ADVERTISEMENT

ಲಕ್ಷ್ಮಣ, ಸೀತೆ ಇಲ್ಲದ ರಾಮನ ಚಿತ್ರ ಸಹೋದರತೆ, ಸಹಿಷ್ಣುತೆ ಇಲ್ಲದ ಪ್ರತೀಕ

ಸಂವಿಧಾನ ಕುರಿತ ವಿಚಾರಸಂಕಿರಣದಲ್ಲಿ ಬರಗೂರು ರಾಮಚಂದ್ರಪ್ಪ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2018, 18:30 IST
Last Updated 23 ಡಿಸೆಂಬರ್ 2018, 18:30 IST
ಬರಗೂರು ರಾಮಚಂದ್ರಪ್ಪ
ಬರಗೂರು ರಾಮಚಂದ್ರಪ್ಪ   

ದಾವಣಗೆರೆ: ಲಕ್ಷಣ, ಸೀತೆಯನ್ನು ಬಿಟ್ಟು ಕೇವಲ ಶ್ರೀರಾಮನ ಚಿತ್ರ ಬಳಸಿಕೊಳ್ಳುತ್ತಿರುವುದು ಸಂವಿಧಾನದ ಆಶಯವಾದ ಸಹೋದರತ್ವ ಹಾಗೂ ಸಹಿಷ್ಣುತೆಯನ್ನು ವಿರೋಧಿಸುತ್ತಿರುವುದರ ಪ್ರತೀಕವಾಗಿದೆ ಎಂದು ಸಾಹಿತಿ ಡಾ. ಬರಗೂರು ರಾಮಚಂದ್ರಪ್ಪ ಪ್ರತಿಪಾದಿಸಿದರು.

ಸಂವಿಧಾನ ಉಳಿಸಿ ಹೋರಾಟ ಸಮಿತಿ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಸಂವಿಧಾನ ಮತ್ತು ಸಮಕಾಲೀನ ಸಂದರ್ಭ’ ವಿಚಾರಸಂಕಿರಣ ಉದ್ಘಾಟಿಸಿದ ಅವರು, ‘ಇಂದು ದೇಶದಲ್ಲಿ ಪ್ರತಿಮೆ ಸ್ಥಾಪನೆಯ ಸ್ಪರ್ಧೆ ನಡೆಯುತ್ತಿದೆ. ಒಂದಕ್ಕಿಂತ ಒಂದು ದೊಡ್ಡ ಪ್ರತಿಮೆ ನಿರ್ಮಿಸಲಾಗುತ್ತಿದೆ. ದೇವರು, ಧರ್ಮ, ಸಂಸ್ಕೃತಿಯನ್ನು ಮಾರುಕಟ್ಟೆಯ ಸರಕನ್ನಾಗಿ ಮಾಡಲಾಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಲಕ್ಷ್ಮಣ ಸಹೋದರತ್ವದ ಹಾಗೂ ಸೀತೆ ಸಹಿಷ್ಣುತೆಯ ಪ್ರತೀಕ. ಇವರಿಗೆ ಸಹೋದರತ್ವ ಬೇಕಾಗಿರಲಿಲ್ಲ; ಹೀಗಾಗಿ ಲಕ್ಷ್ಮಣನನ್ನು ಬಿಟ್ಟರು. ದೇಶದಲ್ಲಿ ಸಹಿಷ್ಣುತೆ ಇರುವುದೂ ಬೇಕಾಗಿಲ್ಲ ಎಂಬ ಕಾರಣಕ್ಕೆ ಸೀತೆಯನ್ನೂ ಬಿಟ್ಟರು. ಸಿಂಹಾಸನವನ್ನು ಬಿಟ್ಟು ಕಾಡಿಗೆ ಹೋದ ರಾಮ ಇವರಿಗೆ ಏಕೆ ಬೇಕು? ಮತಕ್ಕಾಗಿ ದೇವರನ್ನು ಬಳಸಿಕೊಳ್ಳುವುದು ನಿಜವಾದ ಭಕ್ತಿಯೇ ಎಂಬ ಪ್ರಶ್ನೆಯನ್ನು ಜನ ಏಕೆ ಕೇಳುತ್ತಿಲ್ಲ? ರಾಮನನ್ನು ಭಕ್ತಿಯಿಂದ ಪೂಜಿಸಿದ ಶಬರಿ ಗುಡಿಯನ್ನು ಕಟ್ಟಿರಲಿಲ್ಲ’ ಎಂದು ಹೇಳುವ ಮೂಲಕ ಬರಗೂರು ರಾಮಚಂದ್ರಪ್ಪ ಅವರು ರಾಮಮಂದಿರ ನಿರ್ಮಿಸಬೇಕು ಎಂದು ಪ್ರತಿಪಾದಿಸುತ್ತಿರುವ ಬಲಪಂಥೀಯರ ಮೇಲೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ADVERTISEMENT

‘ರಾಮನ ಕೈಗೆ ಇತ್ತೀಚೆಗೆ ಬಾಣವನ್ನೂ ಕೊಟ್ಟಿದ್ದಾರೆ. ಇದು ಇನ್ನೊಬ್ಬರನ್ನು ಕೊಲ್ಲು ಎಂಬುದರ ಪ್ರತೀಕವಾಗಿದೆ. ಶಸ್ತ್ರಸಹಿತ ರಾಮನಿಗಿಂತ ನಮಗೆ ಸಿಂಹಾಸನರಹಿತ ರಾಮ ಬೇಕಾಗಿದೆ’ ಎಂದು ಅಭಿಪ್ರಾಯಪಟ್ಟರು.

‘ಒಂದು ಧರ್ಮ, ಜಾತಿ, ಸಂಸ್ಕೃತಿ ಶ್ರೇಷ್ಠ ಎಂಬುದನ್ನು ಸಂವಿಧಾನ ಒಪ್ಪುವುದಿಲ್ಲ. ಸಂವಿಧಾನದ ಆಶಯ ಬಹುತ್ವವೇ ಭಾರತೀಯತೆ ಎಂಬುದು. ಇಂದು ಬಹು ಸಂಸ್ಕೃತಿ, ಬಹು ಧರ್ಮಗಳನ್ನು ವಿರೋಧಿಸಲಾಗುತ್ತಿದೆ. ಅಪವ್ಯಾಖ್ಯಾನಗಳ ಅವತಾರ ಪುರುಷರೇ ಹೆಚ್ಚಾಗಿಬಿಟ್ಟಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಇಂದು ಜಾತ್ಯತೀತ ತತ್ವವನ್ನು ಗೇಲಿ ಮಾಡಲಾಗುತ್ತಿದೆ. ಹಿಂದೂ ಧರ್ಮವನ್ನು ನಂಬಿದ್ದರೂ ಇಡೀ ಸ್ವಾತಂತ್ರ್ಯ ಹೋರಾಟವನ್ನು ಮಹಾತ್ಮ ಗಾಂಧಿ ಜಾತ್ಯತೀತವಾಗಿ ಕಟ್ಟಿದ್ದರು. ರಾಷ್ಟ್ರೀಯ ಹೋರಾಟಕ್ಕೆ ಗಾಂಧೀಜಿ ಎಂದಿಗೂ ಗಣೇಶ, ಹನುಮಂತ, ಶ್ರೀರಾಮನನ್ನು ಬಳಸಿಕೊಂಡಿಲ್ಲ. ಅವರು ಬಳಸಿಕೊಂಡಿದ್ದು ಉಪ್ಪು, ಖಾದಿ ಮತ್ತು ಚರಕವನ್ನು. ಇದು ಯಾವ ಜಾತಿಗೂ ಸೇರಿದ್ದಾಗಿರಲಿಲ್ಲ’ ಎಂದು ನುಡಿದರು.

‘ಇಂದು ಏಕ ಧರ್ಮ ಸ್ಥಾಪನೆಯ ಹುನ್ನಾರ ನಡೆಯುತ್ತಿದೆ. ಧರ್ಮ ಮತ್ತು ದೇವರ ಹೆಸರಿನಲ್ಲಿ ಆಗಬಾರದು ನಡೆಯುತ್ತಿದೆ. ಇನ್ನು ಕೆಲವು ಸರ್ಕಾರ ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಜಾತ್ಯತೀತವನ್ನು ಜಾತಿವಾದವನ್ನಾಗಿ ರೂಪಾಂತರಿಸಿರುವ ಅಪಾಯವನ್ನೂ ನಾವು ನೋಡುತ್ತಿದ್ದೇವೆ’ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.