ADVERTISEMENT

ಶರಾವತಿ ಜಲವಿದ್ಯುತ್ ಯೋಜನೆ ಸರ್ಕಾರ ಪುನರ್‌ ವಿಮರ್ಶಿಸಲಿ: ಸ್ವರ್ಣವಲ್ಲಿ ಶ್ರೀ

​ಪ್ರಜಾವಾಣಿ ವಾರ್ತೆ
Published 29 ಜೂನ್ 2020, 14:51 IST
Last Updated 29 ಜೂನ್ 2020, 14:51 IST
ಶರಾವತಿ ನದಿ
ಶರಾವತಿ ನದಿ   

ಶಿರಸಿ: ಶರಾವತಿ ಭೂಗತ ಜಲವಿದ್ಯುತ್ ಯೋಜನೆ ಅನುಷ್ಠಾನವನ್ನು ಸರ್ಕಾರ ಪುನರ್ ವಿಮರ್ಶಿಸಬೇಕು ಎಂದು ಸೋಂದಾ ಸ್ವರ್ಣವಲ್ಲಿ ಮಠಾಧೀಶ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಒತ್ತಾಯಿಸಿದ್ದಾರೆ.

ಪರಿಸರ ಪರಿಣಾಮ ವರದಿ, ತಜ್ಞರ ಅಭಿಪ್ರಾಯ ಹಾಗೂ ತಜ್ಞರ ಲೇಖನಗಳ ದಾಖಲೆ ಸಹಿತ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಶ್ರೀಗಳು, ‘ಪಶ್ಚಿಮಘಟ್ಟದ ನದಿ, ಕಣಿವೆ ಸಂರಕ್ಷಣೆ ಬಗ್ಗೆ ನಿರಂತರ ಕಾಳಜಿ ವಹಿಸಲಾಗುತ್ತಿದೆ. ಪಶ್ಚಿಮಘಟ್ಟ ಹೃದಯ ಭಾಗವಾದ ಶರಾವತಿ ಕಣಿವೆಯಲ್ಲಿ ಭೂಗತ ಜಲವಿದ್ಯುತ್ ಯೋಜನೆ ಜಾರಿ ಮಾಡುವ ಬಗ್ಗೆ ರಾಜ್ಯ ಸರ್ಕಾರ ಮುಂದಾಗಿದೆ ಎಂಬ ವಿಷಯ ವರದಿಯಾಗಿದೆ.

ಈಗಾಗಲೇ ಶರಾವತಿ ಕಣಿವೆಯಲ್ಲಿ ಸಾಕಷ್ಟು ಯೋಜನೆಗಳು, ಅರಣ್ಯ ಒತ್ತುವರಿ, ಗಣಿಗಾರಿಕೆ, ಅಣೆಕಟ್ಟು ಯೋಜನೆಗಳು ಜಾರಿಯಾಗಿವೆ. ಇದರಿಂದ ಸಾಕಷ್ಟು ಅರಣ್ಯ ನಾಶವಾಗಿದೆ. ಭೂಕುಸಿತ ಉಂಟಾಗಿದೆ. ಪರಿಸರದ ಧಾರಣಾ ಸಾಮರ್ಥ್ಯ ಮುಗಿದಿದೆ. ಈ ಬಗ್ಗೆ ಈಗಾಗಲೇ ವಿಜ್ಞಾನಿಗಳು, ಪರಿಸರ ಸಂಘಟನೆಗಳು ಸರ್ಕಾರದ ಗಮನ ಸೆಳೆದಿವೆ. ಈ ಹಿನ್ನೆಲೆಯಲ್ಲಿ ಪರಿಸರ, ಜೀವವೈವಿಧ್ಯ, ಅರಣ್ಯ, ವನ್ಯಜೀವಿ ತಜ್ಞರು, ಸಂಸ್ಥೆಗಳ ಪ್ರತಿನಿಧಿಗಳ ಜತೆ ಯೋಜನೆಯ ಬಗ್ಗೆ ಸಮಾಲೋಚನಾ ಸಭೆ ನಡೆಸಬೇಕು’ ಎಂದು ಆಗ್ರಹಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.