ADVERTISEMENT

ಲಕ್ಷ್ಮಿ ಹೆಬ್ಬಾಳಕರ ಔಟ್‌ ಆಫ್‌ ಮೈಂಡ್ ಆಗಿದ್ದಾರೆ: ರಮೇಶ ಜಾರಕಿಹೊಳಿ ವ್ಯಂಗ್ಯ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2021, 9:36 IST
Last Updated 13 ಫೆಬ್ರುವರಿ 2021, 9:36 IST
ಶಾಸಕಿ ಲಕ್ಷ್ಮಿ ಹೆಬ್ಬಾಳಕರ - ಸಚಿವ ರಮೇಶ್ ಜಾರಕಿಹೊಳಿ
ಶಾಸಕಿ ಲಕ್ಷ್ಮಿ ಹೆಬ್ಬಾಳಕರ - ಸಚಿವ ರಮೇಶ್ ಜಾರಕಿಹೊಳಿ   

ಬೆಳಗಾವಿ: ‘ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಔಟ್ ಆಫ್‌ ಮೈಂಡ್ ಆಗಿದ್ದಾರೆ. ಹತಾಶರಾಗಿ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಅವರನ್ನು ಬಸ್ ನಿಲ್ದಾಣದಲ್ಲಿ ಹುಡುಕಬೇಕು’ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಇಲ್ಲಿ ಶನಿವಾರ ವ್ಯಂಗ್ಯವಾಡಿದರು.

‘ಪಕ್ಷ ಸೂಚಿಸಿದರೆ ಮುಂದಿನ ಚುನಾವಣೆಯಲ್ಲಿ ಗೋಕಾಕದಲ್ಲಿ ಸ್ಪರ್ಧಿಸುವೆ’ ಎಂಬ ಲಕ್ಷ್ಮಿ ಹೇಳಿಕೆಗೆ ಸಚಿವರು ಮೇಲಿನಂತೆ ಪ್ರತಿಕ್ರಿಯಿಸಿದರು.

ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ವಿಚಾರದಲ್ಲಿ ಮಂತ್ರಿಯಾಗಿ ಬಿ.ಎಸ್. ಯಡಿಯೂರಪ್ಪ ಕೈಗೊಳ್ಳುವ ನಿರ್ಣಯಕ್ಕೆ ಮತ್ತು ಸಮಾಜದವನಾಗಿ ಸ್ವಾಮೀಜಿ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧವಿರುತ್ತೇನೆ. ವಾಲ್ಮೀಕಿ ಸಮಾಜಕ್ಕೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಪ್ರಮಾಣ ಹೆಚ್ಚಿಸುವಂತೆ ಮಾತ್ರವೇ ಕೇಳುತ್ತಿದ್ದೇವೆ. ಅದನ್ನು ನೀಡಲು ತಾಂತ್ರಿಕ ಸಮಸ್ಯೆ ಏನಿಲ್ಲ’ ಎಂದರು.

ADVERTISEMENT

‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟಿಸಲು ಎಲ್ಲರಿಗೂ ಹಕ್ಕಿದೆ. ನಮ್ಮ ಸಮಾಜದ ಬಗ್ಗೆ ಯಡಿಯೂರಪ್ಪ ಪಾಸಿಟಿವ್ ಆಗಿದ್ದಾರೆ. ಅವರ ಮನದಲ್ಲಿ ಕೊಡಬಾರದು ಎಂದಿದ್ದರೆ ಹರಿಹರದ ಕಾರ್ಯಕ್ರಮಕ್ಕೆ ಬರುತ್ತಿರಲೇ ಇಲ್ಲ. ನಮ್ಮ ಬೇಡಿಕೆ ಹಿಂದಿನಿಂದಲೂ ಇದೆ. ಇತರ ಸಮಾಜದವರು ಇತ್ತೀಚೆಗೆ ಕೇಳುತ್ತಿದ್ದಾರೆ’ ಎಂದು ಹೇಳಿದರು.

ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಪಕ್ಷದಿಂದ ನೋಟಿಸ್ ನೀಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ‘ಯತ್ನಾಳ ಪಕ್ಷ ವಿರೋಧಿ ಚಟುವಟಿಕೆ ಮಾಡುತ್ತಿಲ್ಲ. ಅವರು ನನ್ನ ಸ್ನೇಹಿತ, ಪಕ್ಷದಲ್ಲಿ ಹಿರಿಯ. ಅವರಿಗೆ ತಿಳಿಸಿ ಹೇಳುತ್ತೇವೆ. ಸಮಾಜದ ಬಗ್ಗೆ ಮಾತನಾಡುವುದು ತಪ್ಪಲ್ಲ; ಇತಿಮಿತಿಯಲ್ಲಿ ಮಾತನಾಡುವಂತೆ ಕೋರುತ್ತೇನೆ. ಪ್ರಮುಖ ಸಮಾಜದ ಶಾಸಕ ಅವರು. ಮುಂದೆ ಒಳ್ಳೆಯ ಭವಿಷ್ಯವಿದೆ’ ಎಂದರು.

ಸಿದ್ದರಾಮಯ್ಯ ಗೊಂದಲದಲ್ಲಿದ್ದಾರೆ: ಟೀಕೆ
‘ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಗೊಂದಲಲ್ಲಿದ್ದಾರೆ. ಅಹಿಂದ, ಹಿಂದ ಬಗ್ಗೆ ಅವರಿಗೆ ಕ್ಲಿಯರ್ ಇಲ್ಲ. ಸ್ಪಷ್ಟ ಮಾಡಿಕೊಳ್ಳಲಿ, ನಂತರ ಪ್ರತಿಕ್ರಿಯಿಸುತ್ತೇನೆ’ ಎಂದು ರಮೇಶ ಜಾರಕಿಹೊಳಿ ಹೇಳಿದರು.

‘ಅವರು ಹೋರಾಡುತ್ತಿರುವುದು ಕಾಂಗ್ರೆಸ್‌ ಅಹಿಂದವೋ ಅಥವಾ ಎಲ್ಲ ಅಹಿಂದವೋ? ಪಕ್ಷಾತೀತವಾಗಿ ಅವರು ಅಹಿಂದ ಹೋರಾಟ ಮಾಡಿದರೆ ಕೈಜೋಡಿಸಲು ನೋಡಬಹುದು. ನಾಯಕ ನಾನು; ಅವರೇ ನಮ್ಮನ್ನು ಕರೆಯಬೇಕಾಗುತ್ತದೆ’ ಎಂದರು.

ಆಗ ಮಧ್ಯಪ್ರವೇಶಿಸಿದ ಸಚಿವ ಉಮೇಶ ಕತ್ತಿ, ‘ಹಿಂದನೂ ಇಲ್ಲ ಮಂದನೂ ಇಲ್ಲ. ಅಹಿಂದ ಹೋಗಿ ಈಗ ಹಿಂದ ಆಗೇತಿ. ಮುಂದ ಯಾವದ ಆಗ್ತೇತಿ ನೋಡೋಣ’ ಎಂದು ಸಿದ್ದರಾಮಯ್ಯ ನಡೆಯ ಬಗ್ಗೆ ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.