ಬೇಲೂರು ತಾಲ್ಲೂಕಿನ ಕುಪ್ಪಗೋಡು ಗ್ರಾಮದಲ್ಲಿ ಭೂಮಿಕ್ ಪಾರ್ಥಿವಶರೀರದ ಎದುರು ರೋದಿಸುತ್ತಿದ್ದ ಪಾಲಕರಿಗೆ ಶಾಸಕ ಎಚ್.ಕೆ.ಸುರೇಶ್ ಸಾಂತ್ವನ ಹೇಳಿದರು
ಬೇಲೂರು (ಹಾಸನ): ‘ನಮ್ಮ ಮಗನೇನು ಜಮ್ಮು–ಕಾಶ್ಮೀರಕ್ಕೆ ಹೋಗಿದ್ದನೆ? ಅಲ್ಲಿ ಅವನನ್ನು ಉಗ್ರರು ಕೊಂದು ಹಾಕಿದರೆ? ನಮ್ಮದೇ ರಾಜ್ಯದಲ್ಲಿ ನಮ್ಮವರು ಸುರಕ್ಷಿತವಾಗಿಲ್ಲ ಎಂದರೆ ಹೇಗೆ?...’
ಬೆಂಗಳೂರಿನಲ್ಲಿ ಬುಧವಾರ ನಡೆದ ಕಾಲ್ತುಳಿತದಲ್ಲಿ ಮೃತಪಟ್ಟ ತಾಲ್ಲೂಕಿನ ಕುಪ್ಪಗೋಡು ಗ್ರಾಮದ ಭೂಮಿಕ್ (20) ಅಂತ್ಯಕ್ರಿಯೆ ಗುರುವಾರ ಗ್ರಾಮದಲ್ಲಿ ನಡೆದ ವೇಳೆ ಅವರ ತಂದೆ ಡಿ.ಟಿ. ಲಕ್ಷ್ಮಣ ಅಸಹಾಯಕತೆಯಿಂದ ಹೀಗೆ ನುಡಿದರು.
‘ಕಾರ್ಯಕ್ರಮಕ್ಕೆ ವ್ಯವಸ್ಥೆ ಮಾಡಲು ಸಾಧ್ಯವಾಗದಿದ್ದರೆ, ಇಂತಹ ಸರ್ಕಾರ ಏತಕ್ಕೆ ಬೇಕು? ಇದ್ದ ಒಬ್ಬನೇ ಮಗನನ್ನು ಕಳೆದುಕೊಂಡಿದ್ದೇವೆ. ಈ ಅನಾಹುತಕ್ಕೆ ಸರ್ಕಾರವೇ ಕಾರಣ’ ಎಂದರು.
ಗ್ರಾಮಕ್ಕೆ ಭೇಟಿ ನೀಡಿ, ಭೂಮಿಕ್ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಸಂಸದ ಶ್ರೇಯಸ್ ಪಟೇಲ್ ಮಾತನಾಡಿ, ‘ಇಂಥ ಘಟನೆ ನಡೆಯಬಾರದಿತ್ತು. ಇದರಲ್ಲಿ ಅಧಿಕಾರಿಗಳ ವೈಫಲ್ಯವಿದೆ. ವಯಸ್ಸಿಗೆ ಬಂದ ಮಗನನ್ನು ಕಳೆದುಕೊಂಡ ದುಃಖ ಸಹಿಸಲು ಅಸಾಧ್ಯ’ ಎಂದು ಹೇಳಿದರು.
‘ಡಿ.ಟಿ. ಲಕ್ಷ್ಮಣ ಅವರು 20 ವರ್ಷಗಳ ಹಿಂದೆ ಬೆಂಗಳೂರಿಗೆ ಸ್ಥಳಾಂತರವಾಗಿದ್ದು, ಸಣ್ಯ ಉದ್ಯಮ ನಡೆಸುತ್ತಿದ್ದಾರೆ. ಭೂಮಿಕ್ 2ನೇ ವರ್ಷದ ಎಂಜಿನಿಯರಿಂಗ್ ಓದುತ್ತಿದ್ದ. ಬುಧವಾರ ಮಧ್ಯಾಹ್ನ 3.30ಕ್ಕೆ ಸ್ನೇಹಿತರ ಜೊತೆಗೂಡಿ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ತೆರಳಿದ್ದ. ಕಾಲ್ತುಳಿತದ ಮಾಹಿತಿ ಪಡೆದ ತಾಯಿ ಹಲವಾರು ಬಾರಿ ಭೂಮಿಕ್ ಮೊಬೈಲ್‌ಗೆ ಕರೆ ಮಾಡಿದ್ದರು. ಆದರೆ ಕರೆ ಸ್ವೀಕರಿಸಿರಲಿಲ್ಲ. ನಂತರ ಕರೆ ಸ್ವೀಕರಿಸಿದ ಅಪರಿಚಿತರೊಬ್ಬರು, ಮಗ ಮೃತಪಟ್ಟಿರುವ ಮಾಹಿತಿ ನೀಡಿದರು’ ಎಂದು ಸಂಬಂಧಿಕರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.