ಬೆಂಗಳೂರು: ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ರದ್ದುಗೊಂಡು ಮತ್ತೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಪವಿತ್ರಾಗೌಡ, ನಟ ದರ್ಶನ್ ಸೇರಿದಂತೆ ಐವರಿಗೆ ವಿಚಾರಣಾಧೀನ ಕೈದಿ ಸಂಖ್ಯೆಯನ್ನು ಜೈಲಧಿಕಾರಿಗಳು ನೀಡಿದ್ದಾರೆ.
ಪವಿತ್ರಾ ಅವರಿಗೆ ವಿಚಾರಣಾಧೀನ ಕೈದಿ 7313 (ಎ–1), ದರ್ಶನ್ ಅವರಿಗೆ 7314 (ಎ–2), ದರ್ಶನ್ ಅವರ ವ್ಯವಸ್ಥಾಪಕ ಆರ್.ನಾಗರಾಜ್‌ಗೆ 7315 (ಎ–11), ದರ್ಶನ್ ಕಾರು ಚಾಲಕ ಎಂ.ಲಕ್ಷಣ್‌ಗೆ 7316 (ಎ–12), ಉದ್ಯಮಿ ಪ್ರದೂಷ್ ರಾವ್ ಅವರಿಗೆ 7317 (ಎ–14) ಸಂಖ್ಯೆ ಅನ್ನು ನೀಡಲಾಗಿದೆ.
ಇದೇ ಪ್ರಕರಣದಲ್ಲಿ ಕಳೆದ ವರ್ಷದ ಜೂನ್‌ನಲ್ಲಿ ಬಂಧಿಸಿದ್ದಾಗ, ದರ್ಶನ್ ಅವರಿಗೆ ವಿಚಾರಣಾಧೀನ ಕೈದಿ ಸಂಖ್ಯೆ 6106 ಅನ್ನು ನೀಡಲಾಗಿತ್ತು. ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರವಾದ ಮೇಲೆ ಅಲ್ಲಿನ ದರ್ಶನ್‌ಗೆ ಕೈದಿ ನಂ. 511 ಅನ್ನು ನೀಡಲಾಗಿತ್ತು.
ಚಿತ್ರದುರ್ಗದ ಆರೋಪಿಗಳೂ ಜೈಲಿಗೆ: ಇದೇ ಪ್ರಕರಣದಲ್ಲಿ ಆಟೊ ಚಾಲಕರಾದ ಅನುಕುಮಾರ್ ಹಾಗೂ ಜಗ್ಗ ಅಲಿಯಾಸ್ ಜಗದೀಶ್ ಅವರನ್ನು ಚಿತ್ರದುರ್ಗದಲ್ಲಿ ಪೊಲೀಸರು ಗುರುವಾರ ಮಧ್ಯಾಹ್ನ ಬಂಧಿಸಿದ್ದರು. ಇಬ್ಬರನ್ನೂ ಶುಕ್ರವಾರ ಬೆಳಿಗ್ಗೆ ನಗರಕ್ಕೆ ಕರೆತಂದು ಕೋರಮಂಗಲದ ನ್ಯಾಯಾಧೀಶರ ಮನೆಯಲ್ಲಿ ಹಾಜರುಪಡಿಸಿದರು. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಧೀಶರು ಆದೇಶಿಸಿದರು. ಅವರನ್ನೂ ಜೈಲಿಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮೌನಕ್ಕೆ ಜಾರಿದ ದರ್ಶನ್: ‘ದರ್ಶನ್ ಸೇರಿ ಐವರನ್ನು ಗುರುವಾರ ರಾತ್ರಿ ‘ಅಡ್ಮಿಷನ್ ಕ್ವಾರಂಟೈನ್ ಬ್ಯಾರಕ್’ನಲ್ಲಿ ಇರಿಸಲಾಗಿತ್ತು. ಶುಕ್ರವಾರ ಬೆಳಿಗ್ಗೆ ತಿಂಡಿ ನೀಡಿದ ಬಳಿಕ ವಿಚಾರಣಾಧೀನ ಕೈದಿಗಳಿರುವ ಬ್ಯಾರಕ್‌ಗೆ ಸ್ಥಳಾಂತರ ಮಾಡಲಾಗಿದೆ. ದರ್ಶನ್ ಅವರು ಮೌನಕ್ಕೆ ಜಾರಿದ್ದಾರೆ ’ ಎಂದು ಮೂಲಗಳು ಹೇಳಿವೆ.
‘ಈ ಹಿಂದೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಇದ್ದಾಗ, ರೌಡಿ ವಿಲ್ಸನ್ ಗಾರ್ಡನ್ ನಾಗ, ಕುಳ್ಳ ಸೀನ, ನಾಗರಾಜ್ ಅವರೊಂದಿಗೆ ಬ್ಯಾರಕ್ ಹೊರಗೆ ಕುರ್ಚಿಯಲ್ಲಿ ಕುಳಿತು ಟೀ ಕುಡಿಯುತ್ತಾ, ಸಿಗರೇಟ್ ಸೇದುತ್ತಾ ಹರಟೆ ಹೊಡೆಯುತ್ತಿದ್ದ ಫೋಟೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಈ ಬಾರಿ ಆ ರೀತಿಯ ಲೋಪಗಳು ನಡೆಯದಂತೆ ಕ್ರಮ ಕೈಗೊಳ್ಳಲಾಗಿದೆ. ಎಲ್ಲ ಆರೋಪಿಗಳ ಮೇಲೆ ನಿಗಾ ವಹಿಸಲಾಗಿದೆ. ವಿಶೇಷ ಆತಿಥ್ಯ ಕೊಡಬಾರದೆಂದು ಸಿಬ್ಬಂದಿಗೆ ಸೂಚನೆ ನೀಡಲಾಗಿದೆ. ಲೋಪ ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಜೈಲಿನ ಅಧಿಕಾರಿಯೊಬ್ಬರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.