ADVERTISEMENT

3 ಬಾರಿ ಸರ್ಜಿಕಲ್‌ ಸ್ಟ್ರೈಲ್‌, ಮೂರನೆಯದರ ಬಗ್ಗೆ ಏನೂ ಹೇಳಲಾರೆ– ರಾಜನಾಥ ಸಿಂಗ್‌

ಉಗ್ರರ ಮೇಲಿನ ದಾಳಿಯಿಂದ ಪ್ರತಿಪಕ್ಷಗಳಿಗೆ ಏಕೆ ತೊಂದರೆ?

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2019, 16:37 IST
Last Updated 9 ಮಾರ್ಚ್ 2019, 16:37 IST
   

ಮಂಗಳೂರು: ‘ನಾವು ಪಾಕಿಸ್ತಾನದ ನಾಗರಿಕರು, ಅಲ್ಲಿನ ಸೇನೆಯ ಮೇಲೆ ದಾಳಿ ಮಾಡಿಲ್ಲ. ನಿಖರ ಮಾಹಿತಿಯ ಮೇಲೆ ಉಗ್ರರ ಅಡಗುದಾಣಗಳ ಮೇಲೆ ದಾಳಿ ಮಾಡಲಾಗಿದೆ. ಇದರಿಂದ ಪಾಕಿಸ್ತಾನ ಚಿಂತೆಗೀಡಾಗುವುದು ಸಹಜ. ಆದರೆ, ಈ ದಾಳಿಯಿಂದ ನಮ್ಮಲ್ಲಿಯ ಕೆಲವರಿಗೂ ಚಿಂತೆ ಶುರುವಾಗಿದೆ’ ಎಂದು ಕೇಂದ್ರ ಗೃಹಸಚಿವ ರಾಜನಾಥ ಸಿಂಗ್‌ ಹೇಳಿದರು.

ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ನಗರದಲ್ಲಿ ಶನಿವಾರ ಆಯೋಜಿಸಿದ್ದ ಪ್ರಬುದ್ಧರ ಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ದೇಶದ ಸೈನಿಕರು ಯುದ್ಧ ವಿಮಾನಗಳ ಮೂಲಕ ಪಾಕಿಸ್ತಾನದಲ್ಲಿ ಪುಷ್ಪವೃಷ್ಟಿ ಮಾಡಲು ಹೋಗಿರಲಿಲ್ಲ. ಬದಲಾಗಿ ಉಗ್ರರ ತಾಣಗಳನ್ನು ಧ್ವಂಸ ಮಾಡಿದ್ದಾರೆ. ಸೇನೆಯ ಕಾರ್ಯವನ್ನು ಶ್ಲಾಘಿಸುವ ಬದಲು, ಓಸಾಮಾಜಿ, ಹಾಫೀಜ್‌ಜಿ ಎನ್ನುವ ಪ್ರತಿಪಕ್ಷಗಳ ಮುಖಂಡರು, ಸೇನೆಯ ಕಾರ್ಯಾಚರಣೆಯನ್ನೇ ಅನುಮಾನದಿಂದ ನೋಡುತ್ತಿದ್ದಾರೆ’ ಎಂದು ಆಪಾದಿಸಿದರು.

ADVERTISEMENT

ಕಾಶ್ಮೀರದಲ್ಲಿ ಸಮಸ್ಯೆ ಇರುವುದು ನಿಜ. ಅದಕ್ಕೆ ಪಾಕಿಸ್ತಾನವೇ ಕಾರಣ. ಈ ಸಮಸ್ಯೆಯನ್ನೂ ಭಾರತ ಪರಿಹಾರ ಮಾಡಲಿದೆ ಎಂದ ಅವರು, ‘ಸರ್ಕಾರ ರಚಿಸುವುದಕ್ಕಾಗಿ ನಾವು ರಾಜಕಾರಣ ಮಾಡುವುದಿಲ್ಲ. ದೇಶದ ನಿರ್ಮಾಣಕ್ಕಾಗಿ ಬಿಜೆಪಿ ರಾಜಕೀಯ ಮಾಡುತ್ತದೆ’ ಎಂದರು.

3ನೇ ಸರ್ಜಿಕಲ್‌ ಸ್ಟ್ರೈಕ್‌–ಬಹಿರಂಗ ಇಲ್ಲ

ಐದು ವರ್ಷದಲ್ಲಿ ಮೂರು ಬಾರಿ ಸರ್ಜಿಕಲ್ ಸ್ಟ್ರೈಕ್ ನಡೆಸಲಾಗಿದೆ. ಉರಿ ದಾಳಿಗೆ ಪ್ರತೀಕಾರವಾಗಿ ಒಂದು ದಾಳಿ ನಡೆದರೆ, ಮತ್ತೊಂದು ಬಾಲಾಕೋಟ್ ಮೇಲೆ ನಡೆದಿದೆ. ಆದರೆ ಭಾರತ ನಡೆಸಿದ ಮೂರನೇ ದಾಳಿ ಬಗ್ಗೆ ನಾನು ಮಾಹಿತಿಯನ್ನು ಹಂಚಿಕೊಳ್ಳಲಾರೆ ಎಂದು ಗೃಹ ಸಚಿವ ರಾಜನಾಥ ಸಿಂಗ್‌ ಹೇಳಿದರು.

ಭಯೋತ್ಪಾದಕರನ್ನು ಪ್ರೋತ್ಸಾಹಿಸುವ ಮತ್ತು ಭಾರತದ ನೆಲವನ್ನು ಅತಿಕ್ರಮಿಸುವ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸುವ ಮೂಲಕ, ‘ನಾವು ಯಾರ ತಂಟೆಗೂ ಹೋಗಲ್ಲ, ನಮ್ಮ ತಂಟೆಗೆ ಬಂದರೆ ಬಿಡುವುದಿಲ್ಲ’ ಎನ್ನುವ ಪ್ರಬಲ ಸಂದೇಶ ನೀಡಿದ್ದೇವೆ ಎಂದರು.

ಕ್ರಮ ನಿಶ್ಚಿತ: ಭಯೋತ್ಪಾದನೆಯ ವಿರುದ್ಧ ಯಾವುದೇ ರೀತಿಯ ಕಾರ್ಯಾಚರಣೆಗೆ ಭಾರತ ಸಿದ್ಧವಾಗಿದೆ. ಉಗ್ರರ ವಿರುದ್ಧ ಕಠಿಣ ಕ್ರಮ ನಿಶ್ಚಿತ ಎಂದು ಗೃಹ ಸಚಿವರು ಪುನರುಚ್ಚರಿಸಿದರು.

‘ಭಾರತದ ರಾಜತಾಂತ್ರಿಕತೆಗೆ ಬಹುದೊಡ್ಡ ಗೆಲುವು ಸಿಗುತ್ತಿದೆ. ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಇಡೀ ವಿಶ್ವವೇ ಭಾರತದ ಬೆಂಬಲಕ್ಕೆ ನಿಂತಿದೆ. ಆರ್ಗನೈಜೇಶನ್‌ ಆಫ್‌ ಇಸ್ಲಾಮಿಕ್‌ ಕೋ–ಆಪರೇಶನ್‌ನಲ್ಲಿ ಭಾಗವಹಿಸಲು ಪಾಕಿಸ್ತಾನದ ವಿರೋಧದ ನಡುವೆಯೂ ಭಾರತಕ್ಕೆ ಇದೇ ಮೊದಲ ಬಾರಿಗೆ ಅಧಿಕೃತ ಆಹ್ವಾನ ದೊರೆತಿದೆ. ಜಾತಿ, ಧರ್ಮ ಆಧಾರಿತ ರಾಜಕಾರಣವನ್ನು ನಾವು ಮಾಡುವುದಿಲ್ಲ. ಬದಲಾಗಿ ನ್ಯಾಯ ಹಾಗೂ ಮಾನವೀಯತೆಯ ಆಧಾರದಲ್ಲಿ ರಾಜಕಾರಣ ಮಾಡುತ್ತಿದ್ದೇವೆ ಎಂಬುದಕ್ಕೆ ಇದಕ್ಕಿಂತ ದೊಡ್ಡ ನಿದರ್ಶನ ಬೇಕಾಗಿಲ್ಲ’ ಎಂದು ಹೇಳಿದರು.

‘ಸಂಪದ್ಭರಿತ, ಶಕ್ತಿಶಾಲಿ, ಜ್ಞಾನಭರಿತ ದೇಶದ ನಿರ್ಮಾಣ ನಮ್ಮ ಗುರಿ. ದೇಶವನ್ನು ವಿಶ್ವಗುರು ಮಾಡುವತ್ತ ಹೆಜ್ಜೆ ಇರಿಸಿದ್ದೇವೆ ಅದಕ್ಕಾಗಿ ಎಲ್ಲರ ಸಹಕಾರವನ್ನು ನಿರೀಕ್ಷಿಸುತ್ತಿದ್ದೇವೆ’ ಎಂದರು.

*ಆರ್ಥಿಕ ಅಪರಾಧಿಗಳ ವಿರುದ್ಧ ಕ್ರಮ ನಿಶ್ಚಿತ. ದೇಶದಿಂದ ಪಲಾಯನ ಮಾಡಿದವರನ್ನು ಭಾರತಕ್ಕೆ ಕರೆತರುವ ನಿಟ್ಟಿನಲ್ಲಿ ಎಲ್ಲ ಪ್ರಯತ್ನ ನಡೆದಿದೆ.

- ರಾಜನಾಥ ಸಿಂಗ್‌, ಕೇಂದ್ರ ಗೃಹ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.