ADVERTISEMENT

ಉಪಚುನಾವಣೆ ಮುಂದೂಡಿಕೆ: ಸುಪ್ರೀಂ ಕೋರ್ಟ್‌ ತೀರ್ಪು ಸ್ವಾಗತಿಸಿದ ರಮೇಶ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2019, 14:02 IST
Last Updated 26 ಸೆಪ್ಟೆಂಬರ್ 2019, 14:02 IST
ರಮೇಶ ಜಾರಕಿಹೊಳಿ
ರಮೇಶ ಜಾರಕಿಹೊಳಿ   

ಬೆಳಗಾವಿ: ‘ಉಪಚುನಾವಣೆಗೆ ತಡೆಯಾಜ್ಞೆ ನೀಡಿರುವ ಸುಪ್ರೀಂ ಕೋರ್ಟ್‌ ತೀರ್ಪನ್ನು ಸ್ವಾಗತಿಸುತ್ತೇನೆ. ಮುಂದಿನ ತಿಂಗಳು ನ್ಯಾಯಾಲಯವು ಪುನಃ ವಿಚಾರಣೆ ಕೈಗೆತ್ತಿಕೊಳ್ಳಲಿದ್ದು, ನಮ್ಮನ್ನು ಅನರ್ಹಗೊಳಿಸಿರುವ ಸ್ಪೀಕರ್‌ ರಮೇಶಕುಮಾರ್ ಅವರ ಆದೇಶವನ್ನು ವಜಾಗೊಳಿಸುವ ವಿಶ್ವಾಸ ನಮಗಿದೆ’ ಎಂದು ಅನರ್ಹ ಶಾಸಕ ರಮೇಶ ಜಾರಕಿಹೊಳಿ ಪ್ರತಿಕ್ರಿಯಿಸಿದರು.

ಗೋಕಾಕದ ತಮ್ಮ ನಿವಾಸದಲ್ಲಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ರಮೇಶಕುಮಾರ್‌ ಅವರ ಆದೇಶವನ್ನು ಏನಾದರೂ ಎತ್ತಿ ಹಿಡಿದರೆ ಇಡೀ ಅಸೆಂಬ್ಲಿ ಖಾಲಿಯಾಗಬೇಕಾಗುತ್ತದೆ. ವಿರೋಧ ಪಕ್ಷದವರ ಜೊತೆ ಚಹಾ ಕುಡಿದರೆ ಅದನ್ನೇ ನೆಪವಾಗಿಟ್ಟುಕೊಂಡು ಅನರ್ಹಗೊಳಿಸಿ ಬಿಡುವ ಅಪಾಯವಿದೆ’ ಎಂದು ಟಾಂಗ್‌ ನೀಡಿದರು.

‘ಚುನಾವಣೆ ನಡೆಯಲಿ ಎಂದು ವೈಯಕ್ತಿಕವಾಗಿ ಬಯಸಿದ್ದೆ’ ಎಂದು ಹೇಳಿದ ಅವರು, ನ್ಯಾಯಾಲಯದ ಮೇಲೆ ಸಂಪೂರ್ಣ ವಿಶ್ವಾಸವಿದೆ. ದೇಶದಲ್ಲಿ ಸುಪ್ರೀಂ ಕೋರ್ಟ್‌ಗಿಂತ ದೊಡ್ಡದು ಬೇರಾವುದೂ ಇಲ್ಲ. ಅನರ್ಹ ಶಾಸಕದಿಂದ ಮುಕ್ತಿ ಸಿಗಬಹುದು ಎಂದುಕೊಂಡಿದ್ದೆ. ಆದರೆ, ಈಗ ಇನ್ನೂ ಒಂದು ತಿಂಗಳು ಕಾಯಬೇಕಾಗಿದೆ’ ಎಂದು ಹೇಳಿದರು.

‘ನಾವು ಮುಂಬೈಗಾದರೂ ಹೋಗುತ್ತೇವೆ, ಅಮೆರಿಕಕ್ಕಾದರೂ ಹೋಗುತ್ತೇವೆ. ನಾವು ಸ್ವತಂತ್ರ ಭಾರತದ ಪ್ರಜೆಗಳು. ನಾವು ವಿಶೇಷ ವಿಮಾನದಲ್ಲಾದರೂ ಹೋಗುತ್ತೇವೆ. ನಡೆದುಕೊಂಡಾದರೂ ಹೋಗುತ್ತೇವೆ. ರಾಜೀನಾಮೆ ನೀಡುವವರೆಗೆ ನಾನು ಪಕ್ಷದ ವಿರುದ್ಧ ಏನನ್ನೂ ಮಾತನಾಡಿಲ್ಲ. ಪಕ್ಷದ ಸಭೆಗಳಲ್ಲಿ ಭಾಗವಹಿಸಿದ್ದೇನೆ. ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದೇನೆ. ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ’ ಎಂದು ವಿವರಿಸಿದರು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.