ADVERTISEMENT

ರಾಮನವಮಿ: ರಾಜ್ಯದ ಜನತೆಗೆ ಶುಭ ಕೋರಿದ ಸಿಎಂ ಸಿದ್ದರಾಮಯ್ಯ, ಡಿಕೆಶಿ, ಹಲವು ಗಣ್ಯರು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಏಪ್ರಿಲ್ 2025, 6:13 IST
Last Updated 6 ಏಪ್ರಿಲ್ 2025, 6:13 IST
   

ಬೆಂಗಳೂರು: ರಾಜ್ಯದೆಲ್ಲೆಡೆ ಸಂಭ್ರಮದ ರಾಮ ನವಮಿ ಹಬ್ಬವನ್ನು ಇಂದು (ಭಾನುವಾರ) ಆಚರಿಸಲಾಗುತ್ತಿದೆ. ಹಬ್ಬದ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಸೇರಿದಂತೆ ಹಲವು ಗಣ್ಯರು ರಾಜ್ಯದ ಜನತೆಗೆ ಶುಭ ಕೋರಿದ್ದಾರೆ.

ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಪ್ರಭು ಶ್ರೀರಾಮಚಂದ್ರನ ವಚನ ಪಾಲನೆ, ಪ್ರಜಾಸೇವೆಯ ಬದ್ಧತೆ, ನ್ಯಾಯ ನಿಷ್ಠುರತೆ, ಪ್ರೀತಿ - ಮಮತೆ ಮುಂತಾದ ಮಾನವೀಯ ಮೌಲ್ಯಗಳು ನಮ್ಮೆಲ್ಲರ ಆದರ್ಶವಾಗಲಿ. ಪಾನಕ - ಕೋಸಂಬರಿಯ ಜೊತೆ ಸ್ನೇಹ - ಸೌಹಾರ್ದತೆಯು ಮಿಳಿತಗೊಳ್ಳಲಿ, ದ್ವೇಷ ಅಳಿದು ಪ್ರೀತಿಯ ಬೆಳಕು ಎಲ್ಲೆಡೆ ಬೆಳಗಲಿ ಎಂದು ಹಾರೈಸುತ್ತೇನೆ’ ಎಂದು ಶುಭ ಕೋರಿದ್ದಾರೆ.

ಸತ್ಯ, ತ್ಯಾಗ, ಧೈರ್ಯ, ಮತ್ತು ದಯೆಯ ಮೂರ್ತಿಯಾದ ಶ್ರೀರಾಮ, ಧರ್ಮಸ್ಥಾಪನೆಯ ಸಂಕೇತ. ರಾಮನ ಆದರ್ಶಗಳು ನಮ್ಮ ಜೀವನಕ್ಕೆ ಪ್ರೇರಣೆ. ಅವರ ಹಾದಿ ನಾವು ಅನುಸರಿಸಬೇಕಾದ ದಾರಿ. ರಾಮನವಮಿ ಕೇವಲ ಹಬ್ಬವಲ್ಲ. ನಮ್ಮ ಆತ್ಮದಲ್ಲಿ ರಾಮನ ಮೌಲ್ಯಗಳನ್ನು ನೆಲೆ ನಿಲ್ಲಿಸುವ ದಿನ. ಸರ್ವರಿಗೂ ರಾಮನವಮಿಯ ಹಾರ್ದಿಕ ಶುಭಾಶಯಗಳು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಜನತೆಗೆ ಶುಭ ಕೋರಿದ್ದಾರೆ.

ADVERTISEMENT

ನಾಡಿನ ಸಮಸ್ತ ಜನತೆಗೆ ಶ್ರೀ ರಾಮನವಮಿಯ ಶುಭಾಶಯಗಳು. ರಾಮನ ಆದರ್ಶ, ತ್ಯಾಗ, ಗುಣ ಎಲ್ಲರಿಗೂ ಸದಾ ಆದರ್ಶಪ್ರಾಯವಾಗಲಿ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ.

ರಾಜ್ಯದ ಜನತೆಗೆ ರಾಮನವಮಿಯ ಶುಭ ಕೋರಿರುವ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ‘ಭಾರತೀಯ ಸಂಸ್ಕೃತಿಯ ಪ್ರತೀಕ, ಆದರ್ಶಯುತ ಆಡಳಿತ, ಪರಿಶುದ್ಧತೆ, ಸಮಾನತೆ, ಸಹೃದಯತೆ, ವೈಚಾರಿಕತೆ, ಸಹಿಷ್ಣುತೆ, ಸರಳತೆ, ಕೌಶಲ್ಯತೆ, ಇವೆಲ್ಲವುಗಳ ಸಂಗಮ ವ್ಯಕ್ತಿತ್ವವೇ ಪ್ರಭು ಶ್ರೀ ರಾಮಚಂದ್ರ'. ನಾಡಿನ ಸಮಸ್ತ ಜನತೆಗೆ ಶ್ರೀರಾಮನವಮಿ ಹಬ್ಬದ ಹಾರ್ದಿಕ ಶುಭಾಶಯಗಳು. ಈ ಪವಿತ್ರ ದಿನದಂದು ನಾಡಿನೆಲ್ಲೆಡೆ ಸುಖ, ಶಾಂತಿ, ಸಂತೋಷ ಹಾಗೂ ಸಮೃದ್ಧಿ ನೆಲೆಸಲೆಂದು ಪ್ರಾರ್ಥಿಸೋಣ ಎಂದು ಹೇಳಿದ್ದಾರೆ.

ನಾಡಿನ ಸಮಸ್ತ ಜನತೆಗೆ ಶ್ರೀ ರಾಮನವಮಿಯ ಹಾರ್ದಿಕ ಶುಭಾಶಯಗಳು. ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀರಾಮಚಂದ್ರರು ಸರ್ವರ ಬಾಳಿನಲ್ಲಿ ಒಳಿತನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. ಪ್ರಭು ಶ್ರೀರಾಮಚಂದ್ರರ ಆದರ್ಶ, ನ್ಯಾಯ ತತ್ಪರತೆ, ಸತ್ಯನಿಷ್ಠೆ ಪ್ರತಿಯೊಬ್ಬರಿಗೂ ಪ್ರೇರಣೆಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಭಾಶಯ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.