ಬೆಂಗಳೂರು: ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ನಟಿ ರನ್ಯಾ ರಾವ್ ಅವರ ವಿರುದ್ಧ ಕೇಂದ್ರೀಯ ಆರ್ಥಿಕ ಗುಪ್ತಚರ ಬ್ಯೂರೊ (ಸಿಇಐಬಿ) ‘ಕಾಫಿಪೋಸಾ’ ಕಾಯ್ದೆ ಅಡಿ ಬಂಧನದ ಆದೇಶ ಹೊರಡಿಸಿದೆ.
ವಿದೇಶಿ ವಿನಿಮಯ ನಿಯಂತ್ರಣ ಮತ್ತು ಕಳ್ಳಸಾಗಣೆ ಚಟುವಟಿಕೆಗಳ ತಡೆ ಕಾಯ್ದೆಯ (ಕಾಫಿಫೋಸಾ) 3(1) ಸೆಕ್ಷನ್ ಅಡಿಯಲ್ಲಿ ರನ್ಯಾ ವಿರುದ್ಧ ಸಿಇಐಬಿ ಜಂಟಿ ಕಾರ್ಯದರ್ಶಿ ಅನುಪಮ್ ಪ್ರಕಾಶ್ ಏಪ್ರಿಲ್ 22ರಂದು ಬಂಧನ ಆದೇಶ ಹೊರಡಿಸಿದ್ದಾರೆ.
ಕಾಫಿಪೋಸಾ ಪ್ರಕರಣದಲ್ಲಿ ಬಂಧನವಾದರೆ ಜಾಮೀನಿನ ಮೇಲೆ ಬಿಡುಗಡೆ ಸಾಧ್ಯವಿಲ್ಲ.
‘ಈಗಾಗಲೇ ಬಂಧನದಲ್ಲಿ ಇರುವ ಹರ್ಷವರ್ಧಿನಿ ರನ್ಯಾ ಅವರನ್ನು ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ಬಂಧನದಲ್ಲಿ ಇರಿಸಿ’ ಎಂದು ಅನುಪಮ್ ಪ್ರಕಾಶ್ ಅವರು ರಾಜ್ಯ ಸರ್ಕಾರಕ್ಕೆ ಸೂಚಿಸಿದ್ದಾರೆ. ಆದೇಶದ ಪ್ರತಿಯನ್ನು ರನ್ಯಾ ರಾವ್ ಅವರಿಗೂ ಕಳುಹಿಸಿದ್ದಾರೆ.
ಚಿನ್ನ ಕಳ್ಳಸಾಗಣೆ ಮತ್ತು ಇತರ ಕಳ್ಳಸಾಗಣೆ ಚಟುವಟಿಕೆಗಳಲ್ಲಿ ತೊಡಗಿಕೊಂಡ ಆರೋಪ ಹೊತ್ತ ವ್ಯಕ್ತಿಗಳನ್ನು ಕಾಫಿಪೋಸಾ ಅಡಿಯಲ್ಲಿ ಬಂಧಿಸಲಾಗುತ್ತದೆ. ಕಾಫಿಪೋಸಾ ಅಡಿ ಬಂಧನಕ್ಕೆ ಒಳಗಾದವರನ್ನು ಕನಿಷ್ಠ 3 ತಿಂಗಳಿಂದ 1 ವರ್ಷದವರೆಗೂ ಸೆರೆವಾಸದಲ್ಲಿ ಇರಿಸಬಹುದು. ತೀರಾ ಗಂಭೀರ ಪ್ರಕರಣದಲ್ಲಿ ಸೆರೆವಾಸವನ್ನು ಎರಡು ವರ್ಷಗಳವರೆಗೂ ವಿಸ್ತರಿಸಬಹುದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.