ADVERTISEMENT

ಸಿದ್ದರಾಮಯ್ಯ ಜತೆ ರಮೇಶ್‌ ಚರ್ಚೆ

ಮನೆ ಬದಲಾಗಿದೆ, ಮನ ಬದಲಾಗಿಲ್ಲ– ಬಿ.ಸಿ.ಪಾಟೀಲ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2019, 20:30 IST
Last Updated 13 ಡಿಸೆಂಬರ್ 2019, 20:30 IST
   

ಬೆಂಗಳೂರು: ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಶುಕ್ರವಾರ ಭೇಟಿಯಾದ ಗೋಕಾಕ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಕೆಲಹೊತ್ತು ರಹಸ್ಯ ಮಾತುಕತೆ ನಡೆಸಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.

ನಗರದ ಮಲ್ಲೇಶ್ವರದಲ್ಲಿರುವ ವೆಗಾಸ್ ಆಸ್ಪತ್ರೆಯಲ್ಲಿ ಆಂಜಿಯೊ ಪ್ಲಾಸ್ಟಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಆರೋಗ್ಯ ವಿಚಾರಿಸುವ ಸಲುವಾಗಿ ಆಸ್ಪತ್ರೆಗೆ ಭೇಟಿ ನೀಡಿದ್ದರು.ಆರೋಗ್ಯ ವಿಚಾರಿಸಿದ ನಂತರ ವೈದ್ಯರು, ಆಸ್ಪತ್ರೆ ಸಿಬ್ಬಂದಿಯನ್ನು ಹೊರಗೆಕಳುಹಿಸಿ ಅರ್ಧ ಗಂಟೆ ಮಾತನಾಡಿದರು.

ಕಾಂಗ್ರೆಸ್ ನಾಯಕರಷ್ಟೇ ಅಲ್ಲದೆ ಇತರ ಪಕ್ಷಗಳ ಮುಖಂಡರೂ ಭೇಟಿಯಾಗಿ ಆರೋಗ್ಯ ವಿಚಾರಿಸುತ್ತಿದ್ದಾರೆ. ಕಾಂಗ್ರೆಸ್‌ನಿಂದ ಶಾಸಕರಾಗಿ ಆಯ್ಕೆಯಾಗಿ ಮೈತ್ರಿ ಸರ್ಕಾರದಲ್ಲಿ ರಮೇಶ್ ಸಚಿವರಾಗಿದ್ದರು. ಸಚಿವ ಸ್ಥಾನದಿಂದ ಕೈಬಿಟ್ಟ ನಂತರ ಶಾಸಕ ಸ್ಥಾನಕ್ಕೆ ರಾಜೀನಾಮೆನೀಡಿ, ಮೈತ್ರಿ ಸರ್ಕಾರದ ಪತನದ ಸೂತ್ರಧಾರಿಗಳಲ್ಲಿ ಒಬ್ಬರಾಗಿದ್ದರು. ರಾಜೀನಾಮೆ ನಂತರ ಸಿದ್ದರಾಮಯ್ಯ ವಿರುದ್ಧ ಗುಡುಗಿದ್ದರು.

ADVERTISEMENT

ಮನ ಬದಲಾಗಿಲ್ಲ: ಕಾಂಗ್ರೆಸ್‌ಗೆ ಕೈಕೊಟ್ಟು ಬಿಜೆಪಿ ಸೇರಿದ್ದ ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ ಸಹ ಸಿದ್ದರಾಮಯ್ಯ ಆರೋಗ್ಯ ವಿಚಾರಿಸಿದರು. ‘ಇಲ್ಲಿ ಯಾವುದೇ ರಾಜಕೀಯ ಮಾಡಲು ಬಂದಿಲ್ಲ. ನಾವು ಮನೆ ಬದಲಾಯಿಸಿರಬಹುದು. ಆದರೆ ಮನಸ್ಸು ಬದಲಾಯಿಸಿಲ್ಲ. ರಾಜಕೀಯವೇ ಬೇರೆ, ಸಂಬಂಧವೇ ಬೇರೆ. ಪಕ್ಷ ಬದಲಾಗಿದ್ದರೂ ಮಾನವೀಯತೆ, ಮನುಷ್ಯತ್ವ ಮರೆಯಲು ಸಾಧ್ಯವಿಲ್ಲ. ನಮ್ಮ ಮಾಜಿ ನಾಯಕನನ್ನು ಭೇಟಿ ಮಾಡಿದ್ದೇನೆ’ ಎಂದು ಸುದ್ದಿಗಾರರಿಗೆ ತಿಳಿಸಿದರು.

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರೂ ಆರೋಗ್ಯ ವಿಚಾರಿಸಿದರು.

‘ಕರೆದಾಗ ಬರಲಿಲ್ಲ, ಈಗ ಬಂದಿದ್ದೀಯಾ?’

ಸಿದ್ದರಾಮಯ್ಯ ಅವರನ್ನು ರಮೇಶ್ ಜಾರಕಿಹೊಳಿ ಆಸ್ಪತ್ರೆಯಲ್ಲಿ ಭೇಟಿಯಾದ ಸಮಯದಲ್ಲಿ ನಗುತ್ತಲೇ ಕುಟುಕಿದ್ದಾರೆ. ‘ಬಾ ಎಂದು ಕರೆದಾಗ ಬರದೋನು, ಈಗ ಬಂದಿದ್ದೀಯಲ್ಲ’ ಎಂದು ರಮೇಶ್‌ ಅವರನ್ನು ಪ್ರಶ್ನಿಸಿದ್ದಾರೆ.

‘ಕಂಗ್ರಾಟ್ಸ್, ಕೊನೆಗೂ ಗೆದ್ದೆ’ ಎಂದು ಸಿದ್ದರಾಮಯ್ಯ ಶುಭ ಹಾರೈಸಿದ್ದಾರೆ. ‘ನಿಮ್ಮ ಆಶೀರ್ವಾದ ಇರಲಿ’ ಎಂದು ರಮೇಶ್ ಕೋರಿದ್ದಾರೆ.

‘ಈಗ ನನ್ನ ಆಶೀರ್ವಾದ ಯಾಕಪ್ಪ ಬೇಕು. ಯಡಿಯೂರಪ್ಪ ಆಶೀರ್ವಾದ ಇದ್ದರೆ ಉಪಮುಖ್ಯಮಂತ್ರಿಯೇ ಆಗುತ್ತಿಯಾ’ ಎಂದು ಸಿದ್ದರಾಮಯ್ಯ ಹೇಳಿದರು.

ಸಿದ್ದರಾಮಯ್ಯ ಅವರೇ ನಮ್ಮನಾಯಕ: ಭೇಟಿ ನಂತರ ಮಾಧ್ಯಮದವರ ಜತೆ ಮಾತನಾಡಿದ ರಮೇಶ್ ಜಾರಕಿಹೊಳಿ, ‘ಸಿದ್ದರಾಮಯ್ಯನಮ್ಮಗುರುಗಳು. ಹಿಂದೆಯೂ ಗುರುಗಳಾಗಿದ್ದರು, ಮುಂದೆಯೂ ಗುರುಗಳು. ನಾವು ಪಕ್ಷ ಬದಲಾವಣೆ ಮಾಡಿದರೂಅವರೇನಮ್ಮನಾಯಕರು’ ಎಂದು ಹೇಳುವ ಮೂಲಕ ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.