ADVERTISEMENT

ಸುಳ್ಳಾದ ‘ಬ್ರಹ್ಮಾಂಡ’ ರೇಡಿಯೋ ತರಂಗ ಸಂದೇಶ! ರಾಮನ್ ಸಂಶೋಧನಾ ಸಂಸ್ಥೆಯ ಸಾಧನೆ

ರಾಮನ್ ಸಂಶೋಧನಾ ಸಂಸ್ಥೆಯ ಮಹತ್ವದ ಸಾಧನೆ; ಸರಾಸ್‌–3’ ರೇಡಿಯೊ ದೂರದರ್ಶಕದ ಸಾಧನೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2022, 4:50 IST
Last Updated 1 ಮಾರ್ಚ್ 2022, 4:50 IST
ಶರಾವತಿ ಹಿನ್ನೀರಿನಲ್ಲಿ ‘ಸರಾಸ್‌–3’ ದೂರದರ್ಶಕದ ಪ್ರಯೋಗ.
ಶರಾವತಿ ಹಿನ್ನೀರಿನಲ್ಲಿ ‘ಸರಾಸ್‌–3’ ದೂರದರ್ಶಕದ ಪ್ರಯೋಗ.   

ಬೆಂಗಳೂರು: ‘ಮಹಾಸ್ಫೋಟದಿಂದಾಗಿ (ಬಿಗ್‌ ಬ್ಯಾಂಗ್) ಬ್ರಹ್ಮಾಂಡದ ಉಗಮದ ಸಂದರ್ಭದಲ್ಲಿ ಹುಟ್ಟಿದ ನಕ್ಷತ್ರಗಳು ಮತ್ತು ನಕ್ಷತ್ರಪುಂಜಗಳಿಂದ ಹೊರಹೊಮ್ಮಿದ ರೇಡಿಯೊ ತರಂಗ ಸಂದೇಶ ಪತ್ತೆ ಮಾಡಲಾಗಿದೆ’ ಎಂಬ ಅಮೆರಿಕಾದ ವಿಜ್ಞಾನಿಗಳ ವಾದಗಳನ್ನು ರಾಮನ್‌ ಸಂಶೋಧನಾ ಸಂಸ್ಥೆಯ(ಆರ್‌ಆರ್‌ಐ) ಖಗೋಳ ವಿಜ್ಞಾನಿಗಳು ಬುಡಮೇಲು ಮಾಡಿದ್ದಾರೆ!

ಬೆಂಗಳೂರಿನ ರಾಮನ್‌ ಸಂಶೋಧನಾ ಸಂಸ್ಥೆಯ ಹೊಸ ಶೋಧ ಅಂತರಾಷ್ಟ್ರೀಯ ಮಟ್ಟದಲ್ಲಿ ಸಂಚಲನ ಮೂಡಿಸಿದೆ. ಕನ್ನಡಿಗ ಪ್ರೊ.ಎನ್‌.ಉದಯಶಂಕರ್‌ ಮತ್ತು ಪ್ರೊ.ರವಿಸುಬ್ರಹ್ಮಣ್ಯ ನೇತೃತ್ವದ ತಂಡ ಸಂಸ್ಥೆಯೇಅಭಿವೃದ್ಧಿಪಡಿಸಿದ ‘ಸರಾಸ್‌–3’ (ಎಸ್ಎಆರ್‌ಎಎಸ್–3) ರೇಡಿಯೊ ದೂರದರ್ಶಕದ ಮೂಲಕ ಬ್ರಹ್ಮಾಂಡದ ‘ಸಂದೇಶ’ದ ರಹಸ್ಯ ಬಿಡಿಸಿ ಜಗತ್ತಿನ ಮುಂದಿಟ್ಟಿದ್ದಾರೆ. ಸಂಶೋಧನೆಯ ಲೇಖನವು ಅಂತರರಾಷ್ಟ್ರೀಯ ವಿಜ್ಞಾನ ಜರ್ನಲ್‌ ‘ನೇಚರ್‌ ಆಸ್ಟ್ರಾನಮಿ’ಯಲ್ಲಿ ಪ್ರಕಟವಾಗಿದೆ.

‘ನೀರಿನ ಮೇಲೆ ತೇಲುವ ಸಾಮರ್ಥ್ಯ ಹೊಂದಿರುವ ಸರಾಸ್‌–3 ನಿಂದ ಅಚ್ಚರಿಯ ಫಲಿತಾಂಶಗಳು ದೊರೆತಿವೆ. ಈ ಸಂಶೋಧನೆ ಮೂಲಕ ಅಮೆರಿಕದ ಎಂಐಟಿ ಮತ್ತು ಅರಿಜೋನಾದ ಸ್ಟೇಟ್‌ ಯೂನಿರ್ವರ್ಸಿಟಿ (ಎಎಸ್‌ಯು) ಸಂಶೋಧಕರು ರೇಡಿಯೊ ತರಂಗಗಳ ಕುರಿತು ಕೈಗೊಂಡಿದ್ದ ಪ್ರಯೋಗದ ಫಲಿತಾಂಶ ನಿಜವಲ್ಲ ಎಂಬುದು ಮಹತ್ವದ ಸಾಧನೆ’ ಎಂದು ಸಂಸ್ಥೆಯ ನಿರ್ದೇಶಕ ಪ್ರೊ. ತರುಣ್‌ ಸೌರದೀಪ್‌ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT
ಪ್ರೊ. ತರುಣ್‌ ಸೌರದೀಪ್‌

‘ಅಮೆರಿಕಾ ವಿಜ್ಞಾನಿಗಳ ಸಂಶೋಧನೆಯು ಜಗತ್ತಿನಾದ್ಯಂತ ಖಗೋಳ ವಿಜ್ಞಾನಿಗಳ ಸಮುದಾಯದಲ್ಲಿ ಅಪಾರ ಉತ್ಸಾಹವನ್ನೇ ಸೃಷ್ಟಿಸಿತ್ತು. ಈ ಆವಿಷ್ಕಾರವನ್ನು ಹಾರ್ವರ್ಡ್‌ ಖಗೋಳ ವಿಜ್ಞಾನಿ ಅವಿ ಲೋಬ್‌ ಅವರು ಎರಡು ನೊಬೆಲ್‌ ಪ್ರಶಸ್ತಿಗಳಿಗೆ ಅರ್ಹ ಎಂದು ಶ್ಲಾಘಿಸಿದ್ದರು. ಆದರೆ, ಈ ಸಂಶೋಧನೆಯ ಫಲಿತಾಂಶದ ದೃಢೀಕರಣಕ್ಕಾಗಿ ಖಗೋಳ ವಿಜ್ಞಾನಿಗಳ ಸಮುದಾಯ ಕಾಯುತ್ತಿತ್ತು. ನಮ್ಮ ಸಂಸ್ಥೆಯ ಖಗೋಳ ವಿಜ್ಞಾನಿಗಳು ವೈಜ್ಞಾನಿಕ ಪುರಾವೆಗಳ ಸಮೇತ ಅವರ ವಾದವನ್ನು ತಿರಸ್ಕರಿಸಿದ್ದಾರೆ’ ಎಂದು ವಿವರಿಸಿದರು.

ಸಂಶೋಧನೆಯ ಬಗ್ಗೆ ವಿವರ ನೀಡಿದ ಸಂಸ್ಥೆಯ ಸಂಶೋಧನಾ ವಿಜ್ಞಾನಿ ಸೌರಭ್‌ ಸಿಂಗ್‌, ‘ರೇಡಿಯೊ ತರಂಗಗಳನ್ನು ಪತ್ತೆ ಮಾಡಲು ಅಗತ್ಯವಾದ ನಿಖರತೆಯನ್ನು ಒದಗಿಸುವ ಹೊಸ ಪ್ರಯತ್ನವಾಗಿ ಸರಾಸ್‌ ರೇಡಿಯೊ ದೂರದರ್ಶಕವನ್ನು ಭಾರತದಲ್ಲಿ ವಿನ್ಯಾಸಗೊಳಿಸಿ, ನಿರ್ಮಿಸಿ ಮತ್ತು ಕಾರ್ಯರೂಪಕ್ಕೆ ತಂದಿರುವುದು ಹೆಮ್ಮೆಯ ವಿಷಯ’ ಎಂದು ತಿಳಿಸಿದರು.

‘ಹೈಡ್ರೊಜನ್‌ ಪರಮಾಣುಗಳಿಂದ 21 ಸೆಂಟಿ ಮೀಟರ್‌ ತರಂಗಾಂತರದಲ್ಲಿ (1.4 ಗಿಗಾ ಹರ್ಟ್ಸ್‌) ಹೊರಹೊಮ್ಮುವ ವಿಕಿರಣಗಳ ಅನ್ವೇಷಣೆ ಕೈಗೊಳ್ಳುವುದು ಈ ಉಪಕರಣದ ಮೂಲ ಉದ್ದೇಶ. ರೇಡಿಯೊ ದೂರದರ್ಶಕವನ್ನು ಹಲವು ಸ್ಥಳಗಳಲ್ಲಿ ಪರೀಕ್ಷೆ ಕೈಗೊಳ್ಳಲಾಯಿತು. ಮೊದಲ ಬಾರಿ ಅನಂತಪುರ ಜಿಲ್ಲೆಯ ಟಿಂಬಕ್ಟುನಲ್ಲಿ ಪರೀಕ್ಷೆ ನಡೆಸಲಾಯಿತು. ನಂತರ, ಭಾರತೀಯ ಖಗೋಳ ವೀಕ್ಷಣಾಲಯದ ನೆರವಿನಿಂದ ಲಡಾಕ್‌ನಲ್ಲಿ ಪ್ರಯೋಗ ಕೈಗೊಳ್ಳಲಾಯಿತು’ ಎಂದು ಅವರು ವಿವರಿಸಿದರು.

ಚಿಕ್ಕಬಳ್ಳಾಪುರದಲ್ಲಿ ಮೊದಲ ಪರೀಕ್ಷೆ

‘ಸರಾಸ್‌ ದೂರದರ್ಶಕದ ಪರೀಕ್ಷೆಯನ್ನು 2020ರ ಆರಂಭದಲ್ಲಿ ಚಿಕ್ಕಬಳ್ಳಾಪುರದ ದಂಡಿಗಾನಹಳ್ಳಿ ಕೆರೆ ಪ್ರದೇಶದಲ್ಲಿ ಮತ್ತು ಶರಾವತಿ ಹಿನ್ನೀರಿನ ಪ್ರದೇಶಗಳಲ್ಲಿ ಕೈಗೊಳ್ಳಲಾಯಿತು. ಆಕಾಶದಿಂದ ಹೊರಹೊಮ್ಮುವ ರೇಡಿಯೊ ತರಂಗಗಳ ಮಾಹಿತಿಯನ್ನು ನಿಖರವಾಗಿ ಸಂಗ್ರಹಿಸಲು ಈ ಪ್ರಯೋಗಗಳು ನೆರವಾದವು’ ಎಂದು ಸೌರಭ್ ಸಿಂಗ್‌ ಹೇಳಿದರು.

ಸೌರಭ್ ಸಿಂಗ್‌

‘ಈ ವಿಶ್ಲೇಷಣೆಗಳಲ್ಲಿ ಎಂಐಟಿ ಮತ್ತು ಎಎಸ್‌ಯು ಪ್ರಯೋಗಗಳಲ್ಲಿ ಕಂಡು ಬಂದ ಸಂಕೇತಗಳ ಕುರಿತು ಯಾವುದೇ ಸಾಕ್ಷ್ಯಗಳು ದೊರೆಯಲಿಲ್ಲ. ಹೀಗಾಗಿ, ಈ ಬಗ್ಗೆ ಎಚ್ಚರಿಕೆಯಿಂದ ಮೌಲ್ಯಮಾಪನ ನಡೆಸಿ ಅಮೆರಿಕ ವಿಶ್ವವಿದ್ಯಾಲಯಗಳ ಸಂಶೋಧಕರ ಪ್ರಯೋಗವನ್ನು ತಿರಸ್ಕರಿಸಲಾಯಿತು. ಉಪಕರಣ ಮಾಪನದ ತಪ್ಪಿನಿಂದ ಕಂಡು ಬಂದ ಸಂಕೇತಗಳನ್ನೇ ರೇಡಿಯೊ ತರಂಗಗಳೆಂದು ಅಮೆರಿಕದ ಸಂಶೋಧಕರು ಪರಿಗಣಿಸಿದ್ದಾರೆ’ ಎಂದು ಅವರು ಹೇಳಿದರು.

ಸಂಶೋಧಕರ ತಂಡ
* ಪ್ರೊ. ರವಿ ಸುಬ್ರಹ್ಮಣ್ಯನ್‌
* ಪ್ರೊ. ಎನ್‌. ಉದಯಶಂಕರ್‌
* ಡಾ. ಸೌರಭ ಸಿಂಗ್‌
* ಟಿ. ಜಿಷ್ಣು ನಂಬಿಸ್ಸಾನ್‌
* ಬಿ.ಎಸ್‌. ಗಿರೀಶ್‌
* ಡಾ. ಎ. ರಘುನಾಥನ್‌
* ಆರ್‌. ಸೋಮಶೇಖರ್‌
* ಕೆ.ಎಸ್‌. ಶ್ರೀವಾಣಿ
* ಡಾ. ಮಯೂರಿ ಸತ್ಯನಾರಾಯಣ ರಾವ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.