ಜಿ. ಪರಮೇಶ್ವರ
ಬೆಂಗಳೂರು: ಆರ್‌ಸಿಬಿ ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತ ಪ್ರಕರಣವು ಕ್ರೀಡಾ ಇತಿಹಾಸದಲ್ಲಿ ಕಪ್ಪು ದಿನವಾಗಿದೆ. ಏನೇ ಕ್ರಮ ಕೈಗೊಂಡರೂ ಹೋದ ಜೀವಗಳನ್ನು ಮರಳಿ ತರಲು ಆಗದು. ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಲಾಗುವುದು ಎಂದು ಗೃಹ ಸಚಿವ ಪರಮೇಶ್ವರ ಹೇಳಿದರು.
ವಿಧಾನಸಭೆಯಲ್ಲಿ ಈ ಕುರಿತ ನಡೆದ ಚರ್ಚೆಗೆ ಉತ್ತರ ನೀಡಿದ ಅವರು, ಸರ್ಕಾರ ಮೃತ 11 ಮಂದಿಯ ಕುಟುಂಬಗಳಿಗೆ ತಲಾ ₹25 ಲಕ್ಷ ಪರಿಹಾರ, ಗಾಯಗೊಂಡವರ ಸಂಪೂರ್ಣ ಚಿಕಿತ್ಸಾ ವೆಚ್ಚ ಭರಿಸಿದೆ. ನಿರ್ಲಕ್ಷ್ಯ ವಹಿಸಿದವರ ವಿರುದ್ಧ ಕ್ರಮಕೈಗೊಳ್ಳಲಾಗಿದೆ ಎಂದರು.
‘ಐಪಿಎಲ್ ಕಪ್ ಗೆದ್ದ ತಂಡಗಳನ್ನು ಆಯಾ ರಾಜ್ಯ ಸರ್ಕಾರಗಳು ಅಭಿನಂದಿಸಿವೆ. ಅಲ್ಲಿನ ಮುಖ್ಯಮಂತ್ರಿಗಳು ವಿಜಯೋತ್ಸವ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಇದೆಲ್ಲ ಪ್ರಾದೇಶಿಕ ಅಭಿಮಾನದಿಂದ ನಡೆಯುವ ಚಟುವಟಿಕೆಗಳು. ಕಾಲ್ತುಳಿತ ಪ್ರಕರಣಗಳು ಇತರೆ ರಾಜ್ಯಗಳಲ್ಲೂ ಸಾಕಷ್ಟು ನಡೆದಿವೆ. ಆದರೆ, ಅಂತಹ ಘಟನೆಗಳನ್ನು ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತಕ್ಕೆ ಸಮರ್ಥನೆಯಾಗಿ ಬಳಸಲು ಆಗದು’ ಎಂದರು.
‘ಇದು ಸರ್ಕಾರಿ ಪ್ರಾಯೋಜಿತ ಕೊಲೆ, ಮೃತಪಟ್ಟವರು ಮರಳಿ ಬರುವುದಿಲ್ಲ. ಸರ್ಕಾರ ಕ್ಷಮೆ ಕೇಳಬೇಕು. ಭದ್ರತೆ ನಂಬಿಕೊಂಡು ಬಂದು ಪ್ರಾಣ ಕಳೆದುಕೊಂಡ ಅವರ ಆತ್ಮಕ್ಕಾದರೂ ಶಾಂತಿ ಸಿಗಲಿ’ ಎಂದು ವಿರೋಧ ಪಕ್ಷಗಳ ಸದಸ್ಯರು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.