ADVERTISEMENT

ರಮೇಶ ಜಾರಕಿಹೊಳಿ ಸಿಡಿ ಪ್ರಕರಣ: ಕಮಲ್‌ ಪಂತ್‌ ವಿರುದ್ಧದ ತನಿಖೆಗೆ ತಡೆ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2021, 16:24 IST
Last Updated 25 ನವೆಂಬರ್ 2021, 16:24 IST
ಮಾಜಿ ಸಚಿವ ರಮೇಶ ಜಾರಕಿಹೊಳಿ
ಮಾಜಿ ಸಚಿವ ರಮೇಶ ಜಾರಕಿಹೊಳಿ   

ಬೆಂಗಳೂರು: ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರ ಲೈಂಗಿಕ ಸಿಡಿ ಆರೋಪದ ಹಗರಣದಲ್ಲಿ ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್, ಡಿಸಿಪಿ ಎಂ.ಎನ್‌.ಅನುಚೇತ್ ಹಾಗೂ ಕಬ್ಬನ್‌ ಪಾರ್ಕ್‌ ಪೊಲೀಸ್ ಠಾಣೆ ಅಧಿಕಾರಿ ಬಿ.ಮಾರುತಿ ವಿರುದ್ಧ ತನಿಖೆ ನಡೆಸುವಂತೆ ನಗರದ 8ನೇ ಎಸಿಎಂಎಂ ನ್ಯಾಯಾಲಯ ನೀಡಿದ್ದ ಆದೇಶಕ್ಕೆ ಹೈಕೋರ್ಟ್‌ ತಡೆ ನೀಡಿದೆ.

ಈ ಕುರಿತಂತೆ ಕಮಲ್‌ ಪಂತ್‌, ಅನುಚೇತ್ ಮತ್ತು ಮಾರುತಿ ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಶ್ರೀನಿವಾಸ ಹರೀಶ್ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿ, ಪ್ರತಿವಾದಿಗಳಾದ ಕಬ್ಬನ್‌ ಪಾರ್ಕ್‌ ಪೊಲೀಸ್ ಠಾಣೆ ಅಧಿಕಾರಿ ಎಸ್‌ಐಟಿ ಹಾಗೂ ಜನಾಧಿಕಾರ ಸಂಘರ್ಷ ಪರಿಷತ್ (ಜೆಎಸ್‌ಪಿ) ಅಧ್ಯಕ್ಷ ಆದರ್ಶ ಅಯ್ಯರ್ ಅವರಿಗೆ ನೋಟಿಸ್‌ ಜಾರಿಗೊಳಿಸಲು ಆದೇಶಿಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಪಿ.ಪ್ರಸನ್ನಕುಮಾರ್, ‘ಮಾಜಿ ಸಚಿವರ ವಿರುದ್ಧದ ಲೈಂಗಿಕ ಸಿಡಿ ಆರೋಪ ಪ್ರಕರಣದಲ್ಲಿನ ಮಹಿಳೆ ನೇರವಾಗಿ ಪೊಲೀಸರಿಗೆ ದೂರು ನೀಡಿಲ್ಲ. ಬದಲಾಗಿ, ಕನಕಪುರದ ದಿನೇಶ್ ಕಲ್ಲಹಳ್ಳಿ ಎಂಬುವರು ಹಗರಣವನ್ನು ಬಹಿರಂಗಗೊಳಿಸಿದ ನಂತರ ಕಬ್ಬನ್‌ ಪಾರ್ಕ್ ಪೊಲೀಸರಿಗೆ ನೀಡಿದ್ದ ತಮ್ಮ ದೂರನ್ನು ವಾಪಸು ಪಡೆದಿದ್ದರು. ಅಂತೆಯೇ ಸಿಡಿಯಲ್ಲಿನ ತರುಣಿಯನ್ನು ಉತ್ತರ ಕರ್ನಾಟಕಕ್ಕೆ ಸೇರಿದವಳು ಎಂದು ಅಸ್ಪಷ್ಟವಾಗಿ ಉಲ್ಲೇಖಿಸಿದ್ದರು’ ಎಂದರು.

ADVERTISEMENT

‘ಆದಾಗ್ಯೂ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ತನಿಖೆ ನಡೆಸಿರುವ ಎಸ್‌ಐಟಿ ಅಂತಿಮ ವರದಿ ತಯಾರಿಸಿದೆ. ಹಗರಣವನ್ನು ಸಿಬಿಐ ತನಿಖೆಗೆ ಕೋರಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸುತ್ತಿದೆ. ಇಷ್ಟೆಲ್ಲಾ ಬೆಳವಣಿಗೆಗಳ ನಡುವೆ, ಈ ಪ್ರಕರಣದಲ್ಲಿ ಯಾವುದಕ್ಕೂ ಸಂಬಂಧವೇ ಇಲ್ಲದ, ಸಾಮಾಜಿಕ ಕಾರ್ಯಕರ್ತ ಎಂದು ಹೇಳಿಕೊಂಡ ಜನಾಧಿಕಾರ ಸಂಘರ್ಷ ಪರಿಷತ್ (ಜೆಎಸ್‌ಪಿ) ಅಧ್ಯಕ್ಷ ಆದರ್ಶ ಅಯ್ಯರ್ ಎಂಬುವರು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದಾರೆ’ ಎಂದರು.

‘ದಿನೇಶ್‌ ಕಲ್ಲಹಳ್ಳಿ ದೂರನ್ನು ದಾಖಲಿಸಿಕೊಳ್ಳದ ಪೊಲೀಸ್ ಅಧಿಕಾರಿಗಳ ವಿರುದ್ಧ ತನಿಖೆ ನಡೆಸುವಂತೆ ಅಯ್ಯರ್‌ ಕೋರಿದ್ದಾರೆ. ಈ ದೂರಿನ ವಿಚಾರಣೆ ವೇಳೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ತನಿಖೆ ಮತ್ತು ಹೈಕೋರ್ಟ್‌ ವಿಭಾಗೀಯ ನ್ಯಾಯಪೀಠದ ಬೆಳವಣಿಗೆಗಳನ್ನು ಮ್ಯಾಜಿಸ್ಟ್ರೇಟ್‌ ಗಮನಕ್ಕೆ ತಾರದೆ ಮುಚ್ಚಿಟ್ಟಿದ್ದಾರೆ. ಹೀಗಾಗಿ 8ನೇ ಎಸಿಎಂಎಂ ನ್ಯಾಯಾಧೀಶರು, ತನಿಖೆಗೆ ನಿರ್ದೇಶಿಸಿ ಕೋರ್ಟ್‌ಗೆ ವರದಿ ಒಪ್ಪಿಸುವಂತೆ ಆದೇಶಿಸಿದ್ದಾರೆ. ಆದ್ದರಿಂದ, ವಿಚಾರಣಾ ನ್ಯಾಯಾಲಯದ ಆದೇಶಕ್ಕೆ ತಡೆ ನೀಡಬೇಕು’ ಎಂದು ಕೋರಿದರು.

ಈ ವಾದವನ್ನು ಮನ್ನಿಸಿದ ನ್ಯಾಯಪೀಠ, ಮ್ಯಾಜಿಸ್ಟ್ರೇಟ್‌ ಆದೇಶಕ್ಕೆ ಮಧ್ಯಂತರ ತಡೆ ನೀಡಿ ವಿಚಾರಣೆ ಮುಂದೂಡಿದೆ. ರಾಜ್ಯ ಪ್ರಾಸಿಕ್ಯೂಷನ್‌ ಪರ ರೋಹಿತ್ ಗೌಡ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.