ಬೆಂಗಳೂರು: ‘ಕಾಲೇಜಿನ ಒಂದು ವಿಷಯಕ್ಕೆ ಬೋಧಕ ಸಿಬ್ಬಂದಿ ಹುದ್ದೆಒಂದೇ ಇದ್ದರೆ ಅದನ್ನು ಪರಿಶಿಷ್ಟ ಜಾತಿ ಅಥವಾ ಪಂಗಡದ ಅಭ್ಯರ್ಥಿಗೆ ಮೀಸಲಿಡಲಾಗದು’ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
2007ರ ಸೆಪ್ಟೆಂಬರ್‌ನಿಂದ ಮಂಡ್ಯದ ಅನುದಾನಿತ ಪಿಯು ಕಾಲೇಜಿನ ಗಣಿತ ಉಪನ್ಯಾಸಕಿ ಎಂ.ಎಸ್. ರಶ್ಮಿ ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ‘ಇರುವ ಒಂದೇ ಹುದ್ದೆಯನ್ನು ಮೀಸಲಿರುವುದು ಕಾನೂನಿಗೆ ವಿರುದ್ಧ’ ಎಂದು ವಾದಿಸಿದ್ದಾರೆ.
‘ಗಣಿತ ವಿಷಯದ ಹುದ್ದೆಯನ್ನು ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಿರಿಸಿ 2019ರ ಸೆಪ್ಟೆಂಬರ್ 22ರಂದು ಅಧಿಸೂಚನೆ ಹೊರಡಿಸಲಾಗಿದೆ. ಒಂದೇ ಹುದ್ದೆಯನ್ನು ನಿರ್ದಿಷ್ಟ ಜಾತಿಗೆ ಮೀಸಲಿರಿಸಿದರೆ, ಅದು ಶೇ 100ರಷ್ಟು ಮೀಸಲಾತಿ ನಿಗದಿ ಮಾಡಿದಂತೆ ಆಗಲಿದೆ’ ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ, ಒಂದೇ ಹುದ್ದೆ ಇದ್ದಾಗ ಅದನ್ನು ನಿರ್ದಿಷ್ಟ ಸಮುದಾಯಕ್ಕೆ ಮೀಸಲಿಡಲು ಆಗದು ಎಂಬುದಕ್ಕೆಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಆದೇಶಗಳಿವೆ ಎಂದು ಉಲ್ಲೇಖಿಸಿತು.
‘ನೇಮಕಾತಿ ಪ್ರಕ್ರಿಯೆಗೆ ಹೊಸದಾಗಿ ಅಧಿಸೂಚನೆ ಹೊರಡಿಸಬೇಕು’ ಎಂದು ತಿಳಿಸಿದ ಪೀಠ, ‘ಪ್ರಕ್ರಿಯೆ ಪೂರ್ಣಗೊಳ್ಳುವ ತನಕ ಅರ್ಜಿದಾರರ ಸೇವೆಗೆ ತೊಂದರೆ ಆಗಬಾರದು’ ಎಂದು ಕಾಲೇಜಿಗೆ ನಿರ್ದೇಶನ ನೀಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.