’ ಎಂದು ಕಾಫಿ ಬೆಳೆಗಾರ ರವಿಕುಮಾರ್ ಎಚ್. ಎಲ್ ಅವರು ಹೇಳಿದರು.
ಚಿತ್ರದುರ್ಗ ವರದಿ: ಜಿಲ್ಲೆಯವಿವಿಧೆಡೆ ಸಾಧಾರಣ ಮಳೆಯಾಗಿದೆ. ಜೊತೆಗೆ ಭಾರಿ ಗಾಳಿ ಬೀಸಿದ
ಪರಿಣಾಮ ಮೊಳಕಾಲ್ಮುರು ತಾಲ್ಲೂಕಿನ ಹಲವೆಡೆ ಬಾಳೆ, ಮೆಕ್ಕೆಜೋಳ ನೆಲಕ್ಕುರುಳಿವೆ.
ನಗರದಲ್ಲಿ ಮಧ್ಯಾಹ್ನ 2ಕ್ಕೆ ಆರಂಭವಾದ ಮಳೆ ಗುಡುಗು ಸಹಿತ 20 ನಿಮಿಷ ಸುರಿಯಿತು. ಚಳ್ಳಕೆರೆ ತಾಲ್ಲೂಕು ನಾಯಕನಹಟ್ಟಿ ಬಳಿಯ ಭೀಮ ಗೊಂಡನಹಳ್ಳಿ, ಹಿರಿಕೆರೆ ಕಾವಲು, ಜೋಗಿಹಟ್ಟಿಗಳಲ್ಲಿ ಸತತ ಒಂದು ಗಂಟೆ ಮಳೆಯಾಯಿತು. ಹೊಳಲ್ಕೆರೆ, ಹಿರಿಯೂರು ತಾಲ್ಲೂಕಿನಲ್ಲೂ ಸಾಧಾರಣ ಮಳೆಯಾಗಿದೆ.
ಮೊಳಕಾಲ್ಮುರು ತಾಲ್ಲೂಕು ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿದೆ. ದೇವಸಮುದ್ರ ಹೋಬಳಿಯ ಜೆ.ಬಿ. ಹಳ್ಳಿ ಸುತ್ತಮುತ್ತ ಗಾಳಿಯ ರಭಸಕ್ಕೆ ಮಕ್ಕೆಜೋಳ, ಬಾಳೆ ಬೆಳೆಗಳಿಗೆ ಹಾನಿಯಾಗಿದೆ.
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಮತ್ತು ಸಾಗರ ಮತ್ತು ಭದ್ರಾವತಿ ತಾಲ್ಲೂಕುಗಳ ಕೆಲವೆಡೆ ಮಳೆ
ಸುರಿದಿದೆ. ಶಿಕಾರಿಪುರ ತಾಲ್ಲೂಕಿನ ಶಿರಾಳಕೊಪ್ಪ ಸುತ್ತಮುತ್ತ ಹಾಗೂ ಕಡೇನಂದಿಹಳ್ಳಿ ಗ್ರಾಮ ಹಾಗೂ ಸುತ್ತಮುತ್ತ 20 ನಿಮಿಷಗಳ ಕಾಲ ಬಿರುಸಿನ ಮಳೆ ಸುರಿಯಿತು.
ದಾವಣಗೆರೆ ಜಿಲ್ಲೆಯ ಜಗಳೂರು ಪಟ್ಟಣ ಸೇರಿದಂತೆ ತಾಲ್ಲೂಕಿನಲ್ಲೂ ಬುಧವಾರ ತಡರಾತ್ರಿ ಹಾಗೂ ಗುರುವಾರ ಮಧ್ಯಾಹ್ನ 20 ನಿಮಿಷಗಳವೆರೆಗೆ ಮಳೆ ಸುರಿಯಿತು.
ಗೌರಿಬಿದನೂರು: ನಗರ ಹಾಗೂ ತಾಲ್ಲೂಕಿನ ಹಲವು ಕಡೆ ಅರ್ಧ ಗಂಟೆಗೂ ಹೆಚ್ಚು ಸಮಯ ಬಿರುಗಾಳಿ ಸಮೇತ ಮಳೆ ಸುರಿಯಿತು. ಮಳೆಯಿಂದಾಗಿ ನಗರದ ಹಲವು ರಸ್ತೆಗಳಲ್ಲಿ ನೀರು ತುಂಬಿ ಹರಿಯಿತು.
ಧರೆಗುರುಳಿದ ಗಿಡ, ಮರಗಳು
ಹುಬ್ಬಳ್ಳಿ: ವಿಜಯನಗರ ಜಿಲ್ಲೆಯ ಹೊಸಪೇಟೆ ಡ್ಯಾಂ ರಸ್ತೆಯ ಮಾರ್ಕಂಡೇಶ್ವರ ದೇವಸ್ಥಾನದ ಗೋಪುರ ಕಳಶ ಗಾಳಿಗೆ ಉರುಳಿ ಬಿದ್ದಿದೆ. ಹಲವೆಡೆ ಗಿಡ, ಮರಗಳು ಧರೆಗುರುಳಿವೆ. ಜಂಬುನಾಥ ಹಳ್ಳಿಯಲ್ಲಿ ತಾತ್ಕಾಲಿಕ ಗುಡಿಸಲುಗಳು ಸಹ ಗಾಳಿ, ಮಳೆಗೆ ನಾಶವಾಗಿವೆ.
ಬಳ್ಳಾರಿ ಜಿಲ್ಲೆಯಲ್ಲೂ ಮಳೆಯಾಗಿದೆ. ಬೆಳಗಾವಿ ಜಿಲ್ಲೆ ಸವದತ್ತಿ ತಾಲ್ಲೂಕಿನ ಗ್ರಾಮೀಣ ಭಾಗಗಳಲ್ಲಿ ಗುಡುಗು ಸಿಡಿಲು ಸಹಿತ ಎರಡೂವರೆ ತಾಸು ಮಳೆ ಸುರಿಯಿತು. ಭಾರೀ ಬಿರುಗಾಳಿಗೆ ಕೆಲವೆಡೆ ಚಾವಣಿಗಳು ಹಾರಿವೆ. ಹಲವು ಮನೆಗಳಿಗೆ,ದೇವಸ್ಥಾನಗಳಿಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತಗೊಂಡಿತು.
ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲ್ಲೂಕಿನ ಕಾತೂರ, ಪಾಳಾ, ಟಿಬೇಟಿಯನ್ ಕ್ಯಾಂಪ್, ಯಲ್ಲಾಪುರ ಹಾಗೂ ಶಿರಸಿ ತಾಲ್ಲೂಕಿನ ಗ್ರಾಮೀಣ ಪ್ರದೇಶ, ಕುಮಟಾ ಸೇರಿ ಕೆಲ ಕಡೆ ಬಿರುಸಿನ ಮಳೆ ಸುರಿಯಿತು.
ಬಾಗಲಕೋಟೆ, ಬಾದಾಮಿ, ಬೀಳಗಿ, ಕೆರೂರಿನಲ್ಲಿ ಮಳೆಯಾಯಿತು. ಗದಗ ಜಿಲ್ಲೆಯ ನರಗುಂದ ತಾಲ್ಲೂಕಿನಲ್ಲಿ ರಭಸದ ಮಳೆ ಸುರಿಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.