ಬೆಂಗಳೂರು: ರಮೇಶ್ ಜಾರಕಿಹೊಳಿ ಅವರಿಗೆ ಸಂಬಂಧಿಸಿದ್ದು ಎನ್ನಲಾದ ಸಿ.ಡಿ.ಯಲ್ಲಿ ಕಾಣಿಸಿರುವ ಯುವತಿಯು, ಪ್ರಕರಣದ ಕುರಿತು ಹೇಳಿಕೆ ನೀಡಲು (ಸ್ಟೇಟ್‌ಮೆಂಟ್ 164) ನಾಳೆ (ಸೋಮವಾರ) ನ್ಯಾಯಾಲಯದ ಮುಂದೆ ಹಾಜರಾಗುವ ಸಾಧ್ಯತೆ ಇರುವುದಾಗಿ ವಕೀಲರಾದ ಕೆ.ಎನ್. ಜಗದೀಶ್ ತಿಳಿಸಿದ್ದಾರೆ.
ಯುವತಿ ಕೈಬರಹದಲ್ಲಿ ನೀಡಿದ್ದ ದೂರಿನ ಪ್ರತಿಯನ್ನು ಅವರ ಪರ ವಕೀಲ ಜಗದೀಶ್ ಅವರು ಶುಕ್ರವಾರ ಪೊಲೀಸ್ ಕಮಿಷನರ್‌ಗೆ ತಲುಪಿಸಿ, ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದರು. ಅದರ ಬೆನ್ನಲ್ಲೇ ರಮೇಶ್ ಜಾರಕಿಹೊಳಿ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು.
ಉದ್ದೇಶಪೂರ್ವಕ ಲೈಂಗಿಕ ದೌರ್ಜನ್ಯ (ಐಪಿಸಿ 354 ಎ), ಜೀವ ಬೆದರಿಕೆ (ಐಪಿಸಿ 506), ಅವಾಚ್ಯ ಶಬ್ದಗಳಿಂದ ನಿಂದನೆ (ಐಪಿಸಿ 504), ಅಧಿಕಾರದಲ್ಲಿ ದುರುಪಯೋಗಪಡಿಸಿಕೊಂಡು ಅತ್ಯಾಚಾರ (376–ಸಿ), ನೌಕರಿ ಕೊಡಿಸುವುದಾಗಿ ವಂಚನೆ (ಐಪಿಸಿ 417) ಆರೋಪ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಸಿ.ಡಿ. ಪ್ರಕರಣದಲ್ಲಿ ಅತ್ಯಾಚಾರ ಪ್ರಕರಣ ಮತ್ತು ಸುಲಿಗೆ (extortion) ಪ್ರಕರಣ ದಾಖಲಾಗಿವೆ. ಎರಡೂ ಪ್ರಕರಣಗಳನ್ನು ವಿಶೇಷ ತನಿಖಾ ತಂಡ ತನಿಖೆ ನಡೆಸುತ್ತಿದೆ ಎಂದು ಜಗದೀಶ್ ಫೇಸ್‌ಬುಕ್ ಲೈವ್‌ನಲ್ಲಿ ಹೇಳಿದ್ದಾರೆ.
ಪ್ರಕರಣದ ಸಂಬಂಧ ಸಂತ್ರಸ್ತ ಯುವತಿಯನ್ನು ಹೇಳಿಕೆ ನೀಡಲು (ಸ್ಟೇಟ್‌ಮೆಂಟ್ 164) ನಾಳೆ (ಸೋಮವಾರ) ನ್ಯಾಯಾಲಯದ ಮುಂದೆ ಹಾಜರು ಪಡಿಸುವ ಸಾಧ್ಯತೆ ಇದೆ. ಗಂಭೀರ ಸ್ವರೂಪದ ದೂರುಗಳಾಗಿದ್ದು, ಪೊಲೀಸರು ನ್ಯಾಯಯುತವಾಗಿ ತನಿಖೆ ನಡೆಸುವ ಬಗ್ಗೆ ಸಂಶಗಳಿವೆ ಎಂದಿದ್ದಾರೆ.
'ಕೋರ್ಟ್‌ನಲ್ಲಿ ಇನ್–ಕ್ಯಾಮೆರಾ ಪ್ರಕ್ರಿಯೆ ನಡೆಯಲಿದ್ದು, ಯುವತಿಯ ಹೇಳಿಕೆಗಳು ದಾಖಲಾಗಲಿವೆ. ಆರೋಪಿ ಮತ್ತು ಸಂತ್ರಸ್ತೆ ಆರೋಗ್ಯ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ' ಎಂದು ಜಗದೀಶ್ ಅವರೊಂದಿಗೆ ಫೇಸ್‌ಬುಕ್ ಸಂವಾದದಲ್ಲಿದ್ದ ಮಂಜುನಾಥ್ ಎಂಬುವವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.