ನವದೆಹಲಿ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಗುಂಪಿನಲ್ಲಿ ಗುರುತಿಸಿಕೊಂಡಿರುವ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರು ರೈಲ್ವೆ ಹಾಗೂ ಜಲಶಕ್ತಿ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರನ್ನು ಬಿಜೆಪಿ ಕೇಂದ್ರ ಕಚೇರಿಯಲ್ಲಿ ಬುಧವಾರ ಭೇಟಿ ಮಾಡಿ ಸಮಾಲೋಚನೆ ನಡೆಸಿದರು.
ಉಭಯ ನಾಯಕರು ರಾಜಕೀಯ ವಿದ್ಯಮಾನಗಳ ಕುರಿತು ಚರ್ಚಿಸಿದರು. ಸೋಮಣ್ಣ ಅವರು ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಹೀಗಾಗಿ, ಈ ಭೇಟಿ ಬಿಜೆಪಿ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ರೇಣುಕಾಚಾರ್ಯ, ‘ನಾನು ಯಾರ ವಿರುದ್ಧವೂ ದೂರು ನೀಡಲು ಇಲ್ಲಿಗೆ ಬಂದಿಲ್ಲ. ಅವಕಾಶ ಸಿಕ್ಕರೆ ವರಿಷ್ಠರನ್ನು ಭೇಟಿ ಮಾಡುತ್ತೇನೆ. ಪಕ್ಷದ ವಿಷಯದ ಬಗ್ಗೆ ಬಹಿರಂಗ ಹೇಳಿಕೆ ನೀಡುವುದಿಲ್ಲ’ ಎಂದರು.
‘ಹುಟ್ಟುಹಬ್ಬದ ನೆಪದಲ್ಲಿ ಬಿಜೆಪಿ ಭಿನ್ನಮತೀಯ ನಾಯಕರು ಬಿ.ಎಸ್.ಯಡಿಯೂರಪ್ಪ ಅವರನ್ನು ಟೀಕೆ ಮಾಡುವ ಅಗತ್ಯ ಇರಲಿಲ್ಲ. ಈ ವಿಷಯದ ಬಗ್ಗೆ ಕೇಂದ್ರ ನಾಯಕರು ಗಮನ ಹರಿಸುತ್ತಾರೆ. ನಮ್ಮಲ್ಲಿ ಇರುವುದು ಒಂದೇ ಬಣ. ವಿಜಯೇಂದ್ರ ನೇತೃತ್ವದಲ್ಲಿ ಪಕ್ಷ ಸಂಘಟನೆ ಮಾಡುತ್ತೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.