ADVERTISEMENT

ಜನವಸತಿ ಪ್ರದೇಶದಲ್ಲಿ ಬಾರ್‌: ದೂರು ಕೊಟ್ಟವರ ವಿರುದ್ಧವೇ ಎಫ್‌ಐಆರ್ - ಮುನಿರತ್ನ

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 22:27 IST
Last Updated 29 ಜನವರಿ 2026, 22:27 IST
ಮುನಿರತ್ನ
ಮುನಿರತ್ನ   

ಬೆಂಗಳೂರು: ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಲ್ಲಿ 138 ಬಾರ್‌ಗಳು ಇದ್ದು, ಇವುಗಳಲ್ಲಿ ಹೆಚ್ಚಿನವು ಜನವಸತಿ ಪ್ರದೇಶಗಳಲ್ಲಿವೆ. ಈ ಬಗ್ಗೆ ದೂರು ಕೊಡಲು ಹೋಗುವ ಮಹಿಳೆಯರ ವಿರುದ್ಧವೇ ಎಫ್‌ಐಆರ್‌ ದಾಖಲಿಸಲಾಗುತ್ತಿದೆ ಎಂದು ಬಿಜೆಪಿಯ ಮುನಿರತ್ನ ದೂರಿದರು.

ವಿಧಾನಸಭೆಯಲ್ಲಿ ಮಾತನಾಡಿದ ಅವರು, ‘ಈ ಬಾರ್‌ಗಳಿಗೆ ಹೇಗೆ ಅನುಮತಿ ನೀಡಲಾಗಿದೆ ಎಂದು ಆರ್‌ಟಿಐ ಅಡಿ 10 ಇಲಾಖೆಗಳಿಗೆ 1,380 ಅರ್ಜಿಗಳನ್ನು ಸಲ್ಲಿಸಿದ್ದರೂ ಈವರೆಗೆ ಉತ್ತರ ಸಿಕ್ಕಿಲ್ಲ’ ಎಂದರು.

‘ನನ್ನ ಮೇಲೆ ಮೊಟ್ಟೆ ಎಸೆಯುವ, ಮಸಿ ಬಳಿಯುವ ಮತ್ತು ಹಲ್ಲೆ ನಡೆಸುವ ಪ್ರಯತ್ನ ಮಾಡುತ್ತಿದ್ದಾರೆ. ನನಗೆ ರಕ್ಷಣೆ ನೀಡಬೇಕು. ನನಗೆ ಕೊಲೆ ಬೆದರಿಕೆ ಇರುವುದರಿಂದ ಗನ್‌ ಮ್ಯಾನ್‌ ಕೊಡಿ ಎಂದು ಸರ್ಕಾರಕ್ಕೆ ಕೇಳಿದ್ದೆ, ಗನ್‌ ಮ್ಯಾನ್‌ ಕೊಟ್ಟಿರಲಿಲ್ಲ. ನೀವು (ಮುಖ್ಯಮಂತ್ರಿ) ನನ್ನ ಕ್ಷೇತ್ರಕ್ಕೆ ಬಂದಾಗ ಮನವಿ ಮಾಡಿದ್ದೆ. ಮಾರನೇ ದಿನವೇ ಗನ್‌ ಮ್ಯಾನ್‌ ಕೊಟ್ಟಿದ್ದಾರೆ. ಅದಕ್ಕಾಗಿ ನಿಮಗೆ ಧನ್ಯವಾದ. ಆರ್‌.ಆರ್‌.ನಗರದಲ್ಲಿ ನನ್ನ ವಿರುದ್ಧ ಏನು ಬೇಕಾದರೂ ಆಗಬಹುದು’ ಎಂದು ಹೇಳಿದರು.

ADVERTISEMENT

‘ಆ ಕ್ಷೇತ್ರಕ್ಕೆ ಒಳ್ಳೆಯ ಅಧಿಕಾರಿಗಳು ಬರುವ ಸ್ಥಿತಿ ಇಲ್ಲ. ಉಪಮುಖ್ಯಮಂತ್ರಿ ಕಡೆಯವರ ಬೆದರಿಕೆಯಿಂದಾಗಿ ಯಾರೂ ಬರಲು ಒಪ್ಪುತ್ತಿಲ್ಲ. ನನ್ನ ಮೇಲೆ ಸುಳ್ಳು ಕೇಸ್‌ಗಳು, ಅತ್ಯಾಚಾರ ಕೇಸ್‌ಗಳನ್ನು ಹಾಕುತ್ತೇವೆ ಎನ್ನುವರು ಮಾತ್ರ ಬರುತ್ತಾರೆ. ಮುಂದೆ ಹಣೆ ಬರಹ ಇದ್ದಂತೆ ಆಗುತ್ತದೆ. ಯಾರೂ ಯಾರ ವಿರುದ್ಧವೂ ತೊಂದರೆ ಕೊಟ್ಟು, ಹಿಂಸೆ ಕೊಟ್ಟು ಆನಂದಪಡಬಾರದು’ ಎಂದರು.

‘ಕ್ಷೇತ್ರದಲ್ಲಿ ನನ್ನ ಕಾರಿಗೆ ಕಲ್ಲು ಹೊಡೆದವರ ವಿರುದ್ಧ ಪೊಲೀಸರಿಗೆ ದೂರು ಕೊಟ್ಟರೂ ಪ್ರಕರಣ ದಾಖಲಿಸುತ್ತಿಲ್ಲ. ಆದ್ದರಿಂದ ನನಗೆ ಸಭಾಧ್ಯಕ್ಷರೇ ರಕ್ಷಣೆ ಒದಗಿಸಬೇಕು’ ಎಂದು ಮುನಿರತ್ನ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.