ADVERTISEMENT

ರಾಷ್ಟ್ರೋತ್ಥಾನ ಆಸ್ಪತ್ರೆಗೆ ಡಿ.5ರಂದು ಚಾಲನೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2022, 16:00 IST
Last Updated 3 ಡಿಸೆಂಬರ್ 2022, 16:00 IST
ಆಸ್ಪತ್ರೆಯ ವೈದ್ಯಕೀಯ ಉಪಕರಣಗಳನ್ನು ನಾ. ದಿನೇಶ್ ಹೆಗ್ಡೆ ವೀಕ್ಷಿಸಿದರು. ಸುಧೀರ್ ಪೈ ಹಾಗೂ ಡಾ. ಸಂಧ್ಯಾ ರವಿ ಇದ್ದಾರೆ.
ಆಸ್ಪತ್ರೆಯ ವೈದ್ಯಕೀಯ ಉಪಕರಣಗಳನ್ನು ನಾ. ದಿನೇಶ್ ಹೆಗ್ಡೆ ವೀಕ್ಷಿಸಿದರು. ಸುಧೀರ್ ಪೈ ಹಾಗೂ ಡಾ. ಸಂಧ್ಯಾ ರವಿ ಇದ್ದಾರೆ.   

ಬೆಂಗಳೂರು:ರಾಷ್ಟ್ರೋತ್ಥಾನ ಪರಿಷತ್ ರಾಜರಾಜೇಶ್ವರಿ ನಗರದಲ್ಲಿ ನಿರ್ಮಿಸಿರುವ ಜಯದೇವ ಸ್ಮಾರಕ ರಾಷ್ಟ್ರೋತ್ಥಾನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರಕ್ಕೆ ಸೋಮವಾರ ಚಾಲನೆ ಸಿಗಲಿದೆ.

‌ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಪರಿಷತ್ ಪ್ರಧಾನ ಕಾರ್ಯದರ್ಶಿ ನಾ. ದಿನೇಶ್ ಹೆಗ್ಡೆ, ‘ಸಂಜೆ 6 ಗಂಟೆಗೆ ಆಸ್ಪತ್ರೆಯ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಇನ್ಫೊಸಿಸ್‌ ಪ್ರತಿಷ್ಠಾನದ ಸ್ಥಾಪಕರಾದ ಸುಧಾ ಮೂರ್ತಿ, ನಾರಾಯಣ ಹೆಲ್ತ್‌ನ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಜನಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ಗುಣಮಟ್ಟದ ವೈದ್ಯಕೀಯ ಸೇವೆ ಒದಗಿಸುವ ಉದ್ದೇಶದಿಂದ ಆಸ್ಪತ್ರೆಯನ್ನು ಪ್ರಾರಂಭಿಸಲಾಗುತ್ತಿದೆ’ ಎಂದರು.

‘ರಾಷ್ಟ್ರೋತ್ಥಾನ ಪರಿಷತ್ತನ್ನು ಕಟ್ಟಿ ಬೆಳೆಸಿದ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕರಾಗಿದ್ದ ಮೈ.ಚ. ಜಯದೇವ ಅವರ ಹೆಸರನ್ನು ಆಸ್ಪತ್ರೆಗೆ ಇಡಲಾಗಿದೆ. ಆಧುನಿಕ ವೈದ್ಯಕೀಯ ಪದ್ಧತಿ, ಆಯುರ್ವೇದ, ಹೋಮಿಯೋಪಥಿ, ಯೋಗ, ನ್ಯಾಚುರೋಪಥಿ ಮೊದಲಾದ ಚಿಕಿತ್ಸಾ ಸೌಲಭ್ಯವನ್ನು ಆಸ್ಪತ್ರೆ ಹೊಂದಿದೆ. ಪ್ರಸ್ತುತ ಸಮಾಜ ಜೀವನವನ್ನು ಪ್ರಭಾವಿಸುವ 18ಕ್ಕೂ ಅಧಿಕ ಕಾರ್ಯಯೋಜನೆಗಳನ್ನು ನಡೆಸುತ್ತಿದ್ದೇವೆ’ ಎಂದು ಹೇಳಿದರು.

ADVERTISEMENT

ವೈದ್ಯೆ ಡಾ. ಸಂಧ್ಯಾ ರವಿ,‘ಜನರಲ್ ಮೆಡಿಸಿನ್, ಕಾರ್ಡಿಯಾಲಜಿ, ನ್ಯೂರಾಲಜಿ, ಪೀಡಿಯಾಟ್ರಿಕ್ಸ್ ಸೇರಿ ಆಧುನಿಕ ವೈದ್ಯಕೀಯ ಪದ್ಧತಿಯ ವಿವಿಧ ವಿಭಾಗಗಳ ಜತೆಗೆ ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಯ ವಿಭಾಗಗಳೂ ಆಸ್ಪತ್ರೆಯಲ್ಲಿ ಇರಲಿವೆ’ ಎಂದು ತಿಳಿಸಿದರು.

160 ಹಾಸಿಗೆಗಳ ಆಸ್ಪತ್ರೆ

‘ಆಸ್ಪತ್ರೆಯಲ್ಲಿ 19 ಸಾಮಾನ್ಯ ವಾರ್ಡ್‌ಗಳು, 72 ಸೆಮಿ ಪ್ರೈವೇಟ್ ವಾರ್ಡ್‌ಗಳು, 17 ಪ್ರೈವೇಟ್ ವಾರ್ಡ್‌ಗಳು ಹಾಗೂ 11 ತುರ್ತುಚಿಕಿತ್ಸಾ ವಾರ್ಡ್‌ಗಳು ಇವೆ. ಒಟ್ಟು 160 ಹಾಸಿಗೆಗಳಿದ್ದು, ಸಮಗ್ರ ಆಧುನಿಕ ವೈದ್ಯಕೀಯ ಮೂಲಸೌಕರ್ಯಗಳನ್ನು ಆಸ್ಪತ್ರೆ ಹೊಂದಿದೆ. ತಜ್ಞ ವೈದ್ಯರು ಹಾಗೂ ಸೇವಾ ಮನೋಭಾವದ ವೈದ್ಯಕೀಯ ಸಿಬ್ಬಂದಿಯನ್ನು ಆಸ್ಪತ್ರೆ ಹೊಂದಿದೆ. ಗುಣಮಟ್ಟದ ವೈದ್ಯಕೀಯ ಸೇವೆ ಒದಗಿಸುವುದು ಆಸ್ಪತ್ರೆಯ ಗುರಿಯಾಗಿದೆ’ ಎಂದು ಆಸ್ಪತ್ರೆಯ ಆಡಳಿತ ಮಂಡಳಿ ಅಧ್ಯಕ್ಷ ಸುಧೀರ್ ಪೈ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.