ADVERTISEMENT

ಸಿ.ಡಿ ಪ್ರಕರಣ: ನಾಳೆ ರಮೇಶ ಹಾಜರಿ ಕಡ್ಡಾಯ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2021, 18:45 IST
Last Updated 3 ಏಪ್ರಿಲ್ 2021, 18:45 IST
   

ಬೆಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ಸಂತ್ರಸ್ತೆಯಿಂದ ಹೇಳಿಕೆ ಪಡೆದು ವೈದ್ಯಕೀಯ ಪರೀಕ್ಷೆ ಹಾಗೂ ಮಹಜರು ಮುಗಿಸಿರುವ ಎಸ್‌ಐಟಿ ಅಧಿಕಾರಿಗಳು, ಪ್ರಕರಣದ ಆರೋಪಿ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ವಿಚಾರಣೆಗೆ ಸಿದ್ಧರಾಗಿದ್ದಾರೆ. ‘ಏ. 5ರಂದು ಬೆಳಿಗ್ಗೆ 10.30ಕ್ಕೆ ವಿಚಾರಣೆಗೆ ಕಡ್ಡಾಯವಾಗಿ ಹಾಜರಾಗಬೇಕು’ ಎಂದು ರಮೇಶಗೆ ನೋಟಿಸ್ ನೀಡಿದ್ದಾರೆ.

ಶುಕ್ರವಾರವೇ (ಏ. 2) ರಮೇಶ ವಿಚಾರಣೆಗೆ ಬರಬೇಕಿತ್ತು. ಆದರೆ, ಜ್ವರದ ಕಾರಣ ನೀಡಿ ವಿಚಾರಣೆಗೆ ಗೈರಾಗಿದ್ದರು. ವಿನಾಯಿತಿ ನೀಡಿದ್ದ ಅಧಿಕಾರಿಗಳು, ಈಗ ಮತ್ತೊಂದು ನೋಟಿಸ್‌ ಕೊಟ್ಟು ವಿಚಾರಣೆಗೆ ಕಡ್ಡಾಯವಾಗಿ ಹಾಜರಿರಬೇಕೆಂದು ಸೂಚಿಸಿದ್ದಾರೆ. ತಪ್ಪಿದರೆ, ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿರುವುದಾಗಿ ಮೂಲಗಳು ಹೇಳಿವೆ.

‘ರಮೇಶ ಜಾರಕಿಹೊಳಿ ನನ್ನ ಮೇಲೆ ಅತ್ಯಾಚಾರ ಎಸಗಿ, ಜೀವ ಬೆದರಿಕೆವೊಡ್ಡಿದ್ದಾರೆ’ ಎಂದು ಆರೋಪಿಸಿ ಸಂತ್ರಸ್ತೆ ಹೇಳಿಕೆ ದಾಖಲಿಸಿದ್ದಾರೆ. ಅದರನ್ವಯ ಪ್ರಕರಣದ ತನಿಖೆ ಮುಂದುವರಿದಿದ್ದು, ಹೇಳಿಕೆಯಲ್ಲಿರುವ ಪ್ರತಿಯೊಂದು ಅಂಶಗಳಿಗೂ ಸಂತ್ರಸ್ತೆ ಪುರಾವೆಗಳನ್ನು ಒದಗಿಸಿದ್ದಾರೆ.

ADVERTISEMENT

ಬೌರಿಂಗ್ ಆಸ್ಪತ್ರೆಯಲ್ಲಿ ಸಂತ್ರಸ್ತೆ ವೈದ್ಯಕೀಯ ಪರೀಕ್ಷೆಯನ್ನೂ ನಡೆಸಿ, ಅದರ ವರದಿಗಾಗಿ ತನಿಖಾಧಿಕಾರಿ ಕಾಯುತ್ತಿದ್ದಾರೆ. ಸಂತ್ರಸ್ತೆ ನೀಡಿರುವ ಪುರಾವೆ ಆಧರಿಸಿ ಪ್ರಶ್ನಾವಳಿಗಳನ್ನು ಸಿದ್ಧಪಡಿಸಿಕೊಂಡಿರುವ ತನಿಖಾಧಿಕಾರಿ, ಅವುಗಳಿಗೆ ರಮೇಶ ಜಾರಕಿಹೊಳಿ ಅವ
ರಿಂದ ಉತ್ತರ ಪಡೆಯಲು ಕಾಯುತ್ತಿದ್ದಾರೆ. ‘ಅತ್ಯಾಚಾರ ಪ್ರಕರಣದಲ್ಲಿ ಸಂತ್ರಸ್ತೆ ರೀತಿಯಲ್ಲೇ ಆರೋಪಿಯನ್ನೂ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಬೇಕು. ಧ್ವನಿ ಮಾದರಿಯನ್ನೂ ಸಂಗ್ರಹಿಸಬೇಕು. ಆದರೆ, ಸದ್ಯಕ್ಕೆ ಅದು ಯಾವುದು ಆಗಿಲ್ಲ. ರಮೇಶ ವಿಚಾರಣೆಗೆ ಬಂದರೆ, ಹಲವು ಮಾಹಿತಿಗಳನ್ನು ಸಂಗ್ರಹಿಸಲಾಗುವುದು. ಅವುಗಳನ್ನು ಪರಿಶೀಲಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಎಸ್‌ಐಟಿ ಮೂಲಗಳು ಹೇಳಿವೆ.

ನಾಲ್ಕುವರೆ ಗಂಟೆ ವಿಚಾರಣೆ: ಸಂತ್ರಸ್ತೆಯನ್ನು ಶನಿವಾರವೂ ತನಿಖಾಧಿಕಾರಿ ಎಂ.ಸಿ. ಕವಿತಾ ನೇತೃತ್ವದ ತಂಡ ವಿಚಾರಣೆಗೆ ಒಳಪಡಿಸಿತು. ಆಡುಗೋಡಿಯಲ್ಲಿರುವ ಸಿಸಿಬಿ ತಾಂತ್ರಿಕ ವಿಭಾಗದ ಕೊಠಡಿಗೆ ಬೆಳಿಗ್ಗೆ 10.30ಕ್ಕೆ ಬಂದಿದ್ದ ಸಂತ್ರಸ್ತೆ, ಮಧ್ಯಾಹ್ನ 3 ಗಂಟೆಯವರೆಗೆ ವಿಚಾರಣೆ ಎದುರಿಸಿದರು.

ಐದು ದಿನಗಳಿಂದ ಸಂತ್ರಸ್ತೆಯನ್ನು ವಿಚಾರಣೆಗೆ ಒಳಪಡಿಸಿ ಹೇಳಿಕೆ ಪಡೆದಿದ್ದ ತನಿಖಾಧಿಕಾರಿ, ಪೂರಕ ಪ್ರಶ್ನೆಗಳನ್ನು ಸಿದ್ಧಪಡಿಸಿಕೊಂಡು ವಿಚಾರಣೆ ಮುಂದುರಿಸಿದ್ದಾರೆ. ವಿಚಾರಣೆ ಮುಗಿದ ನಂತರ ಪೊಲೀಸರೇ ಯುವತಿಯನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಸುರಕ್ಷಿತವಾಗಿರಿಸಿದ್ದಾರೆ. ಸಂತ್ರಸ್ತೆ ಇರುವ ಸ್ಥಳದಲ್ಲಿ ಪೊಲೀಸರು ಬಿಗಿ ಭದ್ರತೆಯನ್ನೂ ಒದಗಿಸಿದ್ದಾರೆ.

ಯುವತಿ ಜೊತೆ ಮಾಜಿ ಸಚಿವರ ಒಡನಾಟ?

ರಮೇಶ ಜಾರಕಿಹೊಳಿ ಅವರ ವಿರುದ್ಧ ಅತ್ಯಾಚಾರ ಆರೋಪದಡಿ ದೂರು ನೀಡಿರುವ ಯುವತಿ, ಮಾಜಿ ಸಚಿವರಿಬ್ಬರ ಜೊತೆ ಒಡನಾಟ ಹೊಂದಿದ್ದರೆಂಬ ಮಾಹಿತಿ ತನಿಖೆಯಿಂದ ಹೊರಬಿದ್ದಿರುವುದಾಗಿ ಗೊತ್ತಾಗಿದೆ.

‘ಕಳೆದ 10 ವರ್ಷಗಳಿಂದ ಯುವತಿ ಉಪಯೋಗಿಸಿದ್ದ ಮೊಬೈಲ್‌ ನಂಬರ್ ಕರೆಗಳ ವಿವರಗಳನ್ನು ಎಸ್‌ಐಟಿ ಅಧಿಕಾರಿಗಳು ಸಂಗ್ರಹಿಸಿದ್ದು, ಅದರಲ್ಲಿ ಎರಡು ಮೊಬೈಲ್‌ ನಂಬರ್‌ಗಳು, ಮಾಜಿ ಸಚಿವರದ್ದು’ ಎಂದು ಮೂಲಗಳು ಹೇಳಿವೆ. ಆದರೆ, ಎಸ್‌ಐಟಿ ಅಧಿಕಾರಿಗಳು ಈ ಮಾಹಿತಿಯನ್ನು ಖಚಿತಪಡಿಸಿಲ್ಲ.

‘ಚಿತ್ರದುರ್ಗ ಜಿಲ್ಲೆಯ ವಿಧಾನಸಭಾ ಕ್ಷೇತ್ರವೊಂದರಿಂದ ಹಾಗೂ ಹಾವೇರಿ ಜಿಲ್ಲೆಯ ವಿಧಾನಸಭಾ ಕ್ಷೇತ್ರವೊಂದರಿಂದ ಚುನಾಯಿತರಾಗಿದ್ದ ಇಬ್ಬರು, ಸಚಿವರಾಗಿಯೂ ಕೆಲಸ ಮಾಡಿದ್ದರು. ಕೆಲ ತಿಂಗಳ ಹಿಂದಷ್ಟೇ ಅವರು ಯುವತಿ ಜೊತೆ ಮೊಬೈಲ್‌ನಲ್ಲಿ ಮಾತನಾಡಿದ್ದರು. ಆದರೆ, ಅದರ ಉದ್ದೇಶವೇನು ಎಂಬುದು ಸದ್ಯಕ್ಕೆ ಗೊತ್ತಾಗಿಲ್ಲ’ ಎಂದೂ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.