ಬೆಂಗಳೂರು: ‘ಕೇಂದ್ರ ಕಾರ್ಮಿಕ ಖಾತೆ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ ಅವರು ರಾಜ್ಯಕ್ಕೆ ಎಷ್ಟು ವಿಶೇಷ ಯೋಜನೆ ಮತ್ತು ಎಷ್ಟು ವಿಶೇಷ ಅನುದಾನವನ್ನು ತಂದಿದ್ದಾರೆ’ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಅವರು ಪ್ರಶ್ನಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತೆರಿಗೆ ಆದಾಯ ಹಂಚಿಕೆ, ಅನುದಾನ ಬಿಡುಗಡೆ, ವಿಶೇಷ ಯೋಜನೆಗಳು ಮತ್ತು ಅಂತರರಾಜ್ಯ ನೀರಾವರಿ ಯೋಜನೆಗಳಲ್ಲಿ ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಲೇ ಇದೆ. ರಾಜ್ಯದಿಂದ ಆಯ್ಕೆಯಾಗಿರುವ ಬಿಜೆಪಿ ಮತ್ತು ಜೆಡಿಎಸ್ ಸಂಸದರು ಹಾಗೂ ಐವರು ಸಚಿವರು ರಾಜ್ಯಕ್ಕಾಗಿ ದನಿ ಎತ್ತುತ್ತಿಲ್ಲ’ ಎಂದರು.
‘ಶೋಭಾ ಅವರು ಆಗಾಗ್ಗೆ ರಾಜ್ಯಕ್ಕೆ ಬರುತ್ತಾರೆ, ಧರ್ಮಗಳ ನಡುವೆ ಬೆಂಕಿ ಹಚ್ಚುವಂತಹ ಮಾತುಗಳನ್ನಾಡುತ್ತಾರೆ. ಆಧಾರರಹಿತ ಆರೋಪಗಳನ್ನು ಮಾಡಿ ರಾಜ್ಯ ಸರ್ಕಾರಕ್ಕೆ, ರಾಜ್ಯ ಸರ್ಕಾರದ ವಿರುದ್ಧ ಕೇಂದ್ರಕ್ಕೆ ಪತ್ರ ಬರೆಯುತ್ತಿರುತ್ತಾರೆ. ಆದರೆ ಜನರ ಸಮಸ್ಯೆಗಳ ಬಗ್ಗೆ ಮತ್ತು ತಮ್ಮ ಸಚಿವಾಲಯದ ಕಾರ್ಯವೈಖರಿ ಬಗ್ಗೆ ಮಾತನಾಡುವುದಿಲ್ಲ’ ಎಂದರು.
‘2021ರಿಂದ 2023ರವರೆಗೆ ಶೋಭಾ ಅವರು ಕೃಷಿ ಖಾತೆ ರಾಜ್ಯ ಸಚಿವರಾಗಿದ್ದು, ಕರ್ನಾಟಕಕ್ಕೆ ಯಾವುದೇ ವಿಶೇಷ ಯೋಜನೆ ತಂದಿಲ್ಲ. 2023-2024ರಲ್ಲಿ ಅವರು ಆಹಾರ ಖಾತೆ ರಾಜ್ಯ ಸಚಿವರಾಗಿದ್ದು, ರಾಜ್ಯಕ್ಕೆ ಅಗತ್ಯವಿದ್ದಷ್ಟು ಪಡಿತರ ಒದಗಿಸಲಿಲ್ಲ. 2025-26ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಕಾರ್ಮಿಕ ಸಚಿವಾಲಯಕ್ಕೆ ₹32,646 ಕೋಟಿ ಅನುದಾನ ಹಂಚಿಕೆಯಾಗಿದೆ. ಅದರಲ್ಲಿ ಹೆಚ್ಚಿನ ಪಾಲು ಉತ್ತರ ಭಾರತದ ರಾಜ್ಯಗಳಿಗೆ ಹೋಗುತ್ತಿದೆ. ನಮ್ಮ ರಾಜ್ಯಕ್ಕೆ ಹೆಚ್ಚಿನದೇನೂ ಬರುತ್ತಿಲ್ಲ’ ಎಂದು ಆರೋಪಿಸಿದರು.
ಆಗಸ್ಟ್ 1ಕ್ಕೆ ದೆಹಲಿ ಚಲೋ
‘ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ಮಾಡುತ್ತಿರುವ ಅನ್ಯಾಯವನ್ನು ಖಂಡಿಸಿ ಆಗಸ್ಟ್ 1 ಮತ್ತು 2ರಂದು ದೆಹಲಿ ಚಲೋ ನಡೆಸಲಾಗುತ್ತದೆ’ ಎಂದು ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಸಿ.ಎಂ.ಧನಂಜಯ ಹೇಳಿದರು. ‘ದೆಹಲಿಯ ಜಂತರ್ ಮಂತರ್‌ನಲ್ಲಿ ಎರಡು ದಿನದ ಸಮಾವೇಶ ಆಯೋಜಿಸಲಾಗಿದೆ. ರಾಜ್ಯದ 250 ಮಂದಿ ಆ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ರಾಜ್ಯದ ಪರವಾಗಿ ಸಂಸತ್ತಿನಲ್ಲಿ ದನಿ ಎತ್ತಿ ಎಂದು ರಾಜ್ಯದ ಸಂಸದರನ್ನು ಒತ್ತಾಯಿಸಲಾಗುತ್ತದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.