ADVERTISEMENT

ಒಡಕು ಮೂಡಿಸಲು ಜಾತಿಗಣತಿ: ಆರ್‌.ಅಶೋಕ

​ಪ್ರಜಾವಾಣಿ ವಾರ್ತೆ
Published 24 ಜುಲೈ 2025, 16:11 IST
Last Updated 24 ಜುಲೈ 2025, 16:11 IST
ಆರ್.ಅಶೋಕ
ಆರ್.ಅಶೋಕ   

ಬೆಂಗಳೂರು: ‘ಜಾತಿ ಸಮುದಾಯಗಳ ನಡುವೆ ಒಡಕು ಮೂಡಿಸಿ, ತಾವು ಲಾಭ ಮಾಡಿಕೊಳ್ಳುವ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತೆ ಜಾತಿವಾರು ಸಮೀಕ್ಷೆ ನಡೆಸಲು ಹೊರಟಿದ್ದಾರೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಆರೋಪಿಸಿದರು.

ಸುದ್ದಿಗಾರರ ಜತೆ ಗುರುವಾರ ಮಾತನಾಡಿದ ಅವರು, ‘ಜಾತಿಗಳ ನಡುವೆ ಕಂದಕ ಮೂಡಿಸಲು ಸಿದ್ದರಾಮಯ್ಯ ಅವರು ಈ ಹಿಂದೆ ಜಾತಿಗಣತಿ ಮಾಡಿಸಿದ್ದರು. ಅದನ್ನು ಅವರ ಹೈಕಮಾಂಡ್ ತಿರಸ್ಕರಿಸಿದೆ. ಹೀಗಾಗಿ ಮತ್ತೆ ಸಮೀಕ್ಷೆ ಮಾಡಿಸಲು ಮುಂದಾಗಿದ್ದಾರೆ. ಅಂದರೆ, ಈ ಹಿಂದಿನ ಜಾತಿಗಣತಿ ವರದಿ ಬೋಗಸ್‌ ಎಂದು ಅರ್ಥವಲ್ಲವೇ’ ಎಂದು ಪ್ರಶ್ನಿಸಿದರು.

‘ಒಳಮೀಸಲಾತಿ ನೀಡುವ ಉದ್ದೇಶದಿಂದ ಪರಿಶಿಷ್ಟ ಜಾತಿಗಳ ಸಮೀಕ್ಷೆಯನ್ನು ಈ ಸರ್ಕಾರ ಕೇವಲ 15 ದಿನಗಳಲ್ಲಿ ಮುಗಿಸಿದೆ. ಅಷ್ಟು ಕಡಿಮೆ ಅವಧಿಯಲ್ಲಿ ಕರಾರುವಾಕ್ಕಾದ ಸಮೀಕ್ಷೆ ಸಾಧ್ಯವೇ? ಕೇಂದ್ರ ಸರ್ಕಾರವೇ ಜಾತಿಗಣತಿ ನಡೆಸಲಿದೆ. ರಾಜ್ಯ ಸರ್ಕಾರವು ಅದಕ್ಕೆ ಸಹಕಾರ ನೀಡಿದರೆ ಸಾಕು. ಪ್ರತ್ಯೇಕ ಗಣತಿ ನಡೆಸಿ, ಜನರ ತೆರಿಗೆ ಹಣ ಪೋಲು ಮಾಡುವುದು ಬೇಕಿಲ್ಲ’ ಎಂದು ಆಗ್ರಹಿಸಿದರು.

ADVERTISEMENT

‘ಡಿಜೆ ಹಳ್ಳಿ–ಕೆಜಿ ಹಳ್ಳಿ ಗಲಭೆ ಪ್ರಕರಣದಲ್ಲಿ ಶಿಕ್ಷೆ ಪ್ರಕಟವಾಗಿರುವುದು ಸ್ವಾಗತಾರ್ಹ. ಶಾಸಕರ ಮನೆ ಸುಟ್ಟಿರುವ ಘಟನೆ ಇನ್ನೂ ಕಣ್ಣ ಮುಂದಿದೆ. ಪಿಎಫ್‌ಐ ಸೇರಿ ಪಾಕಿಸ್ತಾನದ ಪರವಾಗಿರುವವರು ಅನೇಕರು ಇದರಲ್ಲಿ ಭಾಗಿಯಾಗಿದ್ದರು. ಅವರೆಲ್ಲರಿಗೂ ಕಠಿಣ ಶಿಕ್ಷೆಯಾಗಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.