ADVERTISEMENT

ಜೋಕರ್ ಎಲೆಯಂತಿರುವ ರಂಗಶಿಕ್ಷಕರನ್ನ ನೇಮಕ ಮಾಡಿಕೊಳ್ಳುತ್ತೇವೆ: ಸಚಿವ ಎನ್‌.ಮಹೇಶ್‌

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2018, 11:10 IST
Last Updated 2 ಆಗಸ್ಟ್ 2018, 11:10 IST
ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ರಂಗಕರ್ಮಿ ಶ್ರೀನಿವಾಸ ಜಿ.ಕಪ್ಪಣ್ಣ, ಸಚಿವ ಎನ್‌.ಮಹೇಶ್‌, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್. ಜಿ. ಸಿದ್ದರಾಮ, ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷ ಜೆ.ಲೋಕೇಶ್‌ ಇದ್ದರು -ಪ್ರಜಾವಾಣಿ ಚಿತ್ರ
ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ರಂಗಕರ್ಮಿ ಶ್ರೀನಿವಾಸ ಜಿ.ಕಪ್ಪಣ್ಣ, ಸಚಿವ ಎನ್‌.ಮಹೇಶ್‌, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್. ಜಿ. ಸಿದ್ದರಾಮ, ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷ ಜೆ.ಲೋಕೇಶ್‌ ಇದ್ದರು -ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಪ್ರಾಥಮಿಕ ಶಾಲಾ ಮಕ್ಕಳಲ್ಲಿ ಕ್ರಿಯಾಶೀಲತೆ ಹೆಚ್ಚಿಸುವುದಕ್ಕಾಗಿ ರಂಗ ಶಿಕ್ಷಕರ ಅಗತ್ಯವಿದೆ. ಶೀಘ್ರ ನೇಮಕ ಮಾಡುವ ಬಗ್ಗೆ ಕ್ರಮಕೈಗೊಳ್ಳುತ್ತೇನೆ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್.ಮಹೇಶ್ ಭರವಸೆ ನೀಡಿದರು.

ಕರ್ನಾಟಕ ರಂಗ ಶಿಕ್ಷಣ ಪದವೀಧರರ ಸಂಘ ನಗರದಲ್ಲಿ ಗುರುವಾರ ಆಯೋಜಿಸಿದ್ದ, ‘ರಾಜ್ಯಮಟ್ಟದ ರಂಗಶಿಕ್ಷಣ ಪದವೀಧರ ಸಮಾವೇಶ’ ಉದ್ಘಾಟಿಸಿ ಅವರು ಮಾತನಾಡಿದರು.

‘ಶಾಲೆಯನ್ನು ಪ್ರೀತಿಸುವ ಮನೋಭಾವ ಮಕ್ಕಳಲ್ಲಿ ಬರಬೇಕು. ಪಾಠ, ಶಿಕ್ಷಕನೆಂದರೆ ಮಕ್ಕಳು ಭಯಪಡುವಂತಾಗಬಾರದು. ಮಗು ತಾನಾಗಿಯೇ ಕಲಿಯುವ ವಾತಾವರಣವನ್ನು ಸೃಷ್ಟಿಸಬೇಕು. ಈಗ ನಾವು ಪಠ್ಯವನ್ನು ಅವರ ಮೇಲೆ ಹೇರುತ್ತಿದ್ದೇವೆ’ ಎಂದು ಅಭಿಪ್ರಾಯಪಟ್ಟರು.

ADVERTISEMENT

‘ರಂಗ ಶಿಕ್ಷಕರು ಇಸ್ಪೀಟು ಆಟದಲ್ಲಿನಜೋಕರ್ ಎಲೆ ಇದ್ದಂತೆ. ಎಲ್ಲದಕ್ಕೂ ಒಗ್ಗಿಕೊಳ್ಳುತ್ತಾರೆ. ಸದ್ಯ 1,200 ಮಂದಿ ರಂಗ ಶಿಕ್ಷಣ ಪದವಿ ಪಡೆದಿರುವವರಿದ್ದಾರೆ. ಇದರಲ್ಲಿ ಬೋಧಕರಾಗಿರುವುದು ಕೇವಲ 44 ಮಂದಿ. ಪ್ರತಿ ಶಾಲೆಗೂ ಒಬ್ಬ ರಂಗ ಶಿಕ್ಷಕನ ಅಗತ್ಯವಿದೆ ಎನ್ನುವುದನ್ನು ನಾನು ಮನಗಂಡಿದ್ದೇನೆ. ಶಾಸಕನಾಗುವ ಮೊದಲು ಕೊಡಗಿನಲ್ಲಿ ಸಮಾಜಕಲ್ಯಾಣ ಅಧಿಕಾರಿಯಾಗಿದ್ದಾಗ ಬೀದಿ ನಾಟಕಗಳಲ್ಲಿ ಅಭಿನಯಿಸುತ್ತಿದ್ದೆ’ ಎಂದು ಹೇಳಿದರು.

‘ಒಂದು ದೇಶ ಒಂದು ತೆರಿಗೆ ಮಾದರಿಯಲ್ಲಿ, ಒಂದು ದೇಶ ಒಂದು ಶಿಕ್ಷಣ ನಮ್ಮಲ್ಲಿಲ್ಲ. ಶಿಕ್ಷಣ ವ್ಯವಸ್ಥೆ ಈ ದೇಶದ ಸಾಮಾಜಿಕ-ಆರ್ಥಿಕ ಸ್ಥಿತಿಗತಿಯ ಪ್ರತಿಬಿಂಬದಂತಿದೆ. ಶ್ರೀಮಂತರಿಗೆ, ಬಡವರಿಗೆ ಭಿನ್ನವಾಗಿ ಶಿಕ್ಷಣ ದೊರೆಯುತ್ತಿದೆ. ಹೀಗಾಗಿ ಗ್ರಾಮೀಣ ಮಕ್ಕಳು ಹಿಂದುಳಿಯಬಾರದು ಎನ್ನುವ ಕಾರಣಕ್ಕೆ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಸ್ಪೋಕನ್‌ ಇಂಗ್ಲಿಷ್‌ ಕಲಿಸುವ ಆಲೋಚನೆಯಷ್ಟೇ ಸರ್ಕಾರಕ್ಕಿದೆ. ಕನ್ನಡ ಶಾಲೆಗಳನ್ನು ಮುಚ್ಚಿ, ಆಂಗ್ಲ ಮಾಧ್ಯಮ ಮಾಡುವ ಉದ್ದೇಶವಿಲ್ಲ’ ಎಂದು ಸ್ಪಷ್ಟಪಡಿಸಿದರು.

ಚಿತ್ರದುರ್ಗದ ಸಾಣೇಹಳ್ಳಿ ಮಠದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ‘ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರಿ ಶಾಲೆ ಮುಚ್ಚಲು ಪ್ರಮುಖ ಕಾರಣ, ನೀರಸ ಬೋಧನೆ. ರಂಗಶಿಕ್ಷಕರಿದ್ದರೆ ಶಾಲೆ ಚಟುವಟಿಕೆಯಿಂದ ಕೂಡಿರುತ್ತದೆ’ ಎಂದರು.

‘ವಸತಿ ಶಾಲೆಗಳಲ್ಲಾದರೂ ರಂಗಶಿಕ್ಷಕರ ನೇಮಕಾತಿಯನ್ನು ಶೀಘ್ರ ಪ್ರಾರಂಭಿಸಬೇಕು. ಸಾರ್ವಜನಿಕ ಶಿಕ್ಷಣ ಇಲಾಖೆಯ ಅಡಿಯಲ್ಲಿನ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ನೇಮಕ ಮಾಡುವ ಶಿಕ್ಷಕರಲ್ಲಿ ಶೇ 10ರಷ್ಟು ರಂಗಶಿಕ್ಷಕರ ನೇಮಕಕ್ಕೆ ಒತ್ತು ಕೊಡಬೇಕು’ ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.