ಬೆಳಗಾವಿ/ಹಾವೇರಿ/ವಿಜಯಪುರ/ಕಾರವಾರ/ಹೊಸಪೇಟೆ(ವಿಜಯನಗರ): ಬೆಳಗಾವಿ, ಹಾವೇರಿ, ವಿಜಯನಗರ, ಉತ್ತರ ಕನ್ನಡ ಜಿಲ್ಲೆಯ ವಿವಿಧೆಡೆ ಬುಧವಾರವೂ ಧಾರಾಕಾರ ಮಳೆಯಾಯಿತು. ಬಹುತೇಕ ಕಡೆ ಪ್ರವಾಹ ಪರಿಸ್ಥಿತಿ ಇತ್ತು.
ಬೆಳಗಾವಿ ನಗರ ಸೇರಿ ತಾಲ್ಲೂಕಿನಾದ್ಯಂತ ಮಳೆಯಾಯಿತು. ನಗರದ ಹೊರವಲಯದ ಬಸವನ ಕುಡಚಿಯ ಹಲವು ಮನೆಗಳು, ಅಂಗಡಿಗಳಿಗೆ ನೀರು ನುಗ್ಗಿ, ಜನರು ಪರದಾಡಿದರು. ಕೆಎಲ್‌ಇ ಸಂಕಲ್ಪ ವೆಲ್‌ನೆಸ್ ಸೆಂಟರ್‌ಗೆ ನೀರು ನುಗ್ಗಿ ಔಷಧಿ ಮತ್ತು ವೈದ್ಯಕೀಯ ಪರಿಕರಗಳಿಗೆ ಹಾನಿಯಾಯಿತು. ನೀರು ಹೊರಹಾಕಲು ಪಾಲಿಕೆಯವರು ಹರಸಾಹಸಪಟ್ಟರು.
ಮಹಾರಾಷ್ಟ ಹಾಗೂ ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯಲ್ಲಿ ಮಳೆ ಪ್ರಮಾಣ ಮತ್ತೆ ಹೆಚ್ಚಳವಾಗಿದೆ. ಕೊಯ್ನಾದಲ್ಲಿ 16.2 ಸೆಂ.ಮೀ., ವಾರಣಾದಲ್ಲಿ 16.8 ಸೆಂ.ಮೀ., ಕಾಳಮ್ಮವಾಡಿಯಲ್ಲಿ 8 ಸೆಂ.ಮೀ., ಮಹಾಬಳೇಶ್ವರದಲ್ಲಿ 15.7 ಸೆಂ.ಮೀ., ನವಜಾದಲ್ಲಿ 15.7 ಸೆಂ.ಮೀ., ರಾಧಾನಗರಿಯಲ್ಲಿ 12 ಸೆಂ.ಮೀ. ಮಳೆ ಬುಧವಾರ ದಾಖಲಾಗಿದೆ. ಹೀಗಾಗಿ ಕೃಷ್ಣಾ ಹಾಗೂ ಉಪ ನದಿಗಳಲ್ಲಿ ನೀರಿನ ಹರಿವಿನ ಮಟ್ಟ ಇನ್ನೂ ಹೆಚ್ಚಾಗಬಹುದು. ದೂಧಗಂಗಾ ನದಿಗೆ ಕಲ್ಲೋಳ ಬಳಿ 32,730 ಕ್ಯುಸೆಕ್ ನೀರು ಹರಿಯುತ್ತಿದೆ. ದೂಧಗಂಗಾ ನದಿಯ 3 ಹಾಗೂ ವೇದಗಂಗಾ ನದಿಯ 3 ಸೇತುವೆಗಳು ಒಂದು ವಾರದಿಂದ ಮುಳುಗಿವೆ.
ಘಟಪ್ರಭಾ ನದಿಗೆ ನಿರ್ಮಿಸಲಾದ ಇಲ್ಲಿನ ರಾಜಾ ಲಖಮಗೌಡ ಜಲಾಶಯದಿಂದ (ಹಿಡಕಲ್ ಅಣೆಕಟ್ಟು) ಎಲ್ಲ ಹತ್ತು ಕ್ರೆಸ್ಟ್ ಗೇಟ್‌ಗಳನ್ನು ತೆರೆದು 10 ಸಾವಿರ ಕ್ಯುಸೆಕ್ ನೀರು ನದಿಗೆ ಬಿಡಲಾಯಿತು.
‘ಮಹಾರಾಷ್ಟ್ರ ಹಾಗೂ ಘಟಪ್ರಭಾ ಜಲಾನಯನ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಮುಂದುವರಿದಿದೆ. ಒಳ ಹರಿವು ಹೆಚ್ಚಾದರೆ ನದಿಗೆ ನೀರು ಹರಿಸುವ ಪ್ರಮಾಣ 20 ಸಾವಿರ ಕ್ಯುಸೆಕ್‌ಗೆ ಏರಿಸಲಾಗುವುದು’ ಎಂದು ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅರವಿಂದ ಜಮಖಂಡಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ನದಿ ನೀರು ಬಿಟ್ಟಿದ್ದರಿಂದ ತೀರದ ಜನರ ಎಚ್ಚರಿಕೆ ವಹಿಸಬೇಕು’ ಎಂದೂ ತಹಶೀಲ್ದಾರ ಮಂಜುಳಾ ನಾಯಕ್ ಮತ್ತು ಕರ್ನಾಟಕ ನೀರಾವರಿ ನಿಗಮದ ಎಂಜಿನಿಯರ್‌ಗಳು ತಿಳಿಸಿದ್ದಾರೆ.
ಮನೆಗಳಿಗೆ ಹಾನಿ:
ಹಾವೇರಿ ಜಿಲ್ಲೆಯಲ್ಲಿ ನಿರಂತರ ಮಳೆಯಿಂದ 610 ಮನೆಗಳಿಗೆ ಹಾನಿಯಾಗಿದೆ. ಜಿಲ್ಲೆಯ ಹಾನಗಲ್, ಹಾವೇರಿ, ರಾಣೆಬೆನ್ನೂರು, ಹಿರೇಕೆರೂರು, ಬ್ಯಾಡಗಿ, ರಟ್ಟೀಹಳ್ಳಿ, ಶಿಗ್ಗಾವಿ ಹಾಗೂ ಸವಣೂರು ತಾಲ್ಲೂಕಿನಲ್ಲಿ ಮಳೆಯಾಗಿದೆ. ಜಿಲ್ಲೆಯಲ್ಲಿ ತುಂಬಿ ಹರಿಯುತ್ತಿದ್ದ ತುಂಗಭದ್ರಾ ಹಾಗೂ ವರದಾ ನದಿಗಳ ನೀರಿನ ಮಟ್ಟ ಕೊಂಚ ಇಳಿಕೆಯಾಗಿದೆ. ‘ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವಿಪತ್ತು ನಿರ್ವಹಣೆಗೆ ತಂಡ ರಚಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ತಿಳಿಸಿದರು.
ಆತಂಕದಲ್ಲಿ ಕೃಷ್ಣಾ ತೀರದ ಗ್ರಾಮಸ್ಥರು:
ಬೆಳಗಾವಿ, ಜಮಖಂಡಿ ಹಾಗೂ ಮಹಾರಾಷ್ಟದ ಕೃಷ್ಣಾ ತೀರದಲ್ಲಿ ಮಹಾಪುರ ಸೃಷ್ಟಿಯಾಗುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಆಲಮಟ್ಟಿ ಜಲಾಶಯದಲ್ಲಿ ನೀರಿನ ಸಂಗ್ರಹ ಕಡಿಮೆ ಮಾಡಲು ಬುಧವಾರ ರಾತ್ರಿ 7ರಿಂದ ಹೊರಹರಿವನ್ನು 2.25 ಲಕ್ಷ ಕ್ಯುಸೆಕ್‌ಗೆ ಹೆಚ್ಚಿಸಲಾಗಿದೆ.
ಜಲಾಶಯದ ಎಲ್ಲಾ 26 ಗೇಟ್‌ಗಳ ಮೂಲಕ ನೀರು ಬಿಡಲಾಗುತ್ತಿದೆ. ಆಲಮಟ್ಟಿ ಜಲಾಶಯದ ಮುಂಭಾಗದ ಕೃಷ್ಣಾ ತೀರದ ಅರಳದಿನ್ನಿ, ಯಲಗೂರು, ಕಾಶಿನಕುಂಟಿ, ಯಲ್ಲಮ್ಮನಬೂದಿಹಾಳ, ಮಸೂತಿ ಗ್ರಾಮಗಳ ವ್ಯಾಪ್ತಿಯ ಜಮೀನಿಗೆ ನೀರು ನುಗ್ಗುವ ಆತಂಕ ಎದುರಾಗಿದೆ.
‘ಈಗಾಗಲೇ ಮುಂಜಾಗೃತೆಗಾಗಿ ನಿತ್ಯವೂ ಕೃಷ್ಣಾ ತೀರ ಗ್ರಾಮಗಳಲ್ಲಿ ಡಂಗುರ ಸಾರಲಾಗುತ್ತಿದೆ. ಅಲ್ಲಿನ ಜನರಿಗೆ ಮುನ್ನೆಚ್ಚರಿಕೆ ನೀಡಲಾಗಿದೆ’ ಎಂದು ನಿಡಗುಂದಿ ತಹಶೀಲ್ದಾರ್ ಎ.ಡಿ. ಅಮರವಾಡಗಿ ತಿಳಿಸಿದರು.
ತುಂಗಭದ್ರಾ:10 ಕ್ರಸ್ಟ್‌ಗೇಟ್‌ಗಳಿಂದ ನೀರು ಹೊರಕ್ಕೆ
ತುಂಗಭದ್ರಾ ಅಣೆಕಟ್ಟೆ ತುಂಬಲು ಒಂದೂವರೆ ಅಡಿಯಷ್ಟೇ ಬಾಕಿ ಉಳಿದಿದ್ದು, ಬುಧವಾರ ಸಂಜೆ 10 ಕ್ರಸ್ಟ್‌ಗೇಟ್‌ಗಳನ್ನು ತೆರೆದು ನೀರನ್ನು ನದಿಗೆ ಬಿಡಲಾಯಿತು.
‘105 ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ 98.06 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. 87,700 ಕ್ಯುಸೆಕ್‌ನಷ್ಟು ಒಳಹರಿವು ಇರುವುದರಿಂದ ಗುರುವಾರ ಬೆಳಿಗ್ಗೆ ವೇಳೆಗೆ ಜಲಾಶಯ ಭರ್ತಿಯಾಗುವ ನಿರೀಕ್ಷೆ ಇದೆ. 18,686 ಕ್ಯುಸೆಕ್‌ನಷ್ಟು ನೀರನ್ನು ಸದ್ಯ ನದಿಗೆ ಹರಿಸಲಾಗುತ್ತಿದ್ದು, ಒಳಹರಿವು ಹೆಚ್ಚಿದರೆ ಇನ್ನಷ್ಟು ಗೇಟ್‌ಗಳನ್ನು ತೆರೆದು ನೀರು ಹೊರಬಿಡುವ ಸಾಧ್ಯತೆ ಇದೆ’ ಎಂದು ತುಂಗಭದ್ರಾ ಮಂಡಳಿಯ ಅಧಿಕಾರಿಗಳು ತಿಳಿಸಿದ್ದಾರೆ.
‘ಜಿಲ್ಲೆಯಲ್ಲಿ ಸದ್ಯ ಮಳೆ ಇಲ್ಲ. ತುಂಗಭದ್ರಾ ನದಿಯಿಂದ ಸದ್ಯ ಎಲ್ಲೂ ಪ್ರವಾಹ ಸ್ಥಿತಿ ಇಲ್ಲ. ಸದ್ಯ 87 ಕ್ಯುಸೆಕ್ ಒಳಹರಿವು ಮಾತ್ರ ಇದೆ, ಹೀಗಾಗಿ ಆತಂಕದ ಸ್ಥಿತಿ ಇಲ್ಲ’ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ‘ಪ್ರಜಾವಾಣಿ’ಗೆ ತಿಳಿಸಿದರು.
ಗಾಳಿ ಅಬ್ಬರ: ಮರ ಬಿದ್ದು ಯುವಕ ಸಾವು
ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಗಾಳಿಯ ಅಬ್ಬರಕ್ಕೆ ಹಲವೆಡೆ ಮರಗಳು ಬಿದ್ದಿವೆ. ಯಲ್ಲಾಪುರ ತಾಲ್ಲೂಕಿನ ಮಾಳಕೊಪ್ಪ ಬಳಿ ಮರ ಬಿದ್ದು ದ್ವಿಚಕ್ರ ವಾಹನ ಸವಾರ ಕಬ್ಬಿನಗದ್ದೆ ಗ್ರಾಮದ ವಿನಯ ಗಾಡಿಗ (27) ಎಂಬುವರು ಮೃತಪಟ್ಟಿದ್ದಾರೆ. ಹೊನ್ನಾವರ ತಾಲ್ಲೂಕಿನ ಹಳದಿಪುರದಲ್ಲಿ ಆಲದ ಮರ ಬಿದ್ದು ನಾಲ್ವರಿಗೆ ಗಾಯಗಳಾಗಿವೆ. ಕಾರವಾರ ಶಿರಸಿ ಸಿದ್ದಾಪುರ ಕುಮಟಾ ಸೇರಿ ಹಲವೆಡೆ ಮರ ಬಿದ್ದು ವಿದ್ಯುತ್ ತಂತಿ ಮನೆಯ ಗೋಡೆಗಳಿಗೆ ಹಾನಿಯುಂಟಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.