ADVERTISEMENT

ಚಿತ್ರದುರ್ಗ: ಪರಿಶಿಷ್ಟ ಜಾತಿ ಮೀಸಲಾತಿಗೆ ಕೋರಿಕೆ

ಮಡಿವಾಳ ಮಾಚಿದೇವ ಗುರುಪೀಠದ ಬಸವ ಮಾಚಿದೇವ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 6 ಜನವರಿ 2022, 12:13 IST
Last Updated 6 ಜನವರಿ 2022, 12:13 IST
ಚಿತ್ರದುರ್ಗದ ಮಡಿವಾಳ ಗುರುಪೀಠದಲ್ಲಿ ನಡೆದ ಕಾಯಕ ಜನೋತ್ಸವದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ‘ಮಾಚಿದೇವಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶಿವಮೂರ್ತಿ ಮುರುಘಾ ಶರಣರು, ಪುರುಷೋತ್ತಮಾನಂದಪುರಿ ಸ್ವಾಮೀಜಿ, ಶಾಂತವೀರ ಸ್ವಾಮೀಜಿ, ಬಸವ ಮಾಚಿದೇವ ಸ್ವಾಮೀಜಿ, ಮಾಜಿ ಶಾಸಕ ಡಿ.ಸುಧಾಕರ್‌, ಶಾಸಕ ಟಿ.ರಘುಮೂರ್ತಿ, ಮಾಜಿ ಸಂಸದ ಬಿ.ಎನ್‌.ಚಂದ್ರಪ್ಪ ಇದ್ದಾರೆ.
ಚಿತ್ರದುರ್ಗದ ಮಡಿವಾಳ ಗುರುಪೀಠದಲ್ಲಿ ನಡೆದ ಕಾಯಕ ಜನೋತ್ಸವದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ‘ಮಾಚಿದೇವಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶಿವಮೂರ್ತಿ ಮುರುಘಾ ಶರಣರು, ಪುರುಷೋತ್ತಮಾನಂದಪುರಿ ಸ್ವಾಮೀಜಿ, ಶಾಂತವೀರ ಸ್ವಾಮೀಜಿ, ಬಸವ ಮಾಚಿದೇವ ಸ್ವಾಮೀಜಿ, ಮಾಜಿ ಶಾಸಕ ಡಿ.ಸುಧಾಕರ್‌, ಶಾಸಕ ಟಿ.ರಘುಮೂರ್ತಿ, ಮಾಜಿ ಸಂಸದ ಬಿ.ಎನ್‌.ಚಂದ್ರಪ್ಪ ಇದ್ದಾರೆ.   

ಚಿತ್ರದುರ್ಗ: ರಾಜ್ಯದ ಅತ್ಯಂತ ಸಣ್ಣ ಮತ್ತು ತಳ ಸಮುದಾಯವಾಗಿರುವ ಮಡಿವಾಳರಿಗೆ ಪರಿಶಿಷ್ಟ ಜಾತಿ ಮೀಸಲಾತಿ ಸೌಲಭ್ಯ ಕಲ್ಪಿಸಬೇಕು ಎಂದು ಮಡಿವಾಳ ಮಾಚಿದೇವ ಗುರುಪೀಠದ ಬಸವ ಮಾಚಿದೇವ ಸ್ವಾಮೀಜಿ ಮನವಿ ಮಾಡಿದರು.

ಸ್ವಾಮೀಜಿ ಅವರ ನಾಲ್ಕನೇ ಪಟ್ಟಾಧಿಕಾರ, 38ನೇ ಜನ್ಮದಿನೋತ್ಸವದ ಅಂಗವಾಗಿ ಆಯೋಜಿಸಿದ ‘ಕಾಯಕ ಜನೋತ್ಸವ’ದಲ್ಲಿ ಸ್ವಾಮೀಜಿ ಮಾತನಾಡಿದರು. ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡುವಂತೆ ಕೋರಿಕೆ ಸಲ್ಲಿಸಿದರು.

‘ಮಡಿವಾಳ ಸಮುದಾಯದ ಪರಿಸ್ಥಿತಿ ಅತ್ಯಂತ ಶೋಚನೀಯವಾಗಿದೆ. ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸುವಂತೆ 40 ವರ್ಷಗಳಿಂದ ಸರ್ಕಾರದ ಎದುರು ಬೇಡಿಕೆ ಇಡಲಾಗುತ್ತಿದೆ. ಎರಡು ದಶಕಗಳಿಂದ ಹೋರಾಟ ನಡೆಯುತ್ತಿದೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸಮುದಾಯದ ಪರವಾಗಿ ಧ್ವನಿಯತ್ತಬೇಕು’ ಎಂದರು.

ADVERTISEMENT

‘ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ಸರಿಯಾಗಿ ಸಿಕ್ಕಿಲ್ಲ. ವಿಧಾನಸಭಾ ಚುನಾವಣೆಗೆ ಕೆಲವೆಡೆ ಕಾಂಗ್ರೆಸ್‌ ಅವಕಾಶ ಕಲ್ಪಿಸಿದರೂ ವಿಧಾನಸೌಧದಲ್ಲಿ ಸಮುದಾಯ ಪ್ರತಿನಿಧಿಸಲು ಸಾಧ್ಯವಾಗಿಲ್ಲ. ಮುಂಬರುವ ಚುನಾವಣೆಯಲ್ಲಿ ಕನಿಷ್ಠ ಐದು ಕ್ಷೇತ್ರದಲ್ಲಿ ಸಮುದಾಯದ ನಾಯಕರಿಗೆ ಟಿಕೆಟ್‌ ನೀಡಬೇಕು’ ಎಂದು ಮನವಿ ಮಾಡಿದರು.

‘ಮಾಚಿದೇವಶ್ರೀ’ ಪ್ರಶಸ್ತಿ ಸ್ವೀಕರಿಸಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ‘ಮೀಸಲಾತಿ ಭಿಕ್ಷೆಯಲ್ಲ ಹಕ್ಕು. ಜಾತಿ ವ್ಯವಸ್ಥೆ ಇರುವವರೆಗೂ ಮೀಸಲಾತಿ ಅಗತ್ಯವಿದೆ. ಸಾಮಾಜಿಕ ನ್ಯಾಯದಿಂದ ವಂಚಿತ ಆಗಿರುವ ಎಲ್ಲ ಜಾತಿಗಳೊಂದಿಗೆ ನಾನು ಇರುತ್ತೇನೆ. ಮಡಿವಾಳ ಸಮುದಾಯದ ಬೇಡಿಕೆ ಪರವಾಗಿ ಸರ್ಕಾರವನ್ನು ಒತ್ತಾಯಿಸುತ್ತೇನೆ. ಆದರೆ, ಇದಕ್ಕೆ ಸರ್ಕಾರ ಸ್ಪಂದಿಸುತ್ತದೆ ಎಂಬ ವಿಶ್ವಾಸವಿಲ್ಲ’ ಎಂದು ಹೇಳಿದರು.

‘ಕಾಡುಗೊಲ್ಲರು, ಕಾಡುಕುರುಬರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಪ್ರಯತ್ನಕ್ಕೆ ಸರ್ಕಾರ ಪೂರಕವಾಗಿ ನಡೆದುಕೊಳ್ಳುತ್ತಿಲ್ಲ. ವಾಲ್ಮೀಕಿ, ತಳವಾರ, ಪರಿವಾರ ಸಮುದಾಯದ ವಿಚಾರದಲ್ಲಿಯೂ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವ ಸೂಚನೆ ಸಿಕ್ಕಿದೆ. ಆಗ ಖಂಡಿತ ಸಮುದಾಯದ ಪರವಾಗಿ ಕೆಲಸ ಮಾಡುತ್ತೇನೆ’ ಎಂದು ಆಶ್ವಾಸನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.