ADVERTISEMENT

ರಮೇಶ ಜಾರಕಿಹೊಳಿ ಸಿ.ಡಿ ಪ್ರಕರಣ: ಸಿಬಿಐ ತನಿಖೆಗೆ ಬಾಲಚಂದ್ರ ಜಾರಕಿಹೊಳಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2021, 12:39 IST
Last Updated 7 ಮಾರ್ಚ್ 2021, 12:39 IST
ಬಾಲಚಂದ್ರ ಜಾರಕಿಹೊಳಿ
ಬಾಲಚಂದ್ರ ಜಾರಕಿಹೊಳಿ    

ಬೆಂಗಳೂರು: ಮಾಜಿ ಸಚಿವ ರಮೇಶ ಜಾರಕಿಹೊಳಿ ಯುವತಿಯೊಬ್ಬಳನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪದ ಹಿಂದೆ ದೊಡ್ಡ ಸಂಚು ನಡೆದಿದೆ. ಈ ಬಗ್ಗೆ ಸಿಬಿಐ ಅದರ ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಬೇಕು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಒತ್ತಾಯಿಸಿದರು.

ಅಣ್ಣ ರಮೇಶ ಜಾರಕಿಹೊಳಿ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ ಭಾನುವಾರ ನಗರದ ಕುಮಾರಕೃಪಾ ಅತಿಥಿಗೃಹದ ಆವರಣದಲ್ಲಿ ತುರ್ತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ಜಾರಕಿಹೊಳಿ ಕುಟುಂಬ ಮತ್ತು ಬಿಜೆಪಿಯನ್ನು ಗುರಿಯಾಗಿ ಇಟ್ಟುಕೊಂಡು ಈ ಸಂಚು ನಡೆದಿದೆ. ಹಲವು ದಿನಗಳ ಕಾಲ ಇದಕ್ಕಾಗಿ ಕಾರ್ಯಾಚರಣೆ ನಡೆಸಿದ್ದಾರೆ ಎಂಬ ಮಾಹಿತಿ ನಮಗೆ ಲಭಿಸಿದೆ' ಎಂದರು.

' ಇಬ್ಬರ ಒಂದು ತಂಡ, ಮೂವರು ಸದಸ್ಯರ ಒಂದು ತಂಡ ಮತ್ತು ನಾಲ್ವರು ಸದಸ್ಯರ ಒಂದು ತಂಡಗಳು ಈ ಕೃತ್ಯದಲ್ಲಿ ಭಾಗಿಯಾಗಿವೆ. ರಮೇಶ ಅವರನ್ನು ಅಧಿಕಾರದಿಂದ ಕೆಳಕ್ಕೆ ಇಳಿಸುವುದು ಅವರ ಮೊದಲ ಗುರಿಯಾಗಿತ್ತು. ಅದಕ್ಕಾಗಿ ಯುವತಿಯನ್ನು ಬಳಸಿಕೊಂಡು ಹನಿ ಟ್ರ್ಯಾಪ್ ಮಾಡಲು ಯತ್ನಿಸಿದ್ದರು. ನಂತರ ನಕಲಿ ವಿಡಿಯೊ ಸೃಷ್ಟಿಸಿ ರಷ್ಯಾದಿಂದ ಬಿಡುಗಡೆ ಮಾಡಲಾಗಿದೆ. ಇದಕ್ಕಾಗಿ ₹15 ಕೋಟಿ ವೆಚ್ಚ ಮಾಡಲಾಗಿದೆ ಎಂಬ ಮಾಹಿತಿ ನಮಗೆ ಲಭಿಸಿದೆ' ಎಂದು ಬಾಲಚಂದ್ರ ತಿಳಿಸಿದರು.

ADVERTISEMENT

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಕ್ಷಣವೇ ಪ್ರಕರಣದ ಕುರಿತು ಸಿಬಿಐ ಅಥವಾ ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆಗೆ ಆದೇಶಿಸಬೇಕು. ಸಿ.ಡಿಯ ಸತ್ಯಾಸತ್ಯತೆ ಕುರಿತು ವಿಧಿವಿಜ್ಞಾನ ಪ್ರಯೋಗಾಲಯದಿಂದ ಪರೀಕ್ಷೆ ಮಾಡಿಸಬೇಕು. ಪ್ರಕರಣದಲ್ಲಿ ಭಾಗಿಯಾದ ಎಲ್ಲರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಖಾಸಗಿಯಾಗಿಯೂ ತನಿಖೆ ಆರಂಭಿಸಲಾಗುವುದು. ತಿಂಗಳೊಳಗೆ ಪ್ರಕರಣದ ಸತ್ಯಾಂಶವನ್ನು ಜನರ ಮುಂದಿಡಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.