ADVERTISEMENT

ವೈದ್ಯಕೀಯ, ಪ್ಯಾರಾ ಮೆಡಿಕಲ್‌ ತರಗತಿ ಆರಂಭಕ್ಕೆ ಅನುಮತಿ: ಕೇಂದ್ರಕ್ಕೆ ಮನವಿ

ಪ್ರಧಾನಿ ಜೊತೆ ಡಿಸಿಎಂ ಅಶ್ವತ್ಥನಾರಾಯಣ–ಸಚಿವ ಸುಧಾಕರ್‌ ವಿಡಿಯೊ ಸಂವಾದ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2020, 21:45 IST
Last Updated 11 ಆಗಸ್ಟ್ 2020, 21:45 IST
ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌
ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌   

ಬೆಂಗಳೂರು: ‘ಕೋವಿಡ್ ಸಂಬಂಧಿತ ಚಟುವಟಿಕೆಗೆ ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ಅಂತಿಮ ವರ್ಷದ ಪೂರ್ವದಲ್ಲಿರುವ ವೈದ್ಯಕೀಯ ಮತ್ತು ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳನ್ನು ತೊಡಗಿಸುವ ಉದ್ದೇಶದಿಂದ, ಈ ವಿದ್ಯಾರ್ಥಿಗಳಿಗೆ ತರಗತಿ ಆರಂಭಿಸಲು ಅನುಮತಿ ನೀಡಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ರಾಜ್ಯ ಸರ್ಕಾರ ಮನವಿ ಮಾಡಿದೆ.

ಕೋವಿಡ್ ನಿರ್ವಹಣೆಗೆ ಸಂಬಂಧಿಸಿದಂತೆ ಸಕ್ರಿಯ ಪ್ರಕರಣಗಳು ಹೆಚ್ಚಿರುವ 10 ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಪ್ರಧಾನಿ ಮಂಗಳವಾರ ನಡೆಸಿದ ವಿಡಿಯೊ ಸಂವಾದದ ವೇಳೆ ಉಪ ಮುಖ್ಯಮಂತ್ರಿಯೂ ಆಗಿರುವ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಹಾಗೂವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ಈ ಬೇಡಿಕೆ ಮುಂದಿಟ್ಟಿದ್ದಾರೆ.

‘ವೈದ್ಯಕೀಯ ಕಾಲೇಜುಗಳಲ್ಲಿ ಪ್ರತಿವರ್ಷ 10 ಸಾವಿರ ಪದವಿ ಹಾಗೂ 2 ಸಾವಿರ ಸ್ನಾತಕೋತ್ತರ ಸೀಟುಗಳನ್ನು ಹೆಚ್ಚಿಸಬೇಕು. ಈ ವಿದ್ಯಾರ್ಥಿಗಳು ಕೋರ್ಸ್‌ ಮುಗಿದ ಬಳಿಕ ಕಡ್ಡಾಯವಾಗಿ ಸರ್ಕಾರಿ ಸೇವೆ ಸಲ್ಲಿಸಲು ಮಾರ್ಗಸೂಚಿ ಹೊರಡಿಸಬೇಕು. ಲಿಕ್ವಿಡ್ ಆಕ್ಸಿಜನ್ ಘಟಕಗಳ ಲಭ್ಯತೆ ಹಾಗೂ ವೈದ್ಯಕೀಯ ಸಂಸ್ಥೆಗಳಲ್ಲಿ ಆರೋಗ್ಯ ಕುರಿತ ಸಂಶೋಧನೆಯನ್ನೂ ಕಡ್ಡಾಯಗೊಳಿಸಬೇಕು’ ಎಂದೂ ಮನವಿ ಮಾಡಿದ್ದಾರೆ.

ADVERTISEMENT

ಸಚಿವರ ಜತೆ ಮಾತನಾಡಿದ ಪ್ರಧಾನಿ ಮೋದಿ ಅವರು, ‘‌ಸಕ್ರಿಯ ಪ್ರಕರಣಗಳು ಹೆಚ್ಚಿರುವ 10 ರಾಜ್ಯಗಳಲ್ಲಿ ಕೊರೊನಾವನ್ನು ಸಮರ್ಥವಾಗಿ ಎದುರಿಸಿದರೆ, ದೇಶವೇ ಈ ಹೋರಾಟದಲ್ಲಿ ಗೆದ್ದಂತೆ. ಮರಣ ಪ್ರಮಾಣ ಶೇ 1ಕ್ಕಿಂತ ಕಡಿಮೆ ಮಾಡಲು ನಾವು ಶ್ರಮಿಸಬೇಕಿದೆ. ಸಂಪರ್ಕ ಪತ್ತೆ, ಪರೀಕ್ಷೆ ಹಾಗೂ ಸರ್ವೇಕ್ಷಣಾ ವ್ಯವಸ್ಥೆ ಕೊರೊನಾ ನಿಯಂತ್ರಣದಲ್ಲಿ ಮುಖ್ಯ ಪಾತ್ರ ವಹಿಸಲಿದೆ’ ಎಂದರು.

ರಾಜ್ಯದಲ್ಲಿ ಕೋವಿಡ್‌ ನಿಯಂತ್ರಿಸಲು ತೆಗೆದುಕೊಂಡ ಕ್ರಮಗಳ ಕುರಿತು ಡಾ. ಸುಧಾಕರ್‌ ಮಾಹಿತಿ ನೀಡಿದರು. ಸರ್ವೇಕ್ಷಣೆ, ಪತ್ತೆ ಮತ್ತು ರೋಗ ಹರಡುವಿಕೆ ತಡೆಗಟ್ಟಲು ಹಾಗೂ ಜಾಗೃತಿ ಮೂಡಿಸುವ ಕಾರ್ಯಗಳನ್ನು ಕೈಗೊಳ್ಳಲು ಬೂತ್ ಮಟ್ಟದ ತಂಡಗಳನ್ನು ರಚಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

‘ಮರಣ ಪ್ರಮಾಣ ಕಡಿತಗೊಳಿಸುವುದು ನಮ್ಮ ಆದ್ಯತೆ. ಹೀಗಾಗಿ, ಪರೀಕ್ಷಾ ಪ್ರಮಾಣದಲ್ಲಿ ಹೆಚ್ಚಳ, ಸ್ಯಾಂಪಲ್ ಸಂಗ್ರಹ ಮತ್ತು ತ್ವರಿತ ಫಲಿತಾಂಶ ಒದಗಿಸುವುದು ಹಾಗೂ ಮನೆಯಿಂದ ಆಸ್ಪತ್ರೆಗೆ ಸ್ಥಳಾಂತರವಾಗುವ ಸಮಯದಲ್ಲಿ ಕಡಿತ ಇವೆಲ್ಲ ಕ್ರಮಗಳಿಂದ ಮರಣ ಪ್ರಮಾಣವನ್ನು ಆಗಸ್ಟ್ ವೇಳೆಗೆ ಶೇ 1.8ಗೆ ಇಳಿಸಲಾಗಿದೆ’ ಎಂದೂ ಹೇಳಿದರು.

ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳನಾಡು, ಬಿಹಾರ, ಗುಜರಾತ್, ಪಂಜಾಬ್, ಪಶ್ಚಿಮ ಬಂಗಾಲ, ಉತ್ತರ ಪ್ರದೇಶ, ತೆಲಂಗಾಣ ರಾಜ್ಯಗಳ ಮುಖ್ಯಮಂತ್ರಿಗಳು ಸಂವಾದದಲ್ಲಿ ಭಾಗವಹಿಸಿದ್ದರು.

ನಿಯಮ ಉಲ್ಲಂಘನೆ; ₹ 6.65 ಕೋಟಿ ದಂಡ: ರಾಜ್ಯದಲ್ಲಿ ವ್ಯಕ್ತಿಗತ ಅಂತರ ಕಾಪಾಡದೇ ಹಾಗೂ ಮಾಸ್ಕ್ ಧರಿಸದೆ ನಿಯಮ ಉಲ್ಲಂಘಿಸಿದ 2,05,029 ಪ್ರಕರಣಗಳನ್ನು ದಾಖಲಿಸಿ ₹ 6.65 ಕೋಟಿ ದಂಡ ಸಂಗ್ರಹಿಸಲಾಗಿದೆ. ಗೃಹ ನಿರ್ಬಂಧ ಉಲ್ಲಂಘಿಸಿದ 3,246 ಜನರನ್ನು ಮನೆಯಿಂದ ಸಾಂಸ್ಥಿಕ ಕ್ವಾರಂಟೈನ್‍ಗೆ ಸ್ಥಳಾಂತರಿಸಲಾಗಿದೆ. 5,821 ಪ್ರಕರಣಗಳಲ್ಲಿ ಎಫ್‍ಐಆರ್‌ ದಾಖಲಿಸಲಾಗಿದೆ ಎಂದು ಪ್ರಧಾನಿಗೆ ರಾಜ್ಯ ಸರ್ಕಾರ ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.