ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ಮಂಜೂರು ಮಾಡಿದ್ದ ಜಾಮೀನು ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದ ಬೆನ್ನಲ್ಲೇ ನಟ ದರ್ಶನ್, ಅವರ ಗೆಳತಿ ಪವಿತ್ರಾಗೌಡ ಸೇರಿ ಏಳು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಆ ಪೈಕಿ ಐವರು ಗುರುವಾರ ರಾತ್ರಿ ಪರಪ್ಪನ ಅಗ್ರಹಾರ ಜೈಲು ಸೇರಿದರು.
ದರ್ಶನ್ ಅವರ ವ್ಯವಸ್ಥಾಪಕ ಆರ್.ನಾಗರಾಜ್, ಕಾರು ಚಾಲಕ ಲಕ್ಷ್ಮಣ್, ಉದ್ಯಮಿ ಪ್ರದೂಷ್ ರಾವ್ ಹಾಗೂ ಚಿತ್ರದುರ್ಗದ ಆಟೊ ಚಾಲಕರಾದ ಅನುಕುಮಾರ್ ಅಲಿಯಾಸ್ ಅನು, ಜಗದೀಶ್ ಅಲಿಯಾಸ್ ಜಗ್ಗ ಅವರನ್ನೂ ಈ ಪ್ರಕರಣದಲ್ಲಿ ಎರಡನೇ ಬಾರಿಗೆ ಬಂಧಿಸಲಾಯಿತು.
64ನೇ ಸಿಸಿಎಚ್ ನ್ಯಾಯಾಲಯದ ಕಾರ್ಯ ಕಲಾಪಗಳು ಮುಕ್ತಾಯ ಆಗಿದ್ದರಿಂದ ಕೋರಮಂಗಲದ ಎನ್‌ಜಿವಿಯಲ್ಲಿರುವ ನ್ಯಾಯಾಧೀಶರ ನಿವಾಸದಲ್ಲಿ ಐವರು ಆರೋಪಿಗಳನ್ನು ಗುರುವಾರ ರಾತ್ರಿಯೇ ಹಾಜರು ಪಡಿಸಲಾಯಿತು. ಆರೋಪಿಗಳನ್ನು ವಿಚಾರಣೆ ನಡೆಸಿದ ನ್ಯಾಯಾಧೀಶರು, 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದರು.
ನಂತರ ಭದ್ರತೆಯ ನಡುವೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಐವರನ್ನು ಕರೆದೊಯ್ದು ಬಿಡಲಾಯಿತು. ಜೈಲು ಅಧಿಕಾರಿಗಳು ಆರೋಪಿಗಳ ಹೆಸರು ನಮೂದಿಸಿಕೊಂಡು ವಿಚಾರಣಾಧೀನ ಕೈದಿಗಳ ಬ್ಯಾರಕ್‌ಗೆ ಕಳುಹಿಸಿದರು ಎಂದು ಮೂಲಗಳು ಹೇಳಿವೆ. ಅನುಕುಮಾರ್ ಹಾಗೂ ಜಗದೀಶ್ ಅವರನ್ನು ಶುಕ್ರವಾರ ಬೆಳಿಗ್ಗೆ ನ್ಯಾಯಾಧೀಶರ ಎದುರು ಹಾಜರು ಪಡಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಜಾಮೀನು ರದ್ದು ಆದೇಶ ಹೊರಬೀಳುವುದಕ್ಕೂ ಮುನ್ನ ಕೊಡಗು ಜಿಲ್ಲೆಯ ಸುಂಟಿಕೊಪ್ಪದ ಸ್ನೇಹಿತನ ಮನೆಯಿಂದ ತಮಿಳುನಾಡಿನ ಬನ್ನಾರಿಯಮ್ಮನ ಜಾತ್ರೆಗೆ ದರ್ಶನ್ ತೆರಳಿದ್ದರು. ಅಲ್ಲಿ ಕುದುರೆ ಖರೀದಿ ಸಂಬಂಧ ಮಾತುಕತೆ ನಡೆಸುತ್ತಿದ್ದರು. ಅದೇ ವೇಳೆ ಜಾಮೀನು ರದ್ದುಗೊಂಡಿರುವ ಮಾಹಿತಿ ಗೊತ್ತಾಗಿ ನಗರಕ್ಕೆ ವಾಪಸ್ ಬಂದರು. ಪತ್ನಿ ವಿಜಯಲಕ್ಷ್ಮಿ ಅವರಿಗೆ ಸೇರಿದ ಹೊಸಕೆರೆಹಳ್ಳಿಯ ಫ್ಲ್ಯಾಟ್‌ನಲ್ಲಿ ದರ್ಶನ್ ಅವರನ್ನು ಪೊಲೀಸರು ವಶಕ್ಕೆ ಪಡೆದು, ಬಂಧಿಸಿದರು. ದರ್ಶನ್ ಅವರು ಪ್ರಯಾಣಿಸಿದ್ದ ಜೀಪಿನ ದೃಶ್ಯವು ಟೋಲ್‌ವೊಂದರ ಸಿಸಿಟಿವಿ ಕ್ಯಾಮೆರಾದಲ್ಲೂ ಸೆರೆಯಾಗಿತ್ತು.
ದರ್ಶನ್ ಅವರನ್ನು ಬಂಧಿಸಲು ಪೊಲೀಸರು ಸಿದ್ಧತೆ ನಡೆಸಿ, ಹುಡುಕಾಟ ನಡೆಸುತ್ತಿದ್ದರು. ಏಳು ಪೊಲೀಸ್ ತಂಡ ರಚಿಸಲಾಗಿತ್ತು. ಟೋಲ್ ಹಾಗೂ ವಿವಿಧ ಜಂಕ್ಷನ್‌ಗಳಲ್ಲಿ ಪೊಲೀಸರು ನಿಗಾ ವಹಿಸಿದ್ದರು. ರಾಜರಾಜೇಶ್ವರಿನಗರದ ಮನೆ ಹಾಗೂ ಹೊಸಕೆರೆಹಳ್ಳಿಯ ಫ್ಲ್ಯಾಟ್ ಬಳಿಯೂ ಪೊಲೀಸರು ಕಾದಿದ್ದರು. ಗುರುವಾರ ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಪೊಲೀಸರ ಕಣ್ತಪ್ಪಿಸಿ ಬೇರೊಂದು ವಾಹನದಲ್ಲಿ ಬಂದಿದ್ದ ದರ್ಶನ್, ಫ್ಲ್ಯಾಟ್ ಒಳಗೆ ಹೋಗಿದ್ದರು. ಸ್ನೇಹಿತ ಧನ್ವೀರ್ ಜೀಪಿನಲ್ಲಿ ಬಂದಿದ್ದರು. ದರ್ಶನ್ ಬಂದಿದ್ದ ಮಾಹಿತಿ ತಿಳಿದು ಫ್ಲ್ಯಾಟ್‌ಗೆ ತೆರಳಿದ ಪೊಲೀಸರು, ಆರೋಪಿಯನ್ನು ವಶಕ್ಕೆ ಪಡೆದುಕೊಂಡರು. ಈ ಸಂದರ್ಭದಲ್ಲಿ ಪತ್ನಿ ವಿಜಯಲಕ್ಷ್ಮಿ ಫ್ಲ್ಯಾಟ್‌ನಲ್ಲಿ ಇದ್ದರು.
ಸುಪ್ರೀಂ ಕೋರ್ಟ್ ಆದೇಶ ಬರುವುದಕ್ಕೂ ಮುನ್ನ ಪವಿತ್ರಾಗೌಡ ಅವರು ಮನೆಯಲ್ಲಿ ತುಳಸಿ ಪೂಜೆ ನೆರವೇರಿಸಿ, ದೇವರ ಮೊರೆ ಹೋಗಿದ್ದರು. ಪೂಜೆಯ ಬಳಿಕ ದೇವಸ್ಥಾನಕ್ಕೆ ತೆರಳಿದ್ದರು. ಅಲ್ಲಿರುವಾಗಲೇ ಜಾಮೀನು ರದ್ದಾಗಿರುವ ಮಾಹಿತಿ ತಿಳಿದು ಕಣ್ಣೀರು ಹಾಕಿದರು. ಗಡಿಬಿಡಿಯಲ್ಲೇ ರಾಜರಾಜೇಶ್ವರಿನಗರದ ನಿವಾಸಕ್ಕೆ ವಾಪಸ್ಸಾಗಿದರು. ಅಷ್ಟರಲ್ಲಿ ನ್ಯಾಯಾಲಯದ ಆದೇಶದ ಪ್ರತಿಯೊಂದಿಗೆ ಮನೆಯ ಬಳಿಗೆ ಪೊಲೀಸರು ಬಂದಿದ್ದರು. ನ್ಯಾಯಾಲಯದಲ್ಲಿ ಶರಣಾಗತಿ ಆಗುವುದಾಗಿ ಆರೋಪಿ ಪರ ವಕೀಲರು ಮನವಿ ಮಾಡಿದರು. ಅದಕ್ಕೆ ಪೊಲೀಸರು ಅವಕಾಶ ನೀಡದೇ ಬಂಧಿಸಿ ಅನ್ನಪೂರ್ಣೇಶ್ವರಿ ನಗರ ಠಾಣೆಗೆ ಕರೆತಂದರು.
ಬಂಧನ ಪ್ರಕ್ರಿಯೆಯ ದೃಶ್ಯವನ್ನು ಪೊಲೀಸ್ ಸಿಬ್ಬಂದಿಯೊಬ್ಬರು ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡುತ್ತಿದ್ದರು. ಅವರ ಜತೆಗೆ ಪವಿತ್ರಾಗೌಡ ವಾಗ್ವಾದ ನಡೆಸಿದರು.
ದರ್ಶನ್ ಅವರನ್ನು ಅನ್ನಪೂರ್ಣೇಶ್ವರಿ ಠಾಣೆಗೆ ಕರೆತಂದಾಗ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
2024 ಜೂನ್ 8: ಚಿತ್ರದುರ್ಗದಿಂದ ರೇಣುಕಸ್ವಾಮಿ ಅಪಹರಣ ಪಟ್ಟಣಗೆರೆಯ ಶೆಡ್‌ಗೆ ಕರೆತಂದು ಹಲ್ಲೆ ಕೊಲೆ
ಜೂನ್ 9: ಸುಮನಹಳ್ಳಿಯ ಸತ್ವ ಅನುಗ್ರಹ ಅಪಾರ್ಟ್‌ಮೆಂಟ್‌ನ ಮೋರಿ ಬಳಿ ಮೃತದೇಹ ಪತ್ತೆ ಕೊಲೆ ಪ್ರಕರಣ ದಾಖಲು
ಜೂನ್ 11: ದರ್ಶನ್ ಪವಿತ್ರಾಗೌಡ ಸೇರಿ 17 ಮಂದಿ ಬಂಧನ
ಜೂನ್ 22: ಜೈಲು ಸೇರಿದ್ದ ದರ್ಶನ್ ಪವಿತ್ರಾಗೌಡ
ಆಗಸ್ಟ್ 24: ಪರಪ್ಪನ ಅಗ್ರಹಾರ ಜೈಲಿನ ಬ್ಯಾರಕ್ ಹೊರಗೆ ಕುರ್ಚಿಯಲ್ಲಿ ಕುಳಿತು ಟೀ ಕುಡಿಯುತ್ತಾ ಸಿಗರೇಟ್ ಸೇದುತ್ತಾ ಹರಟೆ ಹೊಡೆಯುತ್ತಿದ್ದ ದರ್ಶನ್ ರೌಡಿ ವಿಲ್ಸನ್ ಗಾರ್ಡನ್ ನಾಗ ಕುಳ್ಳ ಸೀನ ದರ್ಶನ್ ವ್ಯವಸ್ಥಾಪಕ ನಾಗರಾಜ್ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್
ಆಗಸ್ಟ್ 26: ಕರ್ತವ್ಯ ಲೋಪದ ಆರೋಪದಡಿ ಜೈಲಿನ ಮುಖ್ಯ ಅಧೀಕ್ಷಕ ಅಧೀಕ್ಷಕ ಮತ್ತು ಸಿಬ್ಬಂದಿ ಸೇರಿ ಒಂಬತ್ತು ಮಂದಿಯನ್ನು ಅಮಾನತು ಮಾಡಿದ್ದ ರಾಜ್ಯ ಸರ್ಕಾರ ಮೂರು ಪ್ರತ್ಯೇಕ ಎಫ್‌ಐಆರ್ ದಾಖಲು
ಆಗಸ್ಟ್ 27: ಬಳ್ಳಾರಿ ಜೈಲಿಗೆ ದರ್ಶನ್ ಸ್ಥಳಾಂತರ ಉಳಿದ ಆರೋಪಿಗಳೂ ರಾಜ್ಯದ ಬೇರೆ ಬೇರೆ ಕಾರಾಗೃಹಕ್ಕೆ ಸ್ಥಳಾಂತರ ಸೆಪ್ಟೆಂಬರ್ 4: 24ನೇ ಎಸಿಎಂಎಂ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆ
ಅಕ್ಟೋಬರ್ 30: ದರ್ಶನ್‌ಗೆ ವೈದ್ಯಕೀಯ ಚಿಕಿತ್ಸೆ ಪಡೆಯಲು ಆರು ವಾರಗಳ ಷರತ್ತುಬದ್ಧ ಮಧ್ಯಂತರ ಜಾಮೀನು ಮಂಜೂರು ಮಾಡಿದ್ದ ಹೈಕೋರ್ಟ್ ಬಳಿಕ ನಿಯಮಿತ ಜಾಮೀನು ಮಂಜೂರು
ನವೆಂಬರ್ 17: ಹೈಕೋರ್ಟ್ ನೀಡಿದ್ದ ಜಾಮೀನು ಆದೇಶ ರದ್ದು ಮಾಡುವಂತೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಗೃಹ ಇಲಾಖೆ ಸಮ್ಮತಿ
ಡಿಸೆಂಬರ್ 4: ಮಧ್ಯಂತರ ಜಾಮೀನು ರದ್ದು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಕೆ.
ಮೇ 21: ನ್ಯಾಯಾಲಯಕ್ಕೆ ಹೆಚ್ಚುವರಿ ದೋಷಾರೋಪ ಪಟ್ಟಿ ಸಲ್ಲಿಕೆ
ಜುಲೈ 24: ದರ್ಶನ್ ಮತ್ತು ಇತರೆ ಏಳು ಆರೋಪಿಗಳಿಗೆ ಜಾಮೀನು ನೀಡಿದ್ದ ಕರ್ನಾಟಕ ಹೈಕೋರ್ಟ್ ಕ್ರಮಕ್ಕೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿ ಆದೇಶವನ್ನು ಕಾಯ್ದಿರಿಸಿತ್ತು
ಆಗಸ್ಟ್ 14: ಏಳು ಆರೋಪಿಗಳ ಜಾಮೀನು ಆದೇಶ ರದ್ದು
ಬಂಧನ ಪ್ರಕ್ರಿಯೆಯನ್ನು ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡುತ್ತಿದ್ದ ಪೊಲೀಸ್ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದ ಪವಿತ್ರಾಗೌಡ
ದರ್ಶನ್ ಗೆಳತಿ ರಾಜರಾಜೇಶ್ವರಿ ನಗರ ಬೆಂಗಳೂರು – ಉತ್ತರ ಪ್ರದೇಶದ ಸಂಜಯ್ ಸಿಂಗ್ ಅವರು ಬೆಂಗಳೂರಿನಲ್ಲಿ ಐ.ಟಿ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿ ಇದ್ದರು. ಆಗ ಸಂಜಯ್ ಸಿಂಗ್ ಹಾಗೂ ಪವಿತ್ರಾ ಪ್ರೀತಿಸಿ ಮದುವೆ ಆಗಿದ್ದರು. 2013ರಲ್ಲಿ ಇಬ್ಬರು ವಿಚ್ಛೇದನ ಪಡೆದುಕೊಂಡಿದ್ದರು. ನಂತರ ಪವಿತ್ರಾಗೆ ಸಿನಿಮಾ ಸೆಟ್‌ವೊಂದರಲ್ಲಿ ದರ್ಶನ್ ಪರಿಚಯ ಆಗಿತ್ತು. ಹತ್ತು ವರ್ಷದಿಂದ ಆಪ್ತರಾಗಿದ್ದರು.
ಕೊಲೆಯಾದ ರೇಣುಕಸ್ವಾಮಿ ಪವಿತ್ರಾಗೌಡಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದರು. ಈ ವಿಷಯವನ್ನು ಸಹಾಯಕ ಪವನ್‌ಗೆ ತಿಳಿಸಿದ್ದರು. ಆರೋಪಿ ಪವನ್ ಅವರು ದರ್ಶನ್‌ಗೆ ಮಾಹಿತಿ ನೀಡಿದ್ದರು. ಕೃತ್ಯಕ್ಕೆ ಸಂಚು ರೂಪಿಸಿದ್ದ ಪವಿತ್ರಾ ಚಪ್ಪಲಿಯಲ್ಲಿ ರೇಣುಕಸ್ವಾಮಿ ಅವರ ಮೇಲೆ ಹಲ್ಲೆ ನಡೆಸಿದ್ದರು ಎಂಬುದು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖವಾಗಿದೆ.
ಬೆಂಗಳೂರಿನ ರಾಜರಾಜೇಶ್ವರಿನಗರದ ನಿವಾಸದಲ್ಲಿ ಆರೋಪಿ ಪವಿತ್ರಾಗೌಡ ಅವರನ್ನು ಪೊಲೀಸರು ಬಂಧಿಸಿದರು
ನಟ ರಾಜರಾಜೇಶ್ವರಿ ನಗರ ಬೆಂಗಳೂರು – ತನ್ನ ಗೆಳತಿಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ ಮಾಹಿತಿ ತಿಳಿದ ಮೇಲೆ ರೇಣುಕಸ್ವಾಮಿ ಅವರನ್ನು ಅಪಹರಿಸಲು ಸಂಚು ರೂಪಿಸಿದ್ದರು. ಚಿತ್ರದುರ್ಗದ ಅಭಿಮಾನಿಗಳಿಗೆ ಸೂಚಿಸಿದ್ದರು. ಪಟ್ಟಣಗೆರೆಯ ಶೆಡ್‌ಗೆ ರೇಣುಕಸ್ವಾಮಿ ಕರೆತಂದಾಗ ಕಾಲಿನಿಂದ ಒದ್ದಿದ್ದರು. ಪವಿತ್ರಾ ಅವರ ಕಾಲಿಗೆ ಬೀಳಿಸಿ ಕ್ಷಮೆ ಕೇಳಿಸಿದ್ದರು. ಅಲ್ಲದೇ ಕೊಲೆ ಪ್ರಕರಣ ಮುಚ್ಚಿ ಹಾಕಲು ನಾಲ್ಕು ಮಂದಿಯನ್ನು ಪೊಲೀಸರಿಗೆ ಶರಣಾಗುವಂತೆ ಸುಪಾರಿ ನೀಡಿದ್ದರು. ಈ ಅಂಶಗಳನ್ನು ದೋಷಾರೋಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ಆಟೊ ಚಾಲಕ ಚಿತ್ರದುರ್ಗ – ಜಗದೀಶ ಚಿತ್ರದುರ್ಗದಲ್ಲಿ ಆಟೊ ಚಾಲಕ. ರೇಣುಕಸ್ವಾಮಿಯನ್ನು ಅಪಹರಿಸಿಕೊಂಡು ಕಾರಿನಲ್ಲಿ ಬೆಂಗಳೂರಿಗೆ ಕರೆ ತಂದಿದ್ದರು.
ಜಗದೀಶ್
ಆಟೊ ಚಾಲಕ ಚಿತ್ರದುರ್ಗಚಿತ್ರದುರ್ಗದಲ್ಲಿ ಆಟೊ ಚಾಲಕ. ರೇಣುಕಸ್ವಾಮಿಯನ್ನು ಬೆಂಗಳೂರಿಗೆ ಅಪಹರಿಸಲು ಜಗದೀಶ್‌ಗೆ ನೆರವು.
ಅನುಕುಮಾರ್
ದರ್ಶನ್ ಕಾರು ಚಾಲಕ ಆರ್‌ಪಿಸಿ ಲೇಔಟ್ ಬೆಂಗಳೂರು– ದರ್ಶನ್ ಅವರ ಕಾರು ಚಾಲಕ. ಬೆಂಗಳೂರಿನ ಆರ್‌ಪಿಸಿ ಲೇಔಟ್‌ನಲ್ಲಿ ನೆಲಸಿದ್ದರು. ಕೃತ್ಯ ನಡೆದಿದ್ದ ಸ್ಥಳದಲ್ಲಿದ್ದರು. ಕೊಲೆ ಪ್ರಕರಣದಲ್ಲಿ ದರ್ಶನ್ ರಕ್ಷಣೆಗೆ ಮುಂದಾಗಿದ್ದರು. ಪೊಲೀಸ್ ಠಾಣೆಗೆ ತೆರಳಿ ಶರಣಾಗುವಂತೆ ನಾಲ್ವರಿಗೆ ಹಣ ನೀಡಿದ್ದರು.
ಎಂ.ಲಕ್ಷ್ಮಣ್
ದರ್ಶನ್ ಕಾರು ಚಾಲಕ ರಾಮಕೃಷ್ಣನಗರ ಮೈಸೂರು– ಮೈಸೂರು ರಾಮಕೃಷ್ಣ ನಗರದ ನಿವಾಸಿ. 15 ವರ್ಷಗಳಿಂದ ದರ್ಶನ್ ಅವರ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಮೈಸೂರಿನಲ್ಲಿರುವ ದರ್ಶನ್ ಅವರ ಫಾರಂ ಹೌಸ್‌ನಲ್ಲಿ ಇರುತ್ತಿದ್ದರು. ಪ್ರಕರಣ ಮುಚ್ಚಿ ಹಾಕಲು ಪ್ರಯತ್ನ. ರೇಣುಕಸ್ವಾಮಿ ಮೇಲೆ ಹಲ್ಲೆ ನಡೆಸಿದ್ದರು.
ಆರ್.ನಾಗರಾಜ್
ದರ್ಶನ್ ಸ್ನೇಹಿತ ಉದ್ಯಮಿ ಜೆಸಿ ರಸ್ತೆ ಗಿರಿನಗರ ಬೆಂಗಳೂರು – ಬೆಂಗಳೂರಿನ ಗಿರಿನಗರದ ನಿವಾಸಿ. ದರ್ಶನ್ ಸ್ನೇಹಿತ. ಕೊಲೆ ಪ್ರಕರಣದಲ್ಲಿ ದರ್ಶನ್ ರಕ್ಷಣೆ ಮಾಡಲು ₹30 ಲಕ್ಷ ಪಡೆದಿದ್ದ ಇವರು ಶರಣಾದ ನಾಲ್ವರಿಗೆ ಸಂದಾಯ ಮಾಡಿದ್ದರು.
ಪ್ರದೂಷ್
ನವದೆಹಲಿ: ದರ್ಶನ್ ಹಾಗೂ ಇತರ ಆರೋಪಿಗಳಿಗೆ ಜಾಮೀನು ನೀಡಿದ್ದ ಆದೇಶವನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಗೆ ಸಂಬಂಧಿಸಿದಂತೆ ಗುರುವಾರ ತೀರ್ಪು ನೀಡಿದ ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲಾ ಮತ್ತು ಆರ್. ಮಹಾದೇವನ್ ಅವರಿದ್ದ ಸುಪ್ರೀಂ ಕೋರ್ಟ್ ಪೀಠ ತೀಕ್ಷ್ಣವಾದ ಕೆಲವು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ.
ಆರೋಪಿಗಳು ಎಷ್ಟೇ ಪ್ರಭಾವಿಯಾಗಿದ್ದರೂ ಕಾನೂನಿಗಿಂತ ದೊಡ್ಡವರಲ್ಲ. ಈ ತೀರ್ಪು ನ್ಯಾಯದಾನ ವ್ಯವಸ್ಥೆಗೆ ಒಂದು ಬಲವಾದ ಸಂದೇಶ ನೀಡುತ್ತದೆ. ಆರೋಪಿಗಳಿಗೆ ಜೈಲಿನಲ್ಲಿ ವಿಶೇಷ ಅಥವಾ ಫೈವ್ ಸ್ಟಾರ್ ಆತಿಥ್ಯ ದೊರೆಯುತ್ತಿದೆ ಎಂದು ನಮಗೆ ಗೊತ್ತಾದ ಕ್ಷಣವೇ ಜೈಲು ಅಧೀಕ್ಷಕ ಸೇರಿದಂತೆ ಎಲ್ಲ ಅಧಿಕಾರಿಗಳನ್ನು ಅಮಾನತು ಮಾಡಲಾಗುವುದು
ಆರೋಪಿಯ ವರ್ತನೆ, ಪ್ರಭಾವ, ಜೈಲಿನ ನಿಯಮಗಳ ಉಲ್ಲಂಘನೆ ಹಾಗೂ ಆರೋಪಗಳ ಗಾಂಭೀರ್ಯವು ಅವರು ಜಾಮೀನಿಗೆ ಅರ್ಹವಾಗಿಲ್ಲ ಎಂಬುದನ್ನು ಸೂಚಿಸುತ್ತವೆ
ಪ್ರಸ್ತುತ ಪ್ರಕರಣದಲ್ಲಿ ದರ್ಶನ್ (ಎರಡನೇ ಆರೋಪಿ) ಅವರ ಸ್ಥಿತಿಗತಿ
ಯನ್ನು ಗಮನದಲ್ಲಿರಿಸಿಕೊಂಡು ಅವರಿಗೆ ಜಾಮೀನು ಮಂಜೂರು ಮಾಡಿರುವ ಆದೇಶವು ವಿವೇಚನಾ ಅಧಿಕಾರದ ಮತಿಗೆಟ್ಟ ದುರುಪಯೋಗ ಮತ್ತು ಕಾನೂನಾತ್ಮಕವಾಗಿ ಒಪ್ಪಲಾಗದಂತಹದ್ದು.
ನಾವು ಜಾಮೀನು ಮಂಜೂರು ಹಾಗೂ ರದ್ದತಿ ಎರಡನ್ನೂ ಪರಿಗಣಿಸಿದ್ದೇವೆ. ಈ ಪ್ರಕರಣದಲ್ಲಿ ಹೈಕೋರ್ಟ್‌ನ ತೀರ್ಪು ಗಂಭೀರ ಕಾನೂನು ನ್ಯೂನತೆಗಳನ್ನು ಒಳಗೊಂಡಿದೆ. ಈ ತೀರ್ಪು ಸೆಕ್ಷನ್ 302, 120ಬಿ ಮತ್ತು 34 ಸೆಕ್ಷನ್‌ಗಳ ಅಡಿಯಲ್ಲಿ ಜಾಮೀನು ಮಂಜೂರು ಮಾಡಲು ಯಾವುದೇ ವಿಶೇಷ ಅಥವಾ ಸ್ಪಷ್ಟ ಕಾರಣ ದಾಖಲಿಸಲು ವಿಫಲವಾಗಿದೆ.
ಇಂತಹ ಪ್ರಕರಣಗಳಲ್ಲಿ ಅಪರಾಧದ ಸ್ವರೂಪ ಮತ್ತು ಆಳ, ಆರೋಪಿಯ ಪಾತ್ರ ಮತ್ತು ವಿಚಾರಣೆಯಲ್ಲಿ ಮಧ್ಯಪ್ರವೇಶ ಮಾಡುವ ಅಪಾಯಗಳನ್ನು ಅರ್ಥ ಮಾಡಿಕೊಳ್ಳದೆ ಜಾಮೀನು ನೀಡುವುದು ವಿವೇಚನಾ ಅಧಿಕಾರದ ದುರುಪಯೋಗಕ್ಕೆ ಕಾರಣವಾಗುತ್ತದೆ.
ಜನಪ್ರಿಯತೆಯು ಶಿಕ್ಷೆಯಿಂದ ತಪ್ಪಿಸಿಕೊಳ್ಳುವ ಕವಚವಾಗಲು ಸಾಧ್ಯವಿಲ್ಲ
ಜಾಮೀನು ದೊರೆತ ತಕ್ಷಣವೇ 2ನೇ ಆರೋಪಿಯು ಸಾರ್ವಜನಿಕ ಕಾರ್ಯಕ್ರಮಗಳಿಗೆ ಮರಳಿರುವುದು, ವಿಚಾರಣಾ ಸಾಕ್ಷಿಗಳೊಂದಿಗೆ ವೇದಿಕೆ ಹಂಚಿಕೊಂಡಿರುವುದು, ಪೊಲೀಸ್ ಸಾಕ್ಷಿಗಳ ಮೇಲೆ ಪ್ರಭಾವ ಬೀರಲು ಯತ್ನಿಸಿರುವುದು... ಇವೆಲ್ಲವೂ ವಿಚಾರಣೆಯ ಸಮಗ್ರತೆಗೆ ಬೆದರಿಕೆ ಒಡ್ಡುತ್ತವೆ.
ಸೆಲೆಬ್ರಿಟಿಗಳು ಸಮಾಜದಲ್ಲಿ ಮಾದರಿಯಾಗಿರುತ್ತಾರೆ. ಅವರು ತಮ್ಮ ಪ್ರಸಿದ್ಧಿಯಿಂದ ಸಾಮಾಜಿಕ ಮೌಲ್ಯಗಳ ಮೇಲೆ ಗಣನೀಯ ಪ್ರಭಾವ ಬೀರುತ್ತಾರೆ. ಅಂತಹ ವ್ಯಕ್ತಿಯು ಸಂಚುಗಾರಿಕೆ ಮತ್ತು ಹತ್ಯೆಯಂತಹ ಗಂಭೀರ ಆರೋಪಗಳನ್ನು ಹೊಂದಿದ್ದರೂ ಅವರನ್ನು ಸಡಿಲ ಬಿಡುವುದು ಸಮಾಜಕ್ಕೆ ತಪ್ಪು ಸಂದೇಶ ನೀಡುತ್ತದೆ.
ಸಾಕ್ಷಿಗಳ ಮೇಲೆ ಬೆದರಿಕೆ, ವಿಧಿವಿಜ್ಞಾನ ಮತ್ತು ಪ್ರತ್ಯಕ್ಷ ಸಾಕ್ಷಿಗಳ ಮೇಲೆ ಒತ್ತಡವು ಜಾಮೀನಿನ ರದ್ದತಿಯ ಅಗತ್ಯತೆಯನ್ನು ಒತ್ತಿ ಹೇಳುತ್ತಿವೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದೇ ವ್ಯಕ್ತಿಯು ತನ್ನ ಸಾಮಾಜಿಕ ಸ್ಥಿತಿಗತಿ ಅಥವಾ ಆರ್ಥಿಕ ಸ್ಥಿತಿಗತಿಯ ಕಾರಣದಿಂದ ಕಾನೂನಾತ್ಮಕ ಉತ್ತರದಾಯಿತ್ವದಿಂದ ಹೊರಗಿರಲು ಸಾಧ್ಯವಿಲ್ಲ.
ಸಾಕ್ಷಿಗಳ ವಿಶ್ವಾಸಾರ್ಹತೆ ಮತ್ತು ಅವಲಂಬನೆಯನ್ನು ವಿಶ್ಲೇಷಿಸುವ ಅಧಿಕಾರವಿರುವುದು ವಿಚಾರಣಾ ನ್ಯಾಯಾಲಯಕ್ಕೆ ಮಾತ್ರ.
ಈ ಪ್ರಕರಣದ ಗಾಂಭೀರ್ಯ ಪರಿಗಣಿಸಿ, ವಿಚಾರಣೆ ತ್ವರಿತಗೊಳಿಸಬೇಕು ಮತ್ತು ಕಾನೂನಾತ್ಮಕವಾಗಿ ಸೂಕ್ತ ತೀರ್ಪು ನೀಡಬೇಕು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.