ADVERTISEMENT

ಸರ್ಕಾರಕ್ಕೆ ಯಾವ ತೊಂದರೆಯೂ ಇಲ್ಲ, ಡಿಸಿ ಜೊತೆ ಡಿಶುಂ ಡಿಶುಂ ನಡೆದಿಲ್ಲ– ರೇವಣ್ಣ

​ಪ್ರಜಾವಾಣಿ ವಾರ್ತೆ
Published 9 ಮೇ 2019, 20:15 IST
Last Updated 9 ಮೇ 2019, 20:15 IST
   

ಬೆಂಗಳೂರು: ‘ರಾಜ್ಯದ ಮೈತ್ರಿ ಸರ್ಕಾರಕ್ಕೆ ಯಾವ ತೊಂದರೆಯೂ ಇಲ್ಲ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಐದು ವರ್ಷ ಆಡಳಿತಾವಧಿ ಪೂರ್ಣಗೊಳಿಸುತ್ತಾರೆ’ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಗುರುವಾರ ವಿಶ್ವಾಸ ವ್ಯಕ್ತಪಡಿಸಿದರು.

‘ಮತ್ತೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬೇಕೆಂಬ ಕಾಂಗ್ರೆಸ್ ಶಾಸಕರ ಹೇಳಿಕೆಗೆ ಪ್ರತಿಕ್ರಿಯಿಸುವುದಿಲ್ಲ. ಆ ವಿಚಾರಕ್ಕೆ ಸಂಬಂಧಪಟ್ಟಂತೆ ಪಕ್ಷದ ವರಿಷ್ಠರು ಗಮನಹರಿಸುತ್ತಾರೆ’ ಎಂದು ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.

‘ಗೊಂದಲಗಳನ್ನು ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚಿಸಿ ಪರಿಹರಿಸಿಕೊಳ್ಳಲಾಗುವುದು. ಪಕ್ಷದ ವರಿಷ್ಠರಾದ ಎಚ್.ಡಿ. ದೇವೇಗೌಡ, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕೊಟ್ಟ ಕೆಲಸವನ್ನು ಮಾಡುವುದಷ್ಟೆ ನನ್ನ ಕೆಲಸ’ ಎಂದರು. ‘ಉಪ ಮುಖ್ಯಮಂತ್ರಿ ಆಗುವ ಯೋಗವಿದೆಯೇ’ ಎಂಬ ಪ್ರಶ್ನೆಗೆ ಉತ್ತರಿಸಿ, ‘ಉಪವೂ ಇಲ್ಲ. ಮುಖ್ಯವೂ ಇಲ್ಲ. ಯೋಗ ಬಂದಾಗ ಯಾರೂ ತಡೆಯಲಾಗದು’ ಎಂದು ಪ್ರತಿಕ್ರಿಯಿಸಿದರು.

ADVERTISEMENT

‘ಮಾಧ್ಯಮಗಳಲ್ಲಿ ವರದಿಯಾಗಿರುವಂತೆ, ಹಾಸನ ಜಿಲ್ಲಾಧಿಕಾರಿ ಹಾಗೂ ನನ್ನ ಮಧ್ಯೆ ಯಾವುದೇ ಡಿಶುಂ ಡಿಶುಂ ಆಗಿಲ್ಲ. ನನಗೆ ವೈಯಕ್ತಿಕ ಹಿತಾಸಕ್ತಿ ಇಲ್ಲ. ಜಿಲ್ಲಾಧಿಕಾರಿ ಖಾತೆಯಲ್ಲಿ ₹ 10 ಕೋಟಿ ಇದೆ. ಕುಡಿಯುವ ನೀರಿಗೆ ₹ 5 ಕೋಟಿ ಒದಗಿಸಲಾಗಿದೆ. ಬರಗಾಲ ಇರುವುದರಿಂದ ಬರ ಪರಿಹಾರ ಕಾಮಗಾರಿ, ಕುಡಿಯುವ ನೀರು ವಿಚಾರದಲ್ಲಿ ವಿಷಯ ಚರ್ಚೆಯಾಗಿತ್ತು. 15 ದಿನ ಕಳೆದರೂ ಹಣ ಬಿಡುಗಡೆ ಮಾಡಿಲ್ಲ ಎಂದು ಶಾಸಕರು ತಿಳಿಸಿದಾಗ ಆ ವಿಚಾರ ಪ್ರಸ್ತಾಪಿಸಲಾಗಿದೆ ಅಷ್ಟೇ’ ಎಂದು ಹೇಳಿದರು.

‘ಆಲೂಗಡ್ಡೆ ಬಿತ್ತನೆ ಮೇ 15ರಿಂದ ಆರಂಭವಾಗುತ್ತದೆ. ಬಿತ್ತನೆ ಬೀಜ, ಔಷಧಿ, ಗೊಬ್ಬರಕ್ಕೆ ತೊಂದರೆಯಾಗದಂತೆ ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳಬೇಕು. ಈ ಹಿಂದೆ ಲಾಠಿ ಚಾರ್ಜ್‌ ಆಗಿತ್ತು. ಅಂತಹ ಘಟನೆ ಪುನರಾವರ್ತನೆ ಆಗಬಾರದು ಎಂಬುದಷ್ಟೇ ಕಾಳಜಿ’ ಎಂದರು.

‘ಕಾನೂನು ಬಿಟ್ಟು ಕೆಲಸ ಮಾಡಿ ಎಂದು ಯಾರಿಗೂ ಹೇಳಲಿಲ್ಲ. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಜಿಲ್ಲಾಧಿಕಾರಿ ಸಭೆ ನಡೆಸಿ ಕ್ರಮ ಕೈಗೊಂಡರೂ ಅಭ್ಯಂತರವಿಲ್ಲ. ಒಂದು ವೇಳೆ ಜಿಲ್ಲಾಧಿಕಾರಿ ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ ಮೇಲಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ’ ಎಂದರು.

‘ತುಂಡು ಗುತ್ತಿಗೆ ಕಾಮಗಾರಿ ಎಲ್ಲಿಯೂ ನೀಡಿಲ್ಲ. ಸಿಂಗಲ್ ಟೆಂಡರ್ ಇರುವುದರಿಂದ ಮರು ಟೆಂಡರ್ ಕರೆಯಲು ಸೂಚಿಸಲಾಗಿದೆ. ಗುಣಮಟ್ಟದಲ್ಲಿ ಲೋಪವಾದರೆ ಅಧಿಕಾರಿಗಳೇ ಹೊಣೆ ಎಂಬ ಎಚ್ಚರಿಕೆಯನ್ನೂ ನೀಡಲಾಗಿದೆ’ ಎಂದು ರೇವಣ್ಣ ವಿವರಿಸಿದರು.

‘ಪದೇ ಪದೇ ಚರ್ಚೆ ಬೇಡ’
ಬೆಂಗಳೂರು:
‘ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗಬೇಕೆಂಬ ಹೇಳಿಕೆಯಿಂದ ಸಮ್ಮಿಶ್ರ ಸರ್ಕಾರದಲ್ಲಿ ವಾತಾವರಣ ಹದಗೆಡಲಿದೆ. ಹೀಗಾಗಿ, ಯಾರೂ ಈ ವಿಷಯವನ್ನು ಪದೇ ಪದೇ ಚರ್ಚಿಸಬಾರದು’ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಮನವಿ ಮಾಡಿದರು.

‘ಸದ್ಯ ಕುಮಾರಸ್ವಾಮಿ ಮುಖ್ಯಮಂತ್ರಿ. ಮುಂದಿನ ನಾಲ್ಕು ವರ್ಷಗಳವರೆಗೂ ಅವರೇ ಆ ಹುದ್ದೆಯಲ್ಲಿರುತ್ತಾರೆ. ಯಾವುದೇ ಪಕ್ಷಗಳ ಮುಖಂಡರು ಗೊಂದಲಕಾರಿ ಹೇಳಿಕೆ ನೀಡಬಾರದು’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.