ADVERTISEMENT

ಕಾರ್ಣಿಕ ನುಡಿಯಲಿರುವ ರಾಮಣ್ಣ ಮೈಲಾರ

ಗೊರವಯ್ಯ ನೇಮಕ ವಿವಾದ: ವಿಚಾರಣೆ ಮುಂದೂಡಿದ ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2020, 15:24 IST
Last Updated 6 ಫೆಬ್ರುವರಿ 2020, 15:24 IST

ಧಾರವಾಡ: ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲ್ಲೂಕಿನ ಮೈಲಾರಲಿಂಗೇಶ್ವರ ದೇವಸ್ಥಾನದ ಕಾರ್ಣಿಕ ನುಡಿಯವ ಹಕ್ಕಿಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ರಿಟ್‌ ಅರ್ಜಿಯ ವಿಚಾರಣೆಯನ್ನು ಇಲ್ಲಿನ ಹೈಕೋರ್ಟ್‌ ಮಾರ್ಚ್‌ 2 ಕ್ಕೆ ಮುಂದೂಡಿದೆ. ಹೀಗಾಗಿಇದೇ 11ಕ್ಕೆ ಜರುಗಲಿರುವ ಕಾರ್ಣಿಕದಲ್ಲಿ ಗೊರವಯ್ಯನಾಗಿ ರಾಮಣ್ಣ ಮೈಲಾರ ಕಾರ್ಣಿಕ ನುಡಿಯಲಿದ್ದಾರೆ.

ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಪೂಜೆ, ಕಾರ್ಣಿಕ ನುಡಿಯುವ ವಿಷಯಕ್ಕೆ ಸಂಬಂಧಿಸಿದಂತೆ ರಾಮಣ್ಣ ಮತ್ತು ಗುರುವೆಂಕಟಯ್ಯ ಎನ್ನುವವರ ನಡುವೆ ವಿವಾದ ಉಂಟಾಗಿತ್ತು. ದೇವಸ್ಥಾನದ ಗೊರವಯ್ಯನನ್ನಾಗಿ ರಾಮಣ್ಣ ಮೈಲಾರ ಎನ್ನುವವರನ್ನು ನೇಮಕ ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಗುರು ವೆಂಕಟಯ್ಯ ಒಡೆಯರ ಎನ್ನುವವರು ಧಾರ್ಮಿಕ ದತ್ತಿ ಇಲಾಖೆ ಆಯುಕ್ತರ ಎದುರು ಮೇಲ್ಮನವಿ ಸಲ್ಲಿಸಿದ್ದರು.

ಅಲ್ಲಿ ಗುರುವೆಂಕಟಯ್ಯನವರಿಗೆ ಕಾರ್ಣಿಕ ನುಡಿಯುವ ಅವಕಾಶ ದೊರೆತಿತ್ತು. ಇದನ್ನು ಪ್ರಶ್ನಿಸಿ ರಾಮಣ್ಣ ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ದಾಖಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ್ದ ಏಕಸದಸ್ಯಪೀಠ ಆಯುಕ್ತರ ಆದೇಶಕ್ಕೆ ಮಧ್ಯಂತರ ತಡೆ ನೀಡಿತ್ತು. ಇದನ್ನು ಪ್ರಶ್ನಿಸಿ ಗುರು ವೆಂಕಟಯ್ಯ ವಿಭಾಗೀಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

ADVERTISEMENT

‘ಕಾರ್ಣಿಕ ನುಡಿಯಲು ಗೊರವಯ್ಯನಾಗಿ ನೇಮಕಗೊಂಡಿರುವ ರಾಮಯ್ಯ ಎನ್ನುವವರಿಗೆ ಹಕ್ಕು ಮುಂದುವರಿಸಬೇಕು. ನೇಮಕ ಕುರಿತ ವಿವಾದವನ್ನು ಏಕಸದಸ್ಯ ಪೀಠದಲ್ಲೇ ತೀರ್ಮಾನಗೊಳಿಸಿಕೊಳ್ಳುವಂತೆ ವಿಭಾಗೀಯ ಪೀಠ ಸೂಚಿಸಿತ್ತು.

ಗುರುವಾರ ಎದುರುಗಾರರ ಮನವಿಯ ಮೇರೆಗೆ ನ್ಯಾಯಮೂರ್ತಿ ಎಸ್.ಜಿ.ಪಂಡಿತ ಅವರಿದ್ದ ನ್ಯಾಯಪೀಠ, ಈ ಹಿಂದೆ ನೀಡಿದ್ದ ತಡೆಯಾಜ್ಞೆಯನ್ನು ಮುಂದುವರಿಸಿ, ವಿಚಾರಣೆಯನ್ನು ಮಾರ್ಚ್ 2ಕ್ಕೆ ಮುಂದೂಡಿತು.ಅರ್ಜಿದಾರರ ಪರ ಎಚ್.ಎಂ.ದಾರಿಗೊಂಡ ವಕಾಲತ್ತುವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.