ADVERTISEMENT

ಡ್ರಗ್ಸ್ | ಸಿಸಿಬಿ ತನಿಖೆ ಚುರುಕು: ಪಾರ್ಟಿಗಳಿಗೆ ವಿಲ್ಲಾ, ಫಾರ್ಮ್‌ಹೌಸ್ ಬಾಡಿಗೆ

ಅಕುಲ್ ಬಾಲಾಜಿ, ಆರ್.ವಿ.ಯುವರಾಜ್ ಸೇರಿ ಮೂವರ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2020, 19:31 IST
Last Updated 19 ಸೆಪ್ಟೆಂಬರ್ 2020, 19:31 IST
ವಿಚಾರಣೆ ಎದುರಿಸಲು ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ಶನಿವಾರ ಬಂದ ನಿರೂಪಕ ಅಕುಲ್ ಬಾಲಾಜಿ – ಪ್ರಜಾವಾಣಿ ಚಿತ್ರ
ವಿಚಾರಣೆ ಎದುರಿಸಲು ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ಶನಿವಾರ ಬಂದ ನಿರೂಪಕ ಅಕುಲ್ ಬಾಲಾಜಿ – ಪ್ರಜಾವಾಣಿ ಚಿತ್ರ   

ಬೆಂಗಳೂರು: ಡ್ರಗ್ಸ್‌ ಜಾಲದ ಆರೋಪಿಗಳಿಗೆ ಪಾರ್ಟಿ ಆಯೋಜಿಸಲು, ರಿಯಾಲಿಟಿ ಶೋ ನಿರೂಪಕ ಅಕುಲ್ ಬಾಲಾಜಿ ಹಾಗೂ ‘ನೂರು ಜನ್ಮಕೂ’ ಸಿನಿಮಾದ ನಟ ಸಂತೋಷ್‌ಕುಮಾರ್ ಅವರು ತಮ್ಮ ಫಾರ್ಮ್‌ಹೌಸ್– ವಿಲ್ಲಾ ಬಾಡಿಗೆ ನೀಡಿದ್ದ ಸಂಗತಿ ಸಿಸಿಬಿ ತನಿಖೆಯಿಂದ ಹೊರಬಿದ್ದಿದೆ.

ಕಾಟನ್‌ಪೇಟೆ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಡಿ ಶನಿವಾರ ವಿಚಾರಣೆಗೆ ಹಾಜರಾಗಿದ್ದ ಅಕುಲ್ ಬಾಲಾಜಿ ಹಾಗೂ ಸಂತೋಷ್‌ಕುಮಾರ್ ಹಲವು ಮಾಹಿತಿಗಳನ್ನು ದಾಖಲೆ ಸಮೇತ ಸಿಸಿಬಿ ಪೊಲೀಸರ ಎದುರು ಬಾಯ್ಬಿಟ್ಟಿದ್ದಾರೆ. ಜಾಲದ ಪ್ರಮುಖ ಆರೋಪಿ ಎನ್ನಲಾದ ವೈಭವ್ ಜೈನ್ ಜತೆಗಿನ ತಮ್ಮ ಒಡನಾಟದ ಬಗ್ಗೆಯೂ ಹೇಳಿಕೆ ನೀಡಿದ್ದಾರೆ.

ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ವಿಚಾರಣೆ ನಡೆಸಿದ ಸಿಸಿಬಿ ಪೊಲೀಸರು ಇಬ್ಬರನ್ನೂ ವಾಪಸ್ ಕಳುಹಿಸಿದ್ದಾರೆ.

ADVERTISEMENT

‘ಚಿನ್ನದ ವ್ಯಾಪಾರಿಯ ಮಗನಾಗಿರುವ ಆರೋಪಿ ವೈಭವ್ ಜೈನ್, ಇನ್ನೊಬ್ಬ ಆರೋಪಿ ದೆಹಲಿಯ ವಿರೇನ್ ಖನ್ನಾ ನಿರ್ದೇಶನದಂತೆ ಕೆಲಸ ಮಾಡುತ್ತಿದ್ದ. ನಗರದಲ್ಲಿ ಸೂಕ್ತ ಜಾಗಗಳನ್ನು ಬಾಡಿಗೆ ಪಡೆದು ಪಾರ್ಟಿ ಆಯೋಜಿಸುತ್ತಿದ್ದ. ಅದೇ ಪಾರ್ಟಿಯಲ್ಲೇ ಡ್ರಗ್ಸ್ ಪೂರೈಕೆ ಆಗುತ್ತಿತ್ತು’ ಎಂದು ಸಿಸಿಬಿ ಅಧಿಕಾರಿಯೊಬ್ಬರು ಹೇಳಿದರು.

‘ನಟ ಸಂತೋಷ್‌ ಕುಮಾರ್ ವಿಮಾನ ನಿಲ್ದಾಣ ರಸ್ತೆಯಲ್ಲಿ ವಿಲ್ಲಾ ಹೊಂದಿದ್ದಾರೆ. ದೊಡ್ಡಬಳ್ಳಾಪುರ ಬಳಿ ಅಕುಲ್ ಬಾಲಾಜಿಗೆ ಸೇರಿದ್ದ ಫಾರ್ಮ್‌ಹೌಸ್ ಇದೆ. ಈ ವಿಲ್ಲಾ ಹಾಗೂ ಫಾರ್ಮ್‌ಹೌಸ್‌ಗಳನ್ನು ಆರೋಪಿ ವೈಭವ್ ಜೈನ್ ಬಾಡಿಗೆ ಪಡೆದು ಪಾರ್ಟಿ ನಡೆಸಿದ್ದ ಸಂಗತಿ ತನಿಖೆಯಿಂದ ಬಯಲಾಗಿತ್ತು. ಅದೇ ಕಾರಣಕ್ಕೆ ಇಬ್ಬರಿಗೂ ನೋಟಿಸ್ ನೀಡಿ ವಿಚಾರಣೆ ನಡೆಸಲಾಯಿತು’ ಎಂದೂ ವಿವರಿಸಿದರು.‌

ವೈಭವ್‌ನಿಂದ ವಂಚನೆ: ನಟ ಸಂತೋಷ್‌ಕುಮಾರ್, ‘ವೈಭವ್‌ನಿಂದ ನನಗೆ ವಂಚನೆ ಆಗಿದೆ. ಬಾಡಿಗೆ ಒಪ್ಪಂದ ಮಾಡಿಕೊಂಡು ಆತನಿಗೆ ವಿಲ್ಲಾ ನೀಡಿದ್ದೆ. ಆತ ನಡೆಸುವ ಅಕ್ರಮ ಗೊತ್ತಾಗಿ ಒಪ್ಪಂದ ರದ್ದು ಮಾಡಿಕೊಂಡಿದ್ದೇನೆ. ಆತನ ಸ್ನೇಹವನ್ನು ಬಿಟ್ಟಿದ್ದೇನೆ. ನನಗೂ ಆತನಿಗೂ ಯಾವುದೇ ಸಂಬಂಧವಿಲ್ಲ. ಆತನಿಗೆ ಕಾನೂನಿನಡಿ ಶಿಕ್ಷೆಯಾಗಲಿ. ತನಿಖೆಗೆ ನಾನು ಸಹಕರಿಸುತ್ತೇನೆ’ ಎಂದು ಹೇಳಿಕೆ ನೀಡಿರುವುದಾಗಿ ಗೊತ್ತಾಗಿದೆ.

ಅಕುಲ್ ಬಾಲಾಜಿ, ‘ಫಾರ್ಮ್‌ಹೌಸ್‌ ಬಾಡಿಗೆ ಬಗ್ಗೆ ಮಾತುಕತೆ ನಡೆದಿತ್ತು. ಒಪ್ಪಂದ ಪತ್ರ ಸಿದ್ಧಪಡಿಸುವ ಪ್ರಕ್ರಿಯೆ ಬಾಕಿ ಇತ್ತು. ಅಷ್ಟರಲ್ಲೇ ವೈಭವ್ ಜೈನ್ ಬಂಧನವಾಗಿದೆ. ಆತನ ಬಣ್ಣ ಈಗ ಗೊತ್ತಾಗಿದೆ’ ಎಂದು ಸಿಸಿಬಿ ಪೊಲೀಸರಿಗೆ ತಿಳಿಸಿರುವುದಾಗಿ ಮೂಲಗಳು ಹೇಳಿವೆ.

ಸಿಸಿಬಿ ಪೊಲೀಸ್ ಅಧಿಕಾರಿಯೊಬ್ಬರು, ‘ಮಾದಕವ್ಯಸನಿ ಆಗಿರುವ ವೈಭವ್‌ ಜೈನ್, ಮದ್ಯವರ್ತಿಯೂ ಆಗಿದ್ದ. ವಿಲ್ಲಾ ಬಾಡಿಗೆ ವಿಚಾರವಾಗಿ ನಟ ಸಂತೋಷ್‌ ಕುಮಾರ್ ಜತೆ ಜಗಳ ಮಾಡಿಕೊಂಡಿದ್ದ. ಅದಾದ ನಂತರ ಅಕುಲ್ ಬಾಲಾಜಿ ಫಾರ್ಮ್‌ಹೌಸ್ ಬಾಡಿಗೆ ಪಡೆಯಲು ಮುಂದಾಗಿದ್ದ. ಇದೇ ರೀತಿಯಲ್ಲೇ ಆತ ಹಲವು ಕಡೆ ಸ್ಥಳಗಳನ್ನು ಬಾಡಿಗೆ ಪಡೆದು ಪಾರ್ಟಿ ನಡೆಸಿದ್ದ ಪುರಾವೆಗಳು ಸಿಕ್ಕಿವೆ’ ಎಂದರು.

‘ವಿಲ್ಲಾದಲ್ಲಿ ಹಲವು ಬಾರಿ ಪಾರ್ಟಿ ನಡೆಸಲಾಗಿದೆ. ಒಪ್ಪಂದ ಪತ್ರಕ್ಕೆ ಸಹಿ ಆಗುವ ಮುನ್ನವೇ ಎರಡು ಬಾರಿ ಅಕುಲ್ ಅವರ ಫಾರ್ಮ್‌ಹೌಸ್‌ನಲ್ಲೂ ಆರೋಪಿಗಳು ಪಾರ್ಟಿ ಆಯೋಜಿಸಿದ್ದ ಮಾಹಿತಿ ಇದೆ’ ಎಂದೂ ಅಧಿಕಾರಿ ಹೇಳಿದರು.

ಯುವರಾಜ್‌ಗೆ ಆತ್ಮಿಯನಾಗಿದ್ದ ವೈಭವ್

ಕಾಂಗ್ರೆಸ್ ಮುಖಂಡ ಆರ್.ವಿ.ದೇವರಾಜ್ ಅವರ ಪುತ್ರ ಆರ್.ವಿ.ಯುವರಾಜ್‌ ಅವರಿಗೆ ವೈಭವ್ ಜೈನ್ ಆತ್ಮೀಯನಾಗಿದ್ದ. ಯುವರಾಜ್ ಅವರನ್ನು ಹಲವು ಪಾರ್ಟಿಗಳಿಗೆ ಆಹ್ವಾನಿಸಿದ್ದ. ಹೀಗಾಗಿ, ಯುವರಾಜ್ ಅವರನ್ನೂ ಸಿಸಿಬಿ ಪೊಲೀಸರು ವಿಚಾರಣೆಗೆ ಒಳಪಡಿಸಿದರು.

‘ವೈಭವ್ ನೀಡಿರುವ ಹೇಳಿಕೆ ಆಧರಿಸಿ, ಯುವರಾಜ್ ಅವರ ಹೇಳಿಕೆ ಪಡೆಯಲಾಗಿದೆ. ಎರಡನ್ನೂ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ವಿಚಾರಣೆ ಅಗತ್ಯವಿದ್ದರೆ ಪುನಃ ಕಚೇರಿಗೆ ಬರುವಂತೆಯೂ ಯುವರಾಜ್ ಅವರಿಗೆ ಹೇಳಿ ಕಳುಹಿಸಲಾಗಿದೆ’ ಎಂದು ಸಿಸಿಬಿ ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.