ADVERTISEMENT

ಧಾರವಾಡ, ಬೆಳಗಾವಿಯಲ್ಲಿ ಉತ್ತಮ ಮಳೆ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2023, 5:13 IST
Last Updated 15 ಏಪ್ರಿಲ್ 2023, 5:13 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಧಾರವಾಡ: ರಾಜ್ಯದಲ್ಲಿ ಶುಕ್ರವಾರ ಧಾರವಾಡ, ಬೆಳಗಾವಿ ಮತ್ತು ಶಿವಮೊಗ್ಗ ಜಿಲ್ಲೆಯ ಕೆಲವೆಡೆ ಉತ್ತಮ ಮಳೆಯಾಗಿದೆ. ಜಿಲ್ಲೆಯ ಮಲೆನಾಡು ಪ್ರದೇಶಗಳಲ್ಲಿ ಶುಕ್ರವಾರ ಸಂಜೆ ಆಲಿಕಲ್ಲು ಸಹಿತ ಜೋರಾಗಿ ಮಳೆ ಸುರಿಯಿತು.‌

ಧಾರವಾಡ ತಾಲ್ಲೂಕಿನಾದ್ಯಂತ ಸಾಯಂಕಾಲ ಆರಂಭವಾದ ಮಳೆ ರಾತ್ರಿಯವರೆಗೂ ನಿರಂತರವಾಗಿ ಸುರಿಯುತ್ತಲೇ ಇತ್ತು. ಕಲಘಟಗಿ ತಾಲ್ಲೂಕು ಭಾಗದಲ್ಲೂ ಉತ್ತಮ ಮಳೆಯಾಗಿದೆ. ಗುಡುಗು ಸಹಿತ ಮಳೆಯಾದ್ದರಿಂದ ಆಗಾಗ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳುತ್ತಿತ್ತು.

ಅಳ್ನಾವರ ವ್ಯಾಪ್ತಿಯಲ್ಲಿ ಬಿರುಗಾಳಿ ಸಹಿತ ಮಳೆ ಜೋರಾಗಿ ಸುರಿಯಿತು. ಹೊನ್ನಾಪುರದಲ್ಲಿ ಸರ್ಕಾರಿ ಶಾಲೆ ಮೇಲ್ಛಾವಣಿ ಹಾರಿದೆ. ಆಲಿಕಲ್ಲು ಸುರಿದ ಪರಿಣಾಮ ಮಾವು ಬೆಳೆ ನೆಲ ಕಚ್ಚಿದೆ. ಅರವಟಗಿ, ಕಂಬಾರಗಣವಿ, ಕೋಗಲಗೇರಿ, ಕಾಶೇನಟ್ಟಿ ಬಳಿ ಜೋರಾಗಿ ಮಳೆ ಸುರಿಯಿತು.

ADVERTISEMENT

‘ಬಿಸಿಲ ಝಳಕ್ಕೆ ಹಳದಿ ಬಣ್ಣಕ್ಕೆ ತಿರುಗಿದ್ದ ಕಬ್ಬಿನ ಬೆಳೆಗೆ ಮಳೆ ಬಿದ್ದಿದ್ದು ಸಂಜೀವಿನಿಯಂತಾಗಿದೆ’ ಎಂದು ರೈತರು ಹರ್ಷ ವ್ಯಕ್ತಪಡಿಸಿದರು.

ಬೆಳಗಾವಿ ವರದಿ: ಬೆಳಗಾವಿ ನಗರವೂ ಸೇರಿದಂತೆ ಹಲವೆಡೆ ಗುಡುಗು–ಮಿಂಚು ಸಹಿತ ಮಳೆ ಸುರಿಯಿತು. ತಾಲ್ಲೂಕಿನ ಹಿರೇಬಾಗೇವಾಡಿಯಲ್ಲಿ ಮರ ನೆಲಕ್ಕುರುಳಿದ್ದು, ವಿದ್ಯುತ್‌ ಕಂಬಕ್ಕೆ ಹಾನಿಯಾಗಿದೆ.

ಚನ್ನಮ್ಮನ ಕಿತ್ತೂರು ತಾಲ್ಲೂಕಿನ ಎಂ.ಕೆ.ಹುಬ್ಬಳ್ಳಿಯಲ್ಲಿ ಸಿಡಿಲಿನ ಆರ್ಭಟಕ್ಕೆ ಮೂರು ತೆಂಗಿನ ಮರ ಹೊತ್ತಿ ಉರಿದಿವೆ. ಶಿರಸಿಯ ಕೆಲ ಭಾಗಗಳಲ್ಲಿ ಮಧ್ಯಾಹ್ನ ಮಳೆಯಾಗಿದೆ.

ಸಾಗರ ವರದಿ: ನಗರದಲ್ಲಿ ಶುಕ್ರವಾರ ಗುಡುಗು, ಸಿಡಿಲು ಸಮೇತ ಕೆಲ ಹೊತ್ತು ಮಳೆಯಾಯಿತು. ಸೊರಬ ಸುತ್ತಮುತ್ತ ತುಂತುರು ಮಳೆಯಾಗಿದೆ.

ಬಿಸಿಲ ಝಳ: ತತ್ತರಿಸಿದ ಜನ

ಬೆಂಗಳೂರು: ರಾಜ್ಯದಲ್ಲಿ ಮತ್ತಷ್ಟು ತಾಪಮಾನ ಏರಿಕೆಯಾಗಿದ್ದು, ಬಿಸಿಲ ಝಳವು ಜನರನ್ನು ತತ್ತರಿಸುವಂತೆ ಮಾಡಿದೆ. ವಿಪರೀತ ಬಿಸಿಲು ಜನರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ.

ನಿರೀಕ್ಷಿತ ಪ್ರಮಾಣದಲ್ಲಿ ಬೇಸಿಗೆಯಲ್ಲಿ ಮಳೆಯಾಗದ ಪರಿಣಾಮ ಕರಾವಳಿ, ಮಲೆನಾಡು, ದಕ್ಷಿಣ ಒಳನಾಡು, ಉತ್ತರ ಒಳನಾಡು ಜಿಲ್ಲೆಗಳಲ್ಲಿ ಬಿಸಿಲು ಕೆಂಡದಂತೆ ಸುಡುತ್ತಿದೆ.

ಕಲಬುರಗಿ ಜಿಲ್ಲೆಯಲ್ಲಿ ಶುಕ್ರವಾರ ಗರಿಷ್ಠ ಉಷ್ಣಾಂಶ 41.34 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿತ್ತು. ಮಲೆನಾಡು ವ್ಯಾಪ್ತಿಯಲ್ಲೂ ಈ ಬಾರಿ ನಿರೀಕ್ಷೆಯಂತೆ ಮಳೆಯಾಗಿಲ್ಲ. ಇದರಿಂದ ತಾಪಮಾನ ಮತ್ತಷ್ಟು ಏರಿಕೆ ಕಂಡಿದೆ.

ಬೀದರ್‌, ದಾವಣಗೆರೆ, ಚಿತ್ರದುರ್ಗ, ಹಾವೇರಿ, ಹುಬ್ಬಳ್ಳಿ–ಧಾರವಾಡ, ಗದಗದಲ್ಲೂ ತಾಪಮಾನ ಏರಿಕೆಯಾಗಿದೆ. ಬಿಸಿಲಿನ ಬೇಗೆಯಿಂದ ವೃದ್ಧರು ಹಾಗೂ ಮಕ್ಕಳು ಬಸವಳಿಯುತ್ತಿದ್ದಾರೆ.

ಮಳೆ ಸಾಧ್ಯತೆ: ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ, ಉತ್ತರ ಒಳನಾಡಿನ ಬೆಳಗಾವಿ, ಬೀದರ, ಹಾವೇರಿ, ಧಾರವಾಡ, ಬಾಗಲಕೋಟೆ, ಕಲಬುರಗಿ, ವಿಜಯಪುರ ಹಾಗೂ ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಮುಂದಿನ 48 ಗಂಟೆಗಳಲ್ಲಿ ಗುಡುಗು ಮಿಂಚು ಸಹಿತ ಮಳೆಯಾಗುವ ಸಾಧ್ಯತೆಯಿದೆ.

ಆದರೆ, ಒಳನಾಡಿನಲ್ಲಿ ಒಣಹವೆ ಮುಂದುವರಿಯಲಿದೆ. ಜತೆಗೆ, ಬಿಸಿಗಾಳಿಯ ವೇಗವು 30–40 ಕಿ.ಮೀ. ತಲುಪುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಬೆಂಗಳೂರಿನಲ್ಲಿ ನಿರ್ಮಲ ಆಕಾಶ ಇರಲಿದೆ ಎಂದೂ ಐಎಂಡಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.