ಸಿದ್ದರಾಮಯ್ಯ, ಮುಖ್ಯಮಂತ್ರಿ
– ಪ್ರಜಾವಾಣಿ ಚಿತ್ರ
ಬೆಂಗಳೂರು: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಉಳಿಕೆಯಾಗಿರುವ ಹೆಚ್ಚುವರಿ ₹600 ಕೋಟಿಯನ್ನು ಸರ್ಕಾರಿ ವೈದ್ಯಕೀಯ ಕಾಲೇಜುಗಳ ಮೂಲಸೌಕರ್ಯಕ್ಕೆ ಬಳಸಿಕೊಳ್ಳಲು ಸರ್ಕಾರ ಮುಂದಾಗಿದೆ.
ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಕುರಿತು ಪ್ರಸ್ತಾಪಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಶ್ವವಿದ್ಯಾಲಯದ ನೌಕರರ ವೇತನ ಮತ್ತು ಇತರೆ ವೆಚ್ಚಗಳಿಗೆ ಖರ್ಚು ಮಾಡಿದ ನಂತರ ಸಾಕಷ್ಟು ಹಣ ಉಳಿದಿದೆ. ಈ ಹಣವನ್ನು ವೈದ್ಯಕೀಯ ಕಾಲೇಜುಗಳ ಅಭಿವೃದ್ಧಿಗೆ ನೀಡಬೇಕು ಎಂದು ಸೂಚಿಸಿದರು.
‘ವಿಶ್ವವಿದ್ಯಾಲಯದ ಭವಿಷ್ಯದ ಯೋಜನೆಗಳಿಗೆ ಈ ಹಣದ ಅಗತ್ಯವಿದೆ ಎಂದು ಕುಲಪತಿ ಎಂ.ಕೆ. ರಮೇಶ್ ಸಮಜಾಯಿಷಿ ನೀಡಲು ಮುಂದಾದರು. ಅವರ ಮಾತನ್ನು ಅರ್ಧಕ್ಕೆ ತಡೆದ ಮುಖ್ಯಮಂತ್ರಿ, ಸರ್ಕಾರ ದೊಡ್ಡದೋ, ವಿಶ್ವವಿದ್ಯಾಲಯ ದೊಡ್ಡದೊ? ಹಣ ವರ್ಗಾವಣೆ ಮಾಡಲು ಏಕೆ ಮೀನಮೇಷ, ಹೇಳಿದಷ್ಟು ಮಾಡಿ ಎಂದು ತರಾಟೆಗೆ ತೆಗೆದುಕೊಂಡರು’ ಎಂದು ಮೂಲಗಳು ತಿಳಿಸಿವೆ.
‘ವಿಶ್ವವಿದ್ಯಾಲಯದಲ್ಲಿದ್ದ ₹1,000 ಕೋಟಿ ಉಳಿತಾಯ ನಿಧಿಯಲ್ಲಿ ₹400 ಕೋಟಿಯನ್ನು ರಾಮನಗರದಲ್ಲಿ ವಿಶ್ವವಿದ್ಯಾಲಯ ಕ್ಯಾಂಪಸ್ ನಿರ್ಮಾಣಕ್ಕೆ ವರ್ಗಾಯಿಸಿದ್ದು, ಈಗ, ₹600 ಕೋಟಿ ಉಳಿದಿದೆ. ಅಧಿಕಾರಕ್ಕೆ ಬಂದ ಎಲ್ಲ ಸರ್ಕಾರಗಳೂ ವಿಶ್ವವಿದ್ಯಾಲಯದ ಈ ಉಳಿಕೆ ನಿಧಿಯನ್ನು ಬೇರೆ ಉದ್ದೇಶಗಳಿಗೆ ವರ್ಗಾಯಿಸುವ ಪ್ರಯತ್ನ ನಡೆಸಿವೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲೂ ಬೇಡಿಕೆ ಬಂದಿತ್ತು. ಆದರೆ, ಸಿಂಡಿಕೇಟ್ ಸಮ್ಮತಿ ನೀಡದ ಕಾರಣ ಪ್ರಕ್ರಿಯೆ ಸ್ಥಗಿತವಾಗಿತ್ತು. ಈಗ ಈ ಸರ್ಕಾರವೂ ಅಂತಹ ಪ್ರಯತ್ನ ನಡೆಸಿದೆ’ ಎಂದು ವಿಶ್ವವಿದ್ಯಾಲಯದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ವೈದ್ಯಕೀಯ ಶಿಕ್ಷಣ ಇಲಾಖೆಗೆ ಬಜೆಟ್‌ನಲ್ಲಿ ₹4,331 ಕೋಟಿ ಅನುದಾನ ಹಂಚಿಕೆ ಮಾಡಲಾಗಿತ್ತು. ಇದುವರೆಗೆ ₹3,099 ಕೋಟಿ ಬಿಡುಗಡೆಯಾಗಿದೆ. ₹3,005 ಕೋಟಿ ವೆಚ್ಚ ಮಾಡಲಾಗಿದೆ. ವೈದ್ಯಕೀಯ ಕಾಲೇಜುಗಳ ನಿರ್ಮಾಣ ಮತ್ತು ಉಪಕರಣಗಳ ಖರೀದಿಗೆ ಈಗಾಗಲೇ ₹400 ಕೋಟಿ ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ನಿರ್ಮಾಣಕ್ಕಾಗಿ ₹130 ಕೋಟಿ ಅನುದಾನ ಒದಗಿಸಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಗದಗ, ಕೊಪ್ಪಳ, ಕಾರವಾರ, ಕೊಡಗು ಜಿಲ್ಲೆಗಳಲ್ಲಿ ನಿರ್ಮಾಣ ಹಂತದಲ್ಲಿರುವ 450 ಹಾಸಿಗೆ ಆಸ್ಪತ್ರೆಗಳ ನಿರ್ಮಾಣವನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಕ್ಯಾನ್ಸರ್ ಪ್ರಮಾಣ ಹೆಚ್ಚಳವಾಗಲು ಕಾರಣ ಕುರಿತು ಅಧ್ಯಯನ ನಡೆಸಿ, ವರದಿ ಸಲ್ಲಿಸಬೇಕು. ಅಂತಾರಾಷ್ಟ್ರೀಯ ಗುಣಮಟ್ಟದ ಚಿಕಿತ್ಸೆ ರಾಜ್ಯದಲ್ಲಿಯೇ ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.