ADVERTISEMENT

ಪ್ರೀತಿ, ವಾತ್ಸಲ್ಯ ಶಾಶ್ವತವಾಗಿಸುವ ಕ್ಷಣ...ರಕ್ಷಾ ಬಂಧನ

ಮೇಘಾ ಗೊರವರ
Published 25 ಆಗಸ್ಟ್ 2018, 10:36 IST
Last Updated 25 ಆಗಸ್ಟ್ 2018, 10:36 IST
   

ಶ್ರಾವಣದ ಹುಣ್ಣಿಮೆ ದಿನ ಆಚರಿಸುವ ರಕ್ಷಾ ಬಂಧನ ಅಥವಾ ರಾಖಿ ಹಬ್ಬವು ಆತ್ಮೀಯತೆ, ಅಂತಃಕರಣವನ್ನು ಮತ್ತಷ್ಟು ಗಟ್ಟಿಗೊಳಿಸುವ ಸಂಭ್ರಮದ ಹಬ್ಬವಾಗಿದೆ.

ಹೆಣ್ಣು ಮಕ್ಕಳು ತಮ್ಮ ಸಹೋದರರಿಗೆ ಅಥವಾ ಸಹೋದರ ಭಾವದಿಂದ ಪರಿಚಿತರಿಗೆ ರಾಖಿ ಕಟ್ಟುವರು. ಅದು ಕೇವಲ ದಾರವಲ್ಲ. ಆತ್ಮೀಯ ಅನುಬಂಧದ ಸಂಕೇತ. ಸಹೋದರರ ಯೋಗಕ್ಷೇಮವನ್ನು ಹಾರೈಸಿ ತಮ್ಮ ರಕ್ಷಣೆಯ ಭಾರವನ್ನು ನೆನಪಿಸುವ ಹಬ್ಬವಾಗಿದೆ.

ಇತಿಹಾಸದಲ್ಲೂ ಈ ರಾಖಿಯ ಮಹತ್ವ ದಾಖಲಿಸಲಾಗಿದೆ. ಪೌರಾಣಿಕ ಹಿನ್ನಲೆಯೂ ಇದೆ. ಮಹಾಭಾರತದ ಕತೆಗಳು ಎಲ್ಲರಿಗೂ ಗೊತ್ತಿರುವಂಥವೇ. ದ್ರೌಪದಿ ನಂಬಿದ್ದು ಕೃಷ್ಣನನ್ನೇ. ಒಮ್ಮೆ ಸಭೆಯೊಳಗೆ ಕೃಷ್ಣನ ಬೆರಳು ಕತ್ತರಿಸಿ ಹೋಗಿದ್ದ ಸಂದರ್ಭದಲ್ಲಿ ತಕ್ಷಣ ಉಪಚರಿಸಲು ಮುಂದಾದ ದ್ರೌಪದಿ, ತಾನುಟ್ಟ ಪೀತಾಂಬರದ ಸೆರಗನ್ನೇ ಹರಿದು ಅವನ ಬೆರಳಿಗೆ ಕಟ್ಟಿದಳು.ಅದೊಂದು ಅಪರೂಪದ ವಾತ್ಯಲ್ಯದ ಸಂಕೇತ. ಅದೇ ‘ರಕ್ಷಾ ಬಂಧನ’ವಾಯಿತು. ಜೂಜಾಟದಲ್ಲಿ ಧರ್ಮರಾಜ ಎಲ್ಲ ಕಳೆದುಕೊಂಡು ಕೊನೆಗೆ ದುಶ್ಯಾಸನ ತುಂಬಿದ ಸಭೆಯಲ್ಲಿ ದ್ರೌಪದಿಯ ವಸ್ತ್ರಾಪಹರಣಕ್ಕೆ ಮುಂದಾದಾಗ ಅವಳು ಮೊರೆ ಇಟ್ಟಿದ್ದು ಕೃಷ್ಣನಿಗೆ. ಕೃಷ್ಣ ಆಗ ಅಕ್ಷಯ ವಸ್ತ್ರವನ್ನೇ ಕರುಣಿಸಿ ಅವಳ ಮಾನ ರಕ್ಷಿಸಿದ.

ADVERTISEMENT

ಮಹಾಭಾರತದ ಈ ಸಂದರ್ಭವೇ 'ರಕ್ಷಾ ಬಂಧನ' ಆಚರಣೆಗೆ ಪ್ರೇರಣೆಯೂ ಆಗಿರಬಹುದು.ಹಿಂದಿನ ಕಾಲದಲ್ಲಿ ತಮ್ಮ ಸಹೋದರರು ರಣರಂಗಕ್ಕೆ ತೆರಳುವ ಮುನ್ನ ಅವರ ಯೋಗ ಕ್ಷೇಮ ಹಾರೈಸಿ ಸಹೋದರಿಯರು ರಾಖಿ ಕಟ್ಟುತ್ತಿದ್ದರು.ಯುದ್ಧದಲ್ಲಿ ವಿಜಯಿಯಾಗಿ ಕ್ಷೇಮದಿಂದ ಮರಳಿ ಬರಲೆಂಬುದು ಸಹೋದರಿಯರ ಹಾರೈಕೆ.

ಇತ್ತೀಚಿನ ಕೆಲ ವರ್ಷಗಳಲ್ಲಿ ರಕ್ಷಾ ಬಂಧನ ಹೆಚ್ಚು ಜನಪ್ರಿಯವಾಗಿದೆ. ವಿವಿಧ ತೆರನಾದ, ಕಲಾತ್ಮಕ ಕುಸುರಿಯ ಆಕರ್ಷಕ ರಾಖಿಗಳು ಮಾರುಕಟ್ಟೆಯಲ್ಲಿ ದೊರಕುತ್ತಿವೆ. ಖರೀದಿಯ ಭರಾಟೆಯೂ ಜೋರಾಗಿದೆ. ಸಹೋದರ ಸಹೋದರಿಯರಲ್ಲಿ ಪ್ರೀತಿ, ವಾತ್ಸಲ್ಯಗಳು ಶಾಶ್ವತವಾಗಲಿ ಎಂಬ ಆಶಯ 'ರಕ್ಷಾ ಬಂಧನ'ದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.