ADVERTISEMENT

ರಾಜ್ಯೋತ್ಸವ ಪ್ರಶಸ್ತಿ ಕೊನೆಗೂ ಪ್ರಕಟ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2018, 20:30 IST
Last Updated 28 ನವೆಂಬರ್ 2018, 20:30 IST
   

ಬೆಂಗಳೂರು: ಸಾಹಿತಿ ಕಾಮರೂಪಿ (ಎಂ.ಎಸ್‌. ಪ್ರಭಾಕರ್), ಯಕ್ಷಗಾನ ಕಲಾವಿದ ಹಿರಿಯಡ್ಕ ಗೋಪಾಲ ರಾವ್‌, ಪತ್ರಕರ್ತ ಜಿ.ಎನ್. ರಂಗನಾಥರಾವ್‌, ಪರಿಸರ ಪ್ರೇಮಿ ಕಲ್ಮನೆ ಕಾಮೇಗೌಡ, ಜಾನಪದ ಕಲಾವಿದ ಗುರುವ ಕೊರಗ, ಒಲಿಂಪಿಯನ್ ಕ್ರೀಡಾಪಟು ಕೆನೆತ್‌ ಪೊವೆಲ್‌ಸೇರಿದಂತೆ63 ಸಾಧಕರಿಗೆ 2018ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ.

ಗುರುವಾರ ಸಂಜೆ 6.30ಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಪ್ರಶಸ್ತಿಯು ₹1 ಲಕ್ಷ, 20 ಗ್ರಾಂ ಚಿನ್ನ ಹಾಗೂ ಫಲಕ ಒಳಗೊಂಡಿದೆ.

ಈ ಬಾರಿಯ ವಿಶೇಷವೆಂದರೆ ಪ್ರಶಸ್ತಿ ಪಡೆದ ಗೋಪಾಲರಾವ್ ಹಾಗೂ ಗುರುವ ಇಬ್ಬರೂ ನೂರು ವರ್ಷ ಹಿರೀಕರು. ಕರಾವಳಿ ಹಾಗೂ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳ ಸಾಧಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ADVERTISEMENT

ತಳ ಸಮುದಾಯದ ಅನೇಕರನ್ನು ಸರ್ಕಾರ ಗುರುತಿಸಿದೆ. ನವೆಂಬರ್ 1ರ ರಾಜ್ಯೋತ್ಸವದ ದಿನ ಪ್ರಶಸ್ತಿ ‍ಪ‍್ರದಾನ ಮಾಡುವುದು ರೂಢಿ. ವಿಧಾನಸಭಾ ಉಪ ಚುನಾವಣೆ ನೀತಿ ಸಂಹಿತೆಯ ಕಾರಣಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭ ಮುಂದೂಡಲಾಗಿತ್ತು. ನ.8ರಂದು ನೀತಿ ಸಂಹಿತೆ ಮುಗಿಯಲಿದ್ದು, ಅದೇ ದಿನ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಚಿವಾಲಯ ತಿಳಿಸಿತ್ತು.

ಬಳಿಕ ನ.15ಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿತ್ತು. ಕೇಂದ್ರ ಸಚಿವ ಎಚ್.ಎನ್‌. ಅನಂತ್‌ ಕುಮಾರ್ ನಿಧನರಾಗಿದ್ದರಿಂದ ಮತ್ತೆ ಸಮಾರಂಭ ಮುಂದೂಡಿಕೆಯಾಗಿತ್ತು. ಬುಧವಾರ ರಾತ್ರಿ ಪುರಸ್ಕೃತರ ಪಟ್ಟಿಯನ್ನು ಆಖೈರುಗೊಳಿಸಲಾಯಿತು.

ಪ್ರಶಸ್ತಿ ಆಯ್ಕೆಗಾಗಿ ರಚಿಸಲಾಗಿದ್ದ ಸಮಿತಿಯು 126 ಸಾಧಕರ ಪಟ್ಟಿಯನ್ನು ಮುಖ್ಯಮಂತ್ರಿ ಅವರಿಗೆ ಸಲ್ಲಿಸಿತ್ತು. ಈ ಪಟ್ಟಿಗೆ ಕೆಲವು ಅಕಾಡೆಮಿ ಅಧ್ಯಕ್ಷರು ಆಕ್ಷೇಪ ವ್ಯಕ್ತಪಡಿಸಿದ್ದರು. ಕೆಲವು ಹೆಸರುಗಳನ್ನು ತೆಗೆದು ಹಾಕಿ 63ಕ್ಕೆ ಸೀಮಿತಗೊಳಿಸಲಾಯಿತು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.