ADVERTISEMENT

ಸಿದ್ದರಾಮಯ್ಯ ಸೋಲಿಗೆ ರಮೇಶ್‌ಕುಮಾರ್‌ ಕಣ್ಣೀರು

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2018, 20:45 IST
Last Updated 9 ಡಿಸೆಂಬರ್ 2018, 20:45 IST
ಕೋಲಾರದಲ್ಲಿ ಭಾನುವಾರ ನಡೆದ ಕನಕ ಜಯಂತಿಯಲ್ಲಿ ವಿಧಾನಸಭಾಧ್ಯಕ್ಷ ಕೆ.ಆರ್‌.ರಮೇಶ್‌ಕುಮಾರ್‌ ಅವರು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿನ ಸಿದ್ದರಾಮಯ್ಯರ ಸೋಲು ನೆನೆದು ಭಾವುಕರಾಗಿ ಅತ್ತ ಕ್ಷಣ.
ಕೋಲಾರದಲ್ಲಿ ಭಾನುವಾರ ನಡೆದ ಕನಕ ಜಯಂತಿಯಲ್ಲಿ ವಿಧಾನಸಭಾಧ್ಯಕ್ಷ ಕೆ.ಆರ್‌.ರಮೇಶ್‌ಕುಮಾರ್‌ ಅವರು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿನ ಸಿದ್ದರಾಮಯ್ಯರ ಸೋಲು ನೆನೆದು ಭಾವುಕರಾಗಿ ಅತ್ತ ಕ್ಷಣ.   

ಕೋಲಾರ: ‘ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿನ ಸಿದ್ದರಾಮಯ್ಯರ ಸೋಲು ನನ್ನ ಸಾವಿಗಿಂತ ಹೆಚ್ಚು ನೋವುಂಟು ಮಾಡಿದೆ’ ಎಂದು ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್‌ಕುಮಾರ್ ಭಾವುಕರಾಗಿ ಕಣ್ಣೀರು ಹಾಕಿದರು.

ಇಲ್ಲಿ ಭಾನುವಾರ ನಡೆದ ಕನಕ ಜಯಂತಿಯಲ್ಲಿ ಮಾತನಾಡಿ, ‘ಸಿದ್ದರಾಮಯ್ಯ ಅವರು ಮಾಡಿದ ಅಭಿವೃದ್ಧಿ ಮತ್ತು ಜನಪರ ಕೆಲಸಗಳಿಂದ ಮತ್ತೊಮ್ಮೆ ಮುಖ್ಯಮಂತ್ರಿ ಸ್ಥಾನಕ್ಕೆ ಏರಬೇಕಿತ್ತು. ಆದರೆ, ಮತದಾರರು ಅವರ ಕೈ ಹಿಡಿಯಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಕೋಲಾರ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಸಿದ್ದರಾಮಯ್ಯರ ಕೈಹಿಡಿದು ಕೇಳಿಕೊಂಡೆವು. ಆದರೆ, ಅವರು ಒಪ್ಪಲಿಲ್ಲ. ಚಾಮುಂಡೇಶ್ವರಿ ಕ್ಷೇತ್ರದ ಜನ ಅವರನ್ನು ಸೋಲಿಸಿ, ಒಳ್ಳೆ ಕೆಲಸ ಮಾಡಿದವರಿಗೆ ಉಳಿಗಾಲವಿಲ್ಲ ಎಂಬುದನ್ನು ತೋರಿಸಿದ್ದಾರೆ’ ಎಂದು ಗಳಗಳನೆ ಅತ್ತರು.

ADVERTISEMENT

‘ಬಡವರಿಗೆ ಅನ್ನ ಕೊಟ್ಟ ಸಿದ್ದರಾಮಯ್ಯ ಅವರಿಗೆ ಜನ ಚುನಾವಣೆಯಲ್ಲಿ ವಿಷ ಹಾಕಿದರು. ಅವರ ಜನಪರ ಕಾರ್ಯಕ್ರಮಗಳನ್ನು ಕಾಂಗ್ರೆಸ್ ಶಾಸಕರೇ ಸಮರ್ಥನೆ ಮಾಡಿಕೊಳ್ಳಲಿಲ್ಲ. ಅವರು ಪುನಃ ಮುಖ್ಯಮಂತ್ರಿ ಆಗಬಾರದೆಂದು ಕಾಂಗ್ರೆಸ್ ಮುಖಂಡರೇ ವಿರೋಧ ಮಾಡಿದ್ದರು. ವಿರೋಧ ಮಾಡಿದವರು ಒಂದು ಸಲ ಕನ್ನಡಿಯಲ್ಲಿ ತಮ್ಮ ಮುಖ ನೋಡಿಕೊಂಡು ಮಾತನಾಡಬೇಕು’ ಎಂದು ಮಾರ್ಮಿಕವಾಗಿ ನುಡಿದರು.

‘ಸಿದ್ದರಾಮಯ್ಯ ಅವರಲ್ಲಿ ದೇವರಾಜ ಅರಸುರನ್ನು ಕಂಡಿದ್ದೇನೆ. ಅನರ್ಘ್ಯ ರತ್ನ ಸಿದ್ದರಾಮಯ್ಯ ಅವರನ್ನು ಕೆಳಕ್ಕೆ ಬೀಳಲು ಬಿಡೋದಿಲ್ಲ ಎಂದು ಕುರುಬ ಸಮುದಾಯ ಪ್ರಮಾಣ ಮಾಡಬೇಕು’ ಎಂದು ಗದ್ಗದಿತರಾದರು. ಈ ವೇಳೆ ವೇದಿಕೆಯಲ್ಲಿದ್ದ ಸಿದ್ದರಾಮಯ್ಯ ಸಹ ಭಾವುಕರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.