ADVERTISEMENT

ರೇಣುಕಸ್ವಾಮಿ ಪೋಷಕರಿಗೆ ಸಮನ್ಸ್: ಡಿ.17ರಂದು ವಿಚಾರಣೆಗೆ ಹಾಜರಾಗಲು ಸೂಚನೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2025, 23:30 IST
Last Updated 4 ಡಿಸೆಂಬರ್ 2025, 23:30 IST
ರೇಣುಕಸ್ವಾಮಿ 
ರೇಣುಕಸ್ವಾಮಿ    

ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ.17ರಂದು ನಡೆಯುವ ವಿಚಾರಣೆ ವೇಳೆ ಹಾಜರಿರುವಂತೆ ಸೂಚಿಸಿ ಮೃತನ ತಂದೆ ಹಾಗೂ ತಾಯಿ (ಸಾಕ್ಷಿ ಸಂಖ್ಯೆ 7 ಹಾಗೂ 8) ಅವರಿಗೆ ಇಲ್ಲಿನ 57ನೇ ಎಸಿಎಂಎಂ ನ್ಯಾಯಾಲಯವು ಸಮನ್ಸ್ ಜಾರಿಗೊಳಿಸಿದೆ.

‘ಸಮನ್ಸ್‌ ಜಾರಿಗೊಳಿಸಬೇಕು’ ಎಂದು ಕೋರಿ ತನಿಖಾಧಿಕಾರಿಗಳ ಪರವಾಗಿ ವಕೀಲರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಮಾನ್ಯ ಮಾಡಿದೆ.

ಪ್ರಕರಣದ ಒಟ್ಟು 272 ಸಾಕ್ಷಿಗಳ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ ಸಹಾಯಕ ಪ್ರಾಸಿಕ್ಯೂಟರ್(ಎಪಿಪಿ) ಸಚಿನ್‌ ಅವರು ಪ್ರಮುಖ ಸಾಕ್ಷಿಗಳಾಗಿರುವ ರೇಣುಕಸ್ವಾಮಿ ಅವರ ತಂದೆ–ತಾಯಿಯನ್ನು ಪಾಟಿ ಸವಾಲಿಗೆ ಒಳಪಡಿಸಬೇಕಿದೆ ಎಂದು ಕೋರಿದ್ದರು. ಪವಿತ್ರಾಗೌಡ, ನಟ ದರ್ಶನ್‌ ಸೇರಿದಂತೆ ಇತರೆ ಆರೋಪಿಗಳ ಪರ ವಕೀಲರು ಈ ಮನವಿಗೆ ಆಕ್ಷೇಪಿಸಿದ್ದರು. ದರ್ಶನ್ ಪರ ವಕೀಲ ಸುನಿಲ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್‌ ವಜಾಗೊಳಿಸಿದೆ.

ADVERTISEMENT

ಪ್ರದೋಷ್‍ಗೆ ಮಧ್ಯಂತರ ಜಾಮೀನು: ಪ್ರಕರಣದ 14ನೇ ಆರೋಪಿಯಾದ ಪ್ರದೋಷ್‍ ಅವರಿಗೆ ನ್ಯಾಯಾಲಯವು ನಾಲ್ಕು ದಿನಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.

ಅನಾರೋಗ್ಯದಿಂದ ಬಳಲುತ್ತಿದ್ದ ಪ್ರದೋಷ್‍ ಅವರ ತಂದೆ ಸುಬ್ಬರಾವ್ ಇತ್ತೀಚೆಗೆ ನಿಧನರಾಗಿದ್ದರು. ತಂದೆಯ ತಿಂಗಳ ತಿಥಿ ಕಾರ್ಯಕ್ಕೆಂದು ಪ್ರದೋಷ್‍ ಅವರಿಗೆ ಡಿ.4ರಿಂದ ಡಿ.7ರ ವರೆಗೆ ಜಾಮೀನು ನೀಡಲಾಗಿದೆ. ಈ ಹಿಂದೆ ಅಂತ್ಯಸಂಸ್ಕಾರ ಹಾಗೂ ಇತರೆ ಕಾರ್ಯಗಳನ್ನು ನಡೆಸಲು 20 ದಿನಗಳ ಮಧ್ಯಂತರ ಜಾಮೀನು ನೀಡಿತ್ತು.

ರೇಣುಕಸ್ವಾಮಿ 
ದರ್ಶನ್‍ಗೆ ಬ್ಯಾರಕ್‌ಗೆ ಟಿ.ವಿ
ಬುಧವಾರ ನಡೆದ ವಿಚಾರಣೆ ವೇಳೆ ದರ್ಶನ್ ಅವರು ‘ಬ್ಯಾರಕ್‌ನಲ್ಲಿ ಟಿ.ವಿ ಇಲ್ಲ. ಟಿ.ವಿ ಸೌಲಭ್ಯ ಕಲ್ಪಿಸಲು ಜೈಲಿನ ಅಧಿಕಾರಿಗಳಿಗೆ ಆದೇಶಿಸಬೇಕು’ ಎಂದು ಕೋರಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ನ್ಯಾಯಾಲಯವು ದರ್ಶನ್‍ ಇರುವ ಬ್ಯಾರಕ್‍ಗೆ ಟಿ.ವಿ ಅಳವಡಿಸುವಂತೆ ಮತ್ತು ಟಿ.ವಿ ಅಳವಡಿಕೆ ಮಾಡುವ ಸ್ಥಳದಲ್ಲಿ ಸಿ.ಸಿ ಟಿವಿ ಕ್ಯಾಮೆರಾ ಸಹ ಹಾಕುವಂತೆ ಜೈಲಿನ ಅಧಿಕಾರಿಗಳಿಗೆ ಸೂಚಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.