ADVERTISEMENT

ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಲು ರಾಜ್ಯ ಸರ್ಕಾರ ಚಿಂತನೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2020, 7:30 IST
Last Updated 21 ಅಕ್ಟೋಬರ್ 2020, 7:30 IST
ಕನ್ನಡ ಭವನ
ಕನ್ನಡ ಭವನ   

ಬೆಂಗಳೂರು: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಈ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

‘ಕೋವಿಡ್‌ ಮತ್ತು ಪ್ರವಾಹದ ಕಾರಣದಿಂದಾಗಿ ಈ ಬಾರಿ ಪ್ರಶಸ್ತಿಗಳನ್ನು ನೀಡುವುದು ಬೇಡ ಎಂದು ಕೆಲವರು ಒತ್ತಾಯಿಸುತ್ತಿದ್ದಾರೆ. ಈ ವರ್ಷ ಪ್ರಶಸ್ತಿ ಪ್ರಕಟಿಸದೇ ಬಾಕಿ ಉಳಿಸಿಕೊಂಡರೆ ಅದಕ್ಕೂ ಟೀಕೆ ಎದುರಿಸಬೇಕಾಗುತ್ತದೆ. ಅಲ್ಲದೆ, ಮುಂದಿನ ವರ್ಷ ಪ್ರಶಸ್ತಿಗಳ ಸಂಖ್ಯೆಯನ್ನೂ ಹೆಚ್ಚಿಸಬೇಕಾಗುತ್ತದೆ. ಈ ಕಾರಣಕ್ಕೆ ಪ್ರಶಸ್ತಿ ನೀಡುವ ಬಗ್ಗೆ ಚಿಂತನೆ ನಡೆಸಲಾಗಿದೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಪ್ರಶಸ್ತಿ ವಿಜೇತರ ಪಟ್ಟಿ ಪ್ರಕಟಿಸಿದರೂ ಅದರ ಪ್ರದಾನ ಕಾರ್ಯಕ್ರಮ ಜನವರಿ ಅಥವಾ ಕೋವಿಡ್‌ ಕಡಿಮೆ ಆದ ಬಳಿಕವೇ ನಡೆಯಲಿದೆ. ಕಾರ್ಯಕ್ರಮವನ್ನು ಸರಳವಾಗಿ ಹಮ್ಮಿಕೊಳ್ಳಲಾಗುವುದು. ಸರ್ಕಾರ ತಾನು ಮಾಡಬೇಕಾದ ಕಾರ್ಯಗಳನ್ನು ಮಾಡಲೇಬೇಕು. ವಿವಿಧ ವಲಯಗಳ ಬೇಡಿಕೆಗಳಿಗೆ ಮಣಿಯುತ್ತಾ ಹೋದರೆ ಸರ್ಕಾರವೇ ಸ್ಥಗಿತವಾಗುವ ಸ್ಥಿತಿ ಉದ್ಭವಿಸಬಹುದು. ಈ ಬೆಳವಣಿಗೆಯನ್ನುಮುಖ್ಯಮಂತ್ರಿಯವರ ಗಮನಕ್ಕೆ ತಂದ ಬಳಿಕ ಒಪ್ಪಿಗೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ADVERTISEMENT

‘ಪ್ರಶಸ್ತಿ ನೀಡಬಾರದು ಎಂಬ ಒತ್ತಾಯ ಒಂದು ವರ್ಗದಿಂದ ಕೇಳಿ ಬಂದಿದ್ದರಿಂದಾಗಿ ಮುಖ್ಯಮಂತ್ರಿಯವರು ಗೊಂದಲಕ್ಕೆ ಸಿಲುಕಿದ್ದರು. ಚರ್ಚೆಯ ಬಳಿಕ ಪ್ರಶಸ್ತಿ ಪ್ರಕಟಿಸಲು ಅವರು ಒಪ್ಪಿಗೆ ನೀಡಿದ್ದಾರೆ’ ಎಂದು ಮುಖ್ಯಮಂತ್ರಿ ಕಚೇರಿಯ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.