ಬೆಂಗಳೂರು: ‘ಸಾಲಗಾರರ ಆದಾಯ ತೆರಿಗೆ ಪಾವತಿ ಬಾಕಿಯಿದೆ ಎಂಬ ಕಾರಣ ನೀಡಿ ಅವರ ಆಸ್ತಿಯನ್ನು ಹರಾಜು ಮೂಲಕ ಖರೀದಿ ಮಾಡಿದವರಿಗೆ ನೋಂದಣಿ ಮಾಡುವುದನ್ನು ನಿರಾಕರಿಸುವಂತಿಲ್ಲ’ ಎಂದು ಹೈಕೋರ್ಟ್ ಪ್ರಕರಣವೊಂದರಲ್ಲಿ ಸ್ಪಷ್ಟಪಡಿಸಿದೆ.
‘ಬ್ಯಾಂಕ್‌ನ ಹರಾಜಿನ ಮೂಲಕ ಜಮೀನು ಖರೀದಿಸಿದ್ದನ್ನು ನನ್ನ ಹೆಸರಿಗೆ ನೋಂದಣಿ ಮಾಡಿಕೊಟ್ಟಿಲ್ಲ’ ಎಂದು ಜೆ.ಪಿ.ನಗರದ ಉಪ ನೋಂದಣಾಧಿಕಾರಿ ಕ್ರಮವನ್ನು ಆಕ್ಷೇಪಿಸಿ ಬಸವನಗುಡಿಯ ಟಿ.ಭರತ್ ಗೌಡ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿದ್ದು ಈ ಕುರಿತಂತೆ ಆದೇಶಿಸಿದೆ.
‘ಉಪ ನೋಂದಣಿ ನಿಯಮ 171ರ ಅಡಿಯಲ್ಲಿ ಯಾವುದೇ ಉಲ್ಲಂಘನೆ ಆಗಿದ್ದಲ್ಲಿ ಮಾತ್ರವೇ ನೋಂದಣಿಗೆ ತಡೆ ಹಿಡಿಯಬೇಕು. ಇಲ್ಲವಾದಲ್ಲಿ ಸಬ್ ರಿಜಿಸ್ಟ್ರಾರ್ ಅವರಿಗೆ ನೋಂದಣಿ ನಿರಾಕರಿಸುವ ಅಧಿಕಾರ ಇಲ್ಲ. ಆದ್ದರಿಂದ, ಬಿಡ್‌ದಾರರ ಹೆಸರಿಗೆ ತಕ್ಷಣವೇ ಪ್ರಸ್ತಾವಿತ ಜಮೀನನ್ನು ನೋಂದಣಿ ಮಾಡಿಸಬೇಕು’ ಎಂದು ನ್ಯಾಯಪೀಠ ಆದೇಶಿಸಿದೆ.
‘ನೋಂದಣಿ ಕಾಯ್ದೆ ಮತ್ತು ರಾಜ್ಯ ಸರ್ಕಾರ ರೂಪಿಸಿರುವ ನೋಂದಣಿ ನಿಯಮಗಳ ಅನ್ವಯದಡಿ ಮಾತ್ರವೇ ಉಪ ನೋಂದಣಾಧಿಕಾರಿಗಳು ಕಾರ್ಯ ನಿರ್ವಹಿಸಬೇಕು. ಈ ಕುರಿತಂತೆ ಸಂಬಂಧಿಸಿದ ನೋಂದಣಿ ನಿಯಮಗಳ ಸುತ್ತೋಲೆ ಹೊರಡಿಸಬೇಕು’ ಎಂದು ನ್ಯಾಯಪೀಠ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.