ADVERTISEMENT

ಮತಾಂತರ ತಡೆಯಿರಿ, ಇಲ್ಲದಿದ್ದರೆ ದೇಶಾಂತರ ಮಾಡುತ್ತಾರೆ: ಕಾಡಸಿದ್ದೇಶ್ವರ ಶ್ರೀ

ಮಹಾರಾಷ್ಟ್ರದ ಕನ್ನೇರಿ ಮಠದಲ್ಲಿ ನಡೆದ ಸಂತ ಸಮಾವೇಶದಲ್ಲಿ ಅದೃಶ್ಯ ಕಾಡಸಿದ್ಧೇಶ್ವರ ಶ್ರೀ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2022, 9:06 IST
Last Updated 10 ಅಕ್ಟೋಬರ್ 2022, 9:06 IST
   

ಕನ್ನೇರಿ (ಕೊಲ್ಹಾಪುರ ಜಿಲ್ಲೆ): 'ಸ್ವಾಮೀಜಿಗಳು ಮತಾಂತರ ತಡೆಯಲು ಮುಂದಾಗಬೇಕು. ಇಲ್ಲವಾದರೆ ಮತಾಂತರ ರೀತಿಯಲ್ಲೇ ನಮ್ಮನ್ನು ದೇಶಾಂತರ ಮಾಡುತ್ತಾರೆ' ಎಂದು ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಕನ್ನೇರಿ ಸಿದ್ಧಗಿರಿ ಮಠಾಧೀಶ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಎಚ್ಚರಿಕೆ ನೀಡಿದರು.

ಮಠದ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಬೃಹತ್ 'ಸಂತ ಸಮಾವೇಶ'ದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

'ಬೊಮ್ಮಾಯಿ ಸರ್ಕಾರ ಮತಾಂತರ ನಿಷೇಧ ಕಾಯ್ದೆ ತಂದಿದ್ದು ಪುಣ್ಯ. ಇಲ್ಲವಾದರೆ ಮಠಗಳ ಮುಂಭಾಗದಲ್ಲಿ ಚರ್ಚ್, ಮಸೀದಿ ನಿರ್ಮಾಣ ಆಗುತ್ತಿದ್ದವು. ಈ ವಿಚಾರದಲ್ಲಿ ನಾನು ಬೇರೆ ಯಾರನ್ನೂ ದೂಷಿಸುವುದಿಲ್ಲ. ನಾವೇ ಎಲ್ಲಿಯೋ ಎಡವಿದ್ದೇವೆ. ಈಗ ಅದನ್ನು ಅರಿಯಬೇಕಿದೆ. ಬಿಟ್ಟು ಹೋದವರನ್ನು ಮರಳಿ ಮನೆಗೆ ಕರೆದುಕೊಂಡು ಬಂದು ಅಣ್ಣ- ತಮ್ಮರಂತೆ ಬಾಳಬೇಕಿದೆ' ಎಂದೂ ಸಲಹೆ ನೀಡಿದರು.

ADVERTISEMENT

'ದೇಶದಲ್ಲಿ 50 ಲಕ್ಷಕ್ಕೂ ಹೆಚ್ಚು ದೇವಸ್ಥಾನ, 10 ಲಕ್ಷಕ್ಕೂ ಹೆಚ್ಚು ಮಠಗಳು, ಆಶ್ರಮಗಳು ಇವೆ. ಒಂದೊಂದು ಮಠದಿಂದ ಒಂದೊಂದು ಹಳ್ಳಿ ದತ್ತು ತಗೆದುಕೊಂಡರೆ ದೇಶದ ಸುಧಾರಣೆ ವೇಗದಲ್ಲಿ ಆಗುತ್ತದೆ' ಎಂದು ಶ್ರೀಗಳು ಸಲಹೆ ಕೊಟ್ಟರು.

'ಶತಮಾನಗಳಿಂದಲೂ ಮಠಗಳನ್ನು ಬೆಳೆಸಿದ್ದು ರೈತರು. ಹಾಗಾಗಿ ಮಠದಲ್ಲಿ ಜಾತ್ರೆ, ಉತ್ಸವಗಳು ನಡೆದಾಗ ಎತ್ತು, ಚಕ್ಕಡಿ, ಕೃಷಿಯ ಪ್ರದರ್ಶನ ಆಗಬೇಕು. ರೈತರಿಗೆ ಒಳ್ಳೆಯ ಸಸಿಗಳು, ದೇಸಿ ಬೀಜಗಳನ್ನು ಮಠದಿಂದ ಕೊಡಬೇಕು. ಇದರಿಂದ ಮಠಕ್ಕೂ ಆದಾಯ ಬರುತ್ತದೆ, ಭಕ್ತರಿಗೂ ಒಳ್ಳೆಯ ಆಹಾರ ಸಿಗುತ್ತದೆ. ಮಠಗಳು ಪೂರೈಕೆ ಕೇಂದ್ರಗಳಾಗಿ ಬದಲಾಗಬೇಕು' ಎಂದರು.

ಯೋಗ್ಯತೆಯಿಂದ ಪೀಠಾಧಿಪತಿ ಆಗಲಿ:

'ಯಾವುದೇ ಜಾತಿ, ಪಂಥ, ವಂಶದ ಬೇರು ಹಿಡಿದು ಯಾರೂ ಸ್ವಾಮೀಜಿ ಆಗಬಾರದು. ತಮ್ಮ ವಿದ್ವತ್, ಯೋಗ್ಯತೆ ಮೇಲೆ ಸ್ವಾಮೀಜಿ ಆಗಬೇಕು‌' ಎಂದು ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.

'ಸ್ವಾಮೀಜಿಗಳು ಮಠಗಳ ಮಾಲೀಕರಲ್ಲ. ಯೋಗ್ಯತೆ ಇದ್ದವರನ್ನು ಮಾತ್ರ ಪೀಠದ ಮೇಲೆ ಕೂಡಿಸುವ ಹಕ್ಕು ಭಕ್ತರಿಗೆ ಇದೆ' ಎಂದರು.

'ಅನ್ನ- ವಸ್ತ್ರಕ್ಕಿಂತ ಆತ್ಮಾಭಿಮಾನ ಇಂದಿನ ದೊಡ್ಡ ಅವಶ್ಯಕತೆ. ಇದನ್ನು ಪೂರೈಸಲು ಮಠಗಳು ಮುಂದಾಗಬೇಕು. ಗುರು ಮತ್ತು ಭಕ್ತರ ನಡುವಿನ ಅಂತರ ಕಡಿಮೆ ಆಗಬೇಕು' ಎಂದೂ ಹೇಳಿದರು.

ಇದಕ್ಕೂ ಮುನ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಸಿಗೆ ನೀರುಣಿಸಿ ಸಮಾವೇಶ ಉದ್ಘಾಟಿಸಿದರು. ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಕರ್ನಾಟಕದ ಸಚಿವರಾದ ಗೋವಿಂದ ಕಾರಜೋಳ, ಮುರುಗೇಶ ನಿರಾಣಿ, ಸೋಮಶೇಖರ್, ಶಶಿಕಲಾ ಜೊಲ್ಲೆ, ಶಂಕರ ಪಾಟೀಲ ಮನೇನಕೊಪ್ಪ, ಶಾಸಕರಾದ ಶ್ರೀಮಂತ ಪಾಟೀಲ, ಕೆ.ಎಸ್.ಈಶ್ವರಪ್ಪ, ಸಂಸದ ಅಣ್ಣಾಸಾಹೇಬ ಜೊಲ್ಲೆ, ಮಹಾರಾಷ್ಟ್ರದ ಶಿಕ್ಷಣ ಸಚಿವ ಚಂದ್ರಕಾಂತ ಪಾಟೀಲ ಸೇರಿದಂತೆ ದೇಶದ ವಿವಿಧ ಮಠಗಳ 500ಕ್ಕೂ ಹೆಚ್ಚು ಶ್ರೀಗಳು, ಸಂತರು ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.