ಬೆಂಗಳೂರು: ಔಷಧ ಅಂಗಡಿಗಳಲ್ಲಿ ಲಭ್ಯವಿರುವ ರೆಮ್‌ಡಿಸಿವಿರ್ ಪ್ರಮಾಣ ಮತ್ತು ಸಂಪರ್ಕ ಸಂಖ್ಯೆಗಳನ್ನು ಪ್ರತಿನಿತ್ಯ ಪ್ರಕಟಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ರೆಮ್‌ಡಿಸಿವಿರ್ ಔಷಧ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ ಎಂದು ಆರೋಪಿಸಿ ಅಸೋಸಿಯೇಷನ್ ಆಫ್ ಮ್ಯಾನೇಜ್ಮೆಂಟ್ ಆಫ್ ನರ್ಸಿಂಗ್ ಮತ್ತು ಅಲೈಡ್ ಹೆಲ್ತ್ ಸೈನ್ಸ್ ಸಂಸ್ಥೆಗಳ ಅಧ್ಯಕ್ಷ ಎಸ್.ಶಿವಕುಮಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ಮತ್ತು ನ್ಯಾಯಮೂರ್ತಿ ಅರವಿಂದಕುಮಾರ್ ಅವರನ್ನು ಒಳಗೊಂಡ ವಿಶೇಷ ನ್ಯಾಯಪೀಠ ಈ ಆದೇಶ ನೀಡಿತು.
ಕಾಳಸಂತೆಯಲ್ಲಿರೆಮ್‌ಡಿಸಿವಿರ್ ಮಾರಾಟ ಮತ್ತು ಪೂರೈಕೆ ಕೊರತೆ ಮೇಲ್ವಿಚಾರಣೆ ಮಾಡಲು ಔಷಧ ಸಗಟು ವ್ಯಾಪಾರ ಸ್ಥಳಗಳಿಗೆ ಆಗಾಗ ಭೇಟಿ ನೀಡಿ ಪರಿಶೀಲನೆ ನಡೆಸಲು ಅಧಿಕಾರಿಗಳು ಮತ್ತು ಎನ್‌ಜಿಒಗಳನ್ನು ಒಳಗೊಂಡ ಸಮಿತಿ ನೇಮಿಸುವಂತೆ ಸರ್ಕಾರಕ್ಕೆ ಪೀಠ ನಿರ್ದೇಶನ ನೀಡಿತು.
‘ಔಷಧ ಅಂಗಡಿಗಳಲ್ಲಿ ರೆಮ್‌ಡಿಸಿವಿರ್ ಔಷಧ ಎಷ್ಟಿದೆ ಎಂಬುದನ್ನು ಪ್ರತಿ 12 ಗಂಟೆಗೊಮ್ಮೆ ಪ್ರಚಾರ ನೀಡಬೇಕು. ಈ ಔಷಧಿ ದೊರೆಯುವ ಅಂಗಡಿಗಳ ವಿಳಾಸ, ಸಂಪರ್ಕ ಸಂಖ್ಯೆಯನ್ನೂ ಒದಗಿಸಬೇಕು’ ಎಂದು ಪೀಠ ತಿಳಿಸಿತು.
‘ಕೋವಿಡ್ ಹೊರತಾದ ರೋಗಿಗಳು ಆಸ್ಪತ್ರೆಗೆ ದಾಖಲಾಗಲು ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಕೇಳಲಾಗುತ್ತಿದೆ. ಆದ್ದರಿಂದ ಗರ್ಭಿಣಿ ಸ್ತ್ರೀಯರು, ಹಿರಿಯ ನಾಗರಿಕರು ವರದಿ ಪಡೆಯಲು ಪ್ರಯೋಗಾಲಯಗಳ ಮುಂದೆ ಸಾಲುಗಟ್ಟಿ ನಿಲ್ಲುವಂತಾಗಿದೆ. ಕೋವಿಡ್ ಲಕ್ಷಣ ಇಲ್ಲದವರು ಬೇರೆ ಕಾರಣಕ್ಕೆ ಆಸ್ಪತ್ರೆಗೆ ದಾಖಲಾಗಲು ಆರ್‌ಟಿಪಿಸಿಆರ್ ನೆಗೆಟಿವ್ ವರದಿ ನೀಡಲು ಒತ್ತಾಯಿಸದಂತೆ ನೀತಿ ರೂಪಿಸಬೇಕು’ ಎಂದು ಪೀಠ ನಿರ್ದೇಶನ ನೀಡಿತು.
‘ತಾಂತ್ರಿಕ ಸಲಹಾ ಸಮಿತಿ ಮತ್ತು ತಜ್ಞರ ಪ್ರಕಾರ ಮೇ ಮೊದಲ ಮತ್ತು ಎರಡನೇ ವಾರದಲ್ಲಿ ಕೋವಿಡ್ ಎರಡನೇ ಅಲೆ ಉತ್ತುಂಗಕ್ಕೆ ಏರುವ ಸಾಧ್ಯತೆ ಇದೆ. ಹಾಸಿಗೆ, ಆಮ್ಲಜನಕ ಲಭ್ಯತೆಯ ಬಗ್ಗೆ ಮೌಲ್ಯಮಾಪನ ಅಗತ್ಯವಿದೆ’ ಎಂದು ಅರ್ಜಿದಾರ ಸಂಸ್ಥೆ ಎಐಸಿಸಿಟಿಯು ಹೇಳಿತು.
‘ಎಐಸಿಸಿಟಿಯು ನೀಡಿರುವ ಅಂಕಿ–ಅಂಶ ಸರಿಯಾಗಿದ್ದರೆ, ಪರಿಸ್ಥಿತಿ ಆತಂಕಕಾರಿಯಾಗಿದೆ. ಇದರ ಆಧಾರದಲ್ಲಿ ಅಡ್ವೊಕೇಟ್ ಜನರಲ್ ಅವರು ಶುಕ್ರವಾರ ವರದಿ ಸಲ್ಲಿಸಬೇಕು’ ಎಂದು ಪೀಠ ತಿಳಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.