ADVERTISEMENT

ತಬರನ ಕಥೆಗೆ ಹೈಕೋರ್ಟ್‌ ಮುಕ್ತಿ; ರಕ್ತಕ್ಕಿಂತಲೂ ರೊಟ್ಟಿಯೇ ದುಬಾರಿ...!

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2022, 21:30 IST
Last Updated 2 ಆಗಸ್ಟ್ 2022, 21:30 IST
   

ಬೆಂಗಳೂರು: ತಬರನ ಕಥೆಯನ್ನು ನೆನಪಿಸುವಂತೆ ನಿವೃತ್ತ ಸರ್ಕಾರಿ ನೌಕರ ರೊಬ್ಬರು ಪಿಂಚಣಿಗಾಗಿ ಕಾಯುತ್ತಿರುವ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಕಿವಿ ಹಿಂಡಿರುವ ಹೈಕೋರ್ಟ್‌, ‘ರಕ್ತಕ್ಕಿಂತ ರೊಟ್ಟಿಯೇ ದುಬಾರಿಯಾಗಿರುವ ಇಂದಿನ ದಿನ ಮಾನದಲ್ಲಿ ಇಂತಹ ವಿದ್ಯಮಾನ ನಡೆಯುತ್ತಿರುವುದು ಸರ್ವಥಾ ಸಹನೀಯವಲ್ಲ’ ಎಂದು ಕಿಡಿಕಾರಿದೆ.

‘ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿ (ಕೆಎಟಿ) ನೀಡಿರುವ ಆದೇಶ ರದ್ದುಗೊಳಿಸಬೇಕು’ ಎಂದು ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಮತ್ತು ನ್ಯಾಯಮೂರ್ತಿ ಪಿ.ಕೃಷ್ಣ ಭಟ್ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿ ಈ ಕುರಿತು ಆದೇಶಿಸಿದೆ.

‘ಅರ್ಜಿದಾರ ಎಸ್.ಎಸ್‌. ಜಾಧವ್ (63) ಸುದೀರ್ಘ 35 ವರ್ಷ ಸರ್ಕಾರಿ ಸೇವೆ ಸಲ್ಲಿಸಿದ್ದಾರೆ. ಅವರಿಗೆ ಸೇವಾ ಸೌಲಭ್ಯ ಕಲ್ಪಿಸುವುದು ಎಂದರೆ ಸರ್ಕಾರ ಅವರಿಗೆ ಉಪಕಾರ ಮಾಡಿದಂತಲ್ಲ. ಜೀವನದ ಸಂಧ್ಯಾಕಾಲದಲ್ಲಿರುವ ಅವರು, ಪಿಂಚಣಿಗಾಗಿ ಇನ್ನೆಷ್ಟು ದಿನ ಕಾನೂನು ಹೋರಾಟ ಮಾಡಬೇಕು’ ಎಂದು ಖಾರವಾಗಿ ಪ್ರಶ್ನಿಸಿದೆ.

ADVERTISEMENT

‘ಎಂಟು ವಾರಗಳಲ್ಲಿ ಜಾಧವ್ ಅವರಿಗೆ ಸಂಭಾವ್ಯ ಪಿಂಚಣಿ ಹಣ ಮಂಜೂರು ಮಾಡಬೇಕು. ವಿಳಂಬ ಮಾಡಿದರೆ ಶೇ 2ರಷ್ಟು ಬಡ್ಡಿ ಪಾವತಿಸಬೇಕು. ಆ ಮೊತ್ತವನ್ನು ತಪ್ಪೆಸಗಿದ ಅಧಿಕಾರಿಯಿಂದ ವಸೂಲಿ ಮಾಡಬೇಕು‘ ಎಂದು ಸರ್ಕಾರಕ್ಕೆ ತಾಕೀತು ಮಾಡಿದೆ.

ಪ್ರಕರಣವೇನು?: ಜಾಧವ್ 1983ರಲ್ಲಿ ಕರ್ನಾಟಕ ನೀರಾವರಿ ನಿಗಮದ ಕಾರ್ಯಕಾರಿ ಎಂಜಿನಿಯರ್ ಕಚೇರಿಯಲ್ಲಿ ದಿನಗೂಲಿ ನೌಕರರಾಗಿ ನೇಮಕಗೊಂಡಿದ್ದರು. 1993ರಲ್ಲಿ ಅವರ ಸೇವೆ ಕಾಯಂಗೊಂಡಿತ್ತು. 2018 ರಲ್ಲಿ ನಿವೃತ್ತಿ ಹೊಂದಿದ್ದರು. ಸೇವೆಗೆ ಅನುಗುಣವಾಗಿ ಪಿಂಚಣಿಸೇರಿದಂತೆ ಸೇವಾ ಸೌಲಭ್ಯ ನೀಡಲು ಸರ್ಕಾರಕ್ಕೆ ಕೋರಿದ್ದರು. ಆದರೆ, 2013ರಲ್ಲಿ ಕಾಯಾಮಾತಿ ಆದೇಶ ಹಿಂಪಡೆದಿದ್ದ ಕಾರಣ ಸರ್ಕಾರ ಅವರಿಗೆ ಪಿಂಚಣಿ ನೀಡಿರಲಿಲ್ಲ. ಇದನ್ನು ಪ್ರಶ್ನಿಸಿ ಜಾಧವ್ ಕೆಎಟಿಗೆ ಅರ್ಜಿ ಸಲ್ಲಿಸಿದ್ದರು.

‘ಜಾಧವ್‌ ಅವರಿಗೆ ಎರಡು ತಿಂಗಳಲ್ಲಿ ಪಿಂಚಣಿ ಪಾವತಿಸಬೇಕು’ ಎಂದು ಕೆಎಟಿ 2021ರ ಅಕ್ಟೋಬರ್ 29ರಂದು ಸರ್ಕಾರಕ್ಕೆ ಆದೇಶಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.